ಬ್ರಿಟನ್ನಿನ ಪ್ರಧಾನಿಯಾಗಲು ಇನ್ನಿರುವುದು ಒಂದೇ ಹೆಜ್ಜೆ ಎನ್ನುವಷ್ಟು ಆ ಪದವಿಯ ಹತ್ತಿರ ತಲುಪಿರುವ ರಿಷಿ ಸುನಾಕ್ ಭಾರತದಲ್ಲಿ ಐಟಿ ಕ್ರಾಂತಿಯ ಪಿತಾಮಹ ನಾರಾಯಣ ಮೂರ್ತಿಯವರ ಮಗಳ ಗಂಡ ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಭಾರತೀಯ ಮೂಲದ ತಂದೆ ತಾಯಿಯರ ಮಗನಾಗಿ ಬ್ರಿಟನ್ನಿನ ಸೌತಂಪ್ಟನ್ ನಲ್ಲಿ ಹುಟ್ಟಿದ ರಿಷಿ ರಾಜಕೀಯಕ್ಕೆ ಸೇರಿ ಬ್ರಿಟನ್ ಸರ್ಕಾರದಲ್ಲಿ ಚಾನ್ಸಲರ್ ಆಫ್ ದಿ ಎಕ್ಸ್ಚೆಕರ್ಕ ಅಥವ ವಿತ್ತ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದು ಎಲ್ಲರಿಗೂ ಗೊತ್ತು.
ಸಣ್ಣ ವಯಸ್ಸಿನಲ್ಲೇ ಇಷ್ಟೊಂದು ಸಾಧನೆ ಮಾಡಿದ ಸುನಾಕ್ ಅನೇಕ ಬಾರಿ ತಮ್ಮ ಪತ್ನಿ ಅಗಾಧ ಶ್ರೀಮಂತರಾದ ತಂದೆತಾಯಿಯರ ಮಗಳು ಎಂಬ ಕಾರಣದಿಂದಾಗಿ ಪ್ರಶ್ನಿಸಲ್ಪಟ್ಟಿರುವುದು ಗುಟ್ಟಾಗಿ ಉಳಿದಿಲ್ಲ. ರಿಷಿ ಅವರ ಪತ್ನಿ ಅಕ್ಷತಾ ಮೂರ್ತಿಯವರ ತೆರಿಗೆ ಕಟ್ಟುವ ವಿಷಯವನ್ನು ಮುಂದಿಟ್ಟುಕೊಂಡು ಸುನಾಕ್ ವಿರುದ್ಧ ಅನೇಕ ಆರೋಪಗಳನ್ನು ಹೇರಿಸಲಾಯಿತಾದರು ಅವೆಲ್ಲ ಈಗ ಬಗೆಹರಿದಿದೆ.
‘ನನ್ನನ್ನು ವಿರೋಧ ಮಾಡುವವರು ನನ್ನ ಹೆಂಡತಿಯ ಮೇಲೆ ಆರೋಪ ಮಾಡುವುದು ಸರಿ ಅಲ್ಲ’ ಎಂದು ರಿಷಿ ಹೇಳಿದ್ದಾರೆ. ಇತ್ತೀಚಿಗೆ ಲಂಡನ್ನಿನ ಸಂಡೆ ಟೈಮ್ಸ್ ಪತ್ರಿಕೆಗೆ ಸಂದರ್ಶನ ನೀಡಿದ ರಿಷಿ ಸುನಾಕ್ ತಮ್ಮ ಹೆಂಡತಿ, ಮಕ್ಕಳು ಮತ್ತು ತಮ್ಮ ಖಾಸಗಿ ಜೀವನದ ಬಗ್ಗೆ ಮಾತಾಡಿಕೊಂಡಿದ್ದಾರೆ. ತಮ್ಮ ಕೆಲವು ಹೇಳಿಕೆಗಳಿಂದ ಈಗಾಗಲೇ ಬಹಳಷ್ಟು ವಿವಾದಕ್ಕೀಡಾಗಿರುವ ಸುನಾಕ್ ತಮ್ಮ ಪತ್ನಿಯ ಬಗ್ಗೆ ಕೆಲವು ವಿಷಯಗಳನ್ನು ಸಂದರ್ಶನದಲ್ಲಿ ಹೇಳಿ ಜನ ಹುಬ್ಬೇರಿಸುವಂತೆ ಮಾಡಿದ್ದಾರೆ. ‘ನನ್ನ ಹೆಂಡತಿ ಅಚ್ಚುಕಟ್ಟಾಗಿ ವಸ್ತುಗಳನ್ನು ಇಡುವುದಿಲ್ಲ ಆಕೆಗೆ ಶುಚಿತ್ವ ಇಲ್ಲ. (I am incredibly tidy, my wife is messy) ನಾನು ಬಹಳ ಅಚ್ಚುಕಟ್ಟು. ಆದರೆ ನನ್ನ ಹೆಂಡತಿ ಎಲ್ಲೆಂದರಲ್ಲಿ ವಸ್ತುಗಳನ್ನು ಹಾಕುತ್ತಾಳೆ. ಬಟ್ಟೆ ಶೂಗಳೆಲ್ಲ ಕಂಡಕಂಡಲ್ಲಿ ಇರುತ್ತವೆ. ಅಯ್ಯೋ ಆಕೆಯ ಶೂಗಳು, ದೇವರೇ!’ ಎಂದಿದ್ದಾರೆ. ಮಾತ್ರವಲ್ಲದೆ ಆಕೆ ನಾನು ಇದು ಹೇಳಿದ್ದನ್ನು ಇಷ್ಟಪಡುವುದಿಲ್ಲ ಎಂದೂ ಹೇಳಿದ್ದಾರೆ. ‘ನನ್ನ ಹೆಂಡತಿ ಕುಡಿಯುತ್ತಾಳೆ ಅವಳಿಗೆ ನಾನು ಕುಡಿಯುವುದಿಲ್ಲ ಎನ್ನುವುದು ತುಂಬಾ ಕಿರಿ ಕಿರಿ ಉಂಟು ಮಾಡುತ್ತದೆ’ ಎಂದೂ ಹೇಳಿದ್ದಾರೆ. ಮಕ್ಕಳು ಹುಟ್ಟಿದಾಗ ತಾನು ಕೂಡ ಮಕ್ಕಳ ಆರೈಕೆ ಮಾಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ನಮ್ಮ ಮದುವೆ ಉಳಿಯಲು ಕಾರಣ ನಾವಿಬ್ಬರೂ ವಿಭಿನ್ನ ವ್ಯಕ್ತಿಗಳು, ನನ್ನಂತೆ ಆಕೆ ಇಲ್ಲವೇ ಇಲ್ಲ, ನಾವಿಬ್ಬರೂ ತದ್ವಿರುದ್ದ ಸ್ವಭಾವದವರು’ ಎಂದು ಕೂಡ ಹೇಳಿದ್ದಾರೆ.
ಈಗಾಗಲೇ ಕೆಲವು ಬಾರಿ ಶ್ರೀಮಂತರ ಮತ್ತು ಶ್ರೀಮಂತರು ವಾಸಿಸುವ ಸ್ಥಳಗಳ ಪರ ಮಾತಾಡಿ ಟೀಕೆಗೆ ಒಳಗಾದ ರಿಷಿ ಸುನಾಕ್ ಈಗ ತಮ್ಮ ಪತ್ನಿಯ ಶುಚಿತ್ವದ ಬಗ್ಗೆ ಮಾತಾಡಿ ತಮ್ಮ ಮನೆಯಲ್ಲೇ ಪ್ರಶ್ನಿಸಲ್ಪಡುತ್ತೋ ಎಂದು ಕೇಳಲಾಗುತ್ತಿದೆ. ತಾವು ಪ್ರೀತಿಸಿ ಮದುವೆಯಾದ ಅಕ್ಷತಾ ಅವರು ತಮ್ಮ ರಾಜಕೀಯ ಜೀವನದಲ್ಲಿ ಹೇಗೆ ಸಾಥ್ ನೀಡುತ್ತಿದ್ದಾರೆ ಎಂದು ಮಾತ್ರ ರಿಷಿ ಹೇಳಿಲ್ಲ. ಅಕ್ಷತಾ ಅವರು ಇತ್ತೀಚಿಗೆ ತಮ್ಮ ಮನೆಯ ಹತ್ತಿರ ಬಂದಿದ್ದ ಪತ್ರಕರ್ತರಿಗೆ ತುಂಬಾ ದುಬಾರಿಯಾದ ಲೋಟಗಳಲ್ಲಿ ಟೀ ಕೊಟ್ಟು ಟೀಕೆಗೆ ಒಳಗಾಗಿದ್ದರು.
ರಿಷಿ ಸುನಾಕ್ ಅವರ ಪತ್ನಿ ಅಕ್ಷತಾ ಅವರ ತಾಯಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿಯವರು ಮಕ್ಕಳನ್ನು ಬೆಳೆಸುವ ಬಗ್ಗೆ, ಇತಿಮಿತಿಯೊಳಗೆ ಬದುಕುವುದು ಹೇಗೆ ಮತ್ತು ಕೌಟುಂಬಿಕ ಮೌಲ್ಯಗಳ ಬಗ್ಗೆ ಬಹಳಷ್ಟು ಮಾತಾಡಿ ಜನಪ್ರಿಯರಾಗಿರುವುದನ್ನು ಇಲ್ಲಿ ಸ್ಮರಿಸಬಹುದು.