ಉಡುಪಿ ಜಿಲ್ಲೆ ಮತ್ತು ಹೊರರಾಜ್ಯದ ವಿವಿಧ ಕಡೆಗಳಲ್ಲಿ ಮನೆಕಳ್ಳತನದ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಅಂತರರಾಜ್ಯ ಕಳ್ಳರನ್ನು ಬ್ರಹ್ಮಾವರ ಪೊಲೀಸ್ ರು ಬಂಧಿಸಿದ್ದಾರೆ. ಹೆಬ್ರಿ ಶಿವಪುರ ಕೆರೆಬೆಟ್ಟಿನ ದಿಲೀಪ್ ಶೆಟ್ಟಿ, ತಮಿಳುನಾಡು ಮೂಲದ ರಾಜನ್ ಮತ್ತು ಷಷ್ಮುಗಂ ಬಂಧಿತ ಆರೋಪಿಗಳು. ಬ್ರಹ್ಮಾವರ ಸಮೀಪದ ಹಾವಂಜೆ ಗ್ರಾಮದ ಶೇಡಿಗುಳಿ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತುದ್ದ ಸ್ಯಾಂಟ್ರೋ ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಾರಿನಲ್ಲಿ ಮನೆಕಳ್ಳತನಕ್ಕೆ ಬಳಸುವ ರಾಡ್, ಬೆಳ್ಳಿಯ ಅಭರಣಗಳು ಪತ್ತೆಯಾಗಿದೆ. ಹೆಬ್ರಿ ಮೂಲದ ದಿಲೀಪ್ ಶೆಟ್ಟಿ ಹೊರರಾಜ್ಯದ ಕಳ್ಳರಾದ ರಾಜನ್ ಕುಟ್ಟಿ ಮತ್ತು ಇನ್ನೋರ್ವ ಸಜಿತ್ ವರ್ಗಿಸ್ ಜೊತೆಗೂಡಿ ಎರಡು ಕಾರುಗಳನ್ನು ಬಳಸಿ ಬೆಂಗಳೂರಿನಿಂದ ಬಂದು ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಳ್ಳತನ ನಡೆಸಿ ಪರಾರಿಯಾಗುತ್ತಿದ್ದರು ಎನ್ನುವ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ದಿಲೀಪ್ ಮತ್ತು ರಾಜನ್ ಜಿಲ್ಲೆಯ ಬ್ರಹ್ಮಾವರದಲ್ಲಿ ಎರಡು ಕಡೆ, ಕಾರ್ಕಳ ವ್ಯಾಪ್ತಿಯಲ್ಲಿ ಒಂದು ಅಜೆಕಾರು ವ್ಯಾಪ್ತಿಯ ಎರಡು ಮನೆಗಳಲ್ಲಿ ಕಳ್ಳತನ ನಡೆಸಿ, ಕದ್ದ ವಸ್ತುಗಳನ್ನು ಕೊಯಮತ್ತೂರು ಮತ್ತು ಬೆಂಗಳೂರಿನಲ್ಲಿ ಚಿನ್ನಾಭರಣ ಅಡವಿಡುತ್ತಿದ್ದರು. ದಿಲೀಪ್ ಶೆಟ್ಟಿ ತನ್ನ 19 ನೇ ವರ್ಷದಿಂದಲೇ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಈತನ ಮೇಲೆ ಪ್ರಕರಣ ದಾಖಲಾಗಿದೆ. ಈ ಹಿಂದೆ ಬೆಂಗಳೂರು ಹಾಸನ ಭಾಗದಲ್ಲಿ ಸುಲಿಗೆ, ಅಬಕಾರಿ, ಹನಿಟ್ರ್ಯಾಪ್ ಮತ್ತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣದ ದಾಖಲಾಗಿದ್ದು, ಜಾಮೀನು ರಹಿತ ವಾರೆಂಟ್ ನಲ್ಲಿದ್ದ. ಸದ್ಯ ಆರೋಪಿಗಳಿಂದ 13 ಲಕ್ಷ ಬೆಲೆಬಾಳುವ ಚಿನ್ನ, 20 ಸಾವಿರ ಮೌಲ್ಯದ ಬೆಳ್ಳಿ, ಕೃತ್ಯಕ್ಕೆ ಬಳಸುತ್ತಿದ್ದ ಎರಡು ಕಾರು ಸೇರಿದಂತೆ 20 ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ. ಕುಖ್ಯಾತ ಕಳ್ಳರ ಬಂಧಿಸಿದ ಬ್ರಹ್ಮಾವರ ಪೊಲೀಸರ ತಂಡವನ್ನು ಉಡುಪಿ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಶ್ಲಾಘಿಸಿದ್ದಾರೆ.