ಇದೀಗ ದ್ವೀಪರಾಷ್ಟ್ರ ತೈವಾನ್ ಮತ್ತು ಚೀನಾ ನಡುವಿನ ಸಂಘರ್ಷದ ಸುದ್ದಿ ಜಗತ್ತಿನಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ ಇದಕ್ಕೆ ಪ್ರಮುಖ ಕಾರಣ ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಗೆ ಭೇಟಿ ನೀಡಿದ್ದು. ಇದರ ನಂತರ ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ಉದ್ವಿಗ್ನತೆ ಭುಗಿಲೆದ್ದಿದೆ. ಇದನ್ನು ನೆಪವಾಗಿಟ್ಟುಕೊಂಡು ಚೀನಾ ತನ್ನ ನೆರೆಯ ತೈವಾನ್ ಮೇಲೆ ಮುಗಿ ಬೀಳಲು ಹೊಂಚು ಹಾಕುತ್ತಿದೆ.
ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿಯಿಂದ ಆಕ್ರೋಶಗೊಂಡಿರುವ ಚೀನಾ ಕಳೆದ ಕೆಲವು ದಿನಗಳಿಂದ ತೈವಾನ್ ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ಸೇನಾ ತಾಲೀಮು ನಡೆಸುತ್ತಿದೆ, ಅದರಲ್ಲಿ 100 ಕ್ಕೂ ಹೆಚ್ಚು ಯುದ್ಧವಿಮಾನಗಳು ಮತ್ತು 10 ಯುದ್ಧನೌಕೆಗಳು ಭಾಗವಹಿಸಿದ್ದು ಆತಂಕ ಸೃಷ್ಟಿಸಿದೆ.
ಚೀನದ ನಡೆಗೆ ಪ್ರತಿಯಾಗಿ ತೈವಾನ್ ಕೂಡ ತನ್ನ ಸೇನೆಯನ್ನು ಸನ್ನದ್ಧಗೊಳಿ ಸುತ್ತಿದೆ. ಚೀನ ಸೇನೆಯು ಸಮರಾಭ್ಯಾಸ ನಡೆಸುತ್ತಿರುವ ಪ್ರದೇಶದ ಹತ್ತಿರಕ್ಕೇ ತನ್ನ ಪಡೆಯನ್ನು ಕಳುಹಿಸುತ್ತಿದೆ. ತನ್ನ ಬತ್ತಳಿಕೆಯಲ್ಲಿರುವ 155ಎಂಎಂ ಎಂ114 ಹೋವಿಟ್ಜರ್, 120ಎಂಎಂ ಮಾರ್ಟರ್ಸ್‌ಗಳನ್ನು ಕಳುಹಿಸಿದೆ. ಇದರ ಜತೆಯಲ್ಲೇ ಅತ್ತ ಅಮೆರಿಕ ಕೂಡ ತೈವಾನ್‌ನ ಪೂರ್ವದಲ್ಲಿ ತನ್ನ ಎರಡು ಸಮರ ನೌಕೆಗಳನ್ನು ಸನ್ನದ್ಧವಾಗಿರಿಸಿದೆ. ಇದರಲ್ಲಿ ಮರೈನ್ ಎಫ್-35ಬಿ ಯುದ್ಧ ವಿಮಾನಗಳಿವೆ.
ಯಾಕಾಗಿ ದಾಳಿ:
ಮೇಲ್ನೋಟಕ್ಕೆ ಈ ಬಿಕ್ಕಟ್ಟಿನ ಕಾರಣ ನ್ಯಾನ್ಸಿ ಪೆಲೋಸಿ ಎಂದು ಬಿಂಬಿಸಲಾಗುತ್ತಿದೆಯಾದರೂ ಅಸಲಿ ಕಾರಣವೇ ಬೇರೆ ಇದೆ. ಮೊದಲಿಗೆ ಚೀನಾವನ್ನು ಬಗ್ಗು ಬಡಿಯಲು ಸದಾ ಹಣವಿಸುವ ಅಮೆರಿಕಾಕ್ಕೆ ಚೀನಾದ ಸೆರಗಿನಲ್ಲಿರುವ ತೈವಾನ್ ಆಪ್ತಮಿತ್ರನಾದರೂ ತಂತ್ರಜ್ಞಾನ ಕ್ಷೇತ್ರದಲ್ಲಿ ತೈವಾನ್ ಸಾಧನೆ ಅಮೆರಿಕದ ಕಣ್ಣುಕುಕ್ಕುವಂತಿದೆ.ಹೀಗಾಗಿ ತೈವಾನ್ ಮಿತ್ರನಾಗಿ ತಂತ್ರಜ್ಞಾನದ ನೆರವು ಪಡೆಯುವ ಜೊತೆಗೆ ಚೀನಾಕ್ಕೆ ಸೆಡ್ಡು ಹೊಡೆಯುವುದಾಗಿದೆ.
ಈಗ ಒಂದಷ್ಟು ಹಿಂದೆ ಹೋಗಿ ನೋಡುವುದಾದರೆ ತೈವಾನ್ ದ್ವೀಪ ಸಮೂಹವು ಅಧಿಕೃತವಾಗಿ ರಿಪಬ್ಲಿಕ್ ಆಫ್ ಚೈನಾದಲ್ಲಿದೆ ಅಂತ ಚೀನಾ ಹೇಳುತ್ತಿದೆ.
ಆದರೆ ತನ್ನ ಪೂರ್ವ ಮತ್ತು ದಕ್ಷಿಣಕ್ಕೆ ಚೀನಾ ಸಮುದ್ರಗಳು, ವಾಯುವ್ಯದಲ್ಲಿ ಪೆಸಿಫಿಕ್ ಮಹಾಸಾಗರ, ಪೀಪಲ್ಸ್ ರಿಪಬ್ಲಿಕ್ ಜೊತೆಗೆ ವಾಯುವ್ಯಕ್ಕೆ ಚೀನಾ, ಈಶಾನ್ಯಕ್ಕೆ ಜಪಾನ್ ದಕ್ಷಿಣಕ್ಕೆ ಪಿಲಿಫೈನ್ಸ್ ಅನ್ನು ಒಳಗೊಂಡಿರುವ ತೈವಾನ್ ತಾನು ಸ್ವತಂತ್ರ ದ್ವೀಪ ರಾಷ್ಟ್ರ ಎನ್ನುತ್ತಿದೆ. ತೈಪೆ ಇದರ ರಾಜಧಾನಿಯಾಗಿದೆ.
1949ರಿಂದಲೇ ತೈವಾನ್ ತನ್ನನ್ನು ತಾನು ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಂಡಿದೆ. ಪ್ರಜಾಪ್ರಭುತ್ವ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು, ಪ್ರಸ್ತುತ ತೈವಾನ್ ರಾಷ್ಟ್ರಪತಿಯಾಗಿ ಚೆನ್ ಶುಇ-ಬಿಯಾನ್, ಉಪ ರಾಷ್ಟ್ರಪತಿಯಾಗಿ ಅನೆಟ್ ಲು ಹಾಗು ಪ್ರಧಾನಿಯಾಗಿ ಸು ತ್ಸೆಂಗ್ ಚಾಂಗ್ ಅಧಿಕಾರ ನಿರ್ವಹಿಸುತ್ತಿದ್ದಾರೆ.
ಒಂದಷ್ಟು ಇತಿಹಾಸದತ್ತ ಗಮನ ಹರಿಸುವುದಾದರೆ ತೈವಾನ್‌ನಲ್ಲಿರುವ ಆಸ್ಟ್ರೋನೇಷಿಯನ್ ಎಂಬ ಬುಡಕಟ್ಟು ಜನರು ದಕ್ಷಿಣ ಚೀನಾದಿಂದ ಬಂದವರು ಎಂದು ಭಾವಿಸಲಾಗಿದೆ. 17 ನೇ ಶತಮಾನದಿಂದ, ಗಮನಾರ್ಹ ಸಂಖ್ಯೆಯ ವಲಸಿಗರು ಚೀನಾದಿಂದ ಬರಲು ಪ್ರಾರಂಭಿಸಿದರು,ಚೀನಾದಲ್ಲಿ ಆಗಾಗ್ಗೆ ಉಂಟಾಗುತ್ತಿದ್ದ ಪ್ರಕ್ಷುಬ್ಧತೆ ಅಥವಾ ಕಷ್ಟದಿಂದ ತೈವಾನ್ ಗೆ ಪಲಾಯನ ಮಾಡಿದರು. ಹೆಚ್ಚಿನವರು ಚೀನಾದ ಫುಜಿಯಾನ್ ಪ್ರಾಂತ್ಯದಿಂದ ಬಂದರೆ ಹೊಕ್ಲೋ ಚೈನೀಸ್ ಗುವಾಂಗ್‌ಡಾಂಗ್‌ನಿಂದ ಬಂದರು. ಈಗ ಇವರು ದ್ವೀಪ ರಾಷ್ಟ್ರದಲ್ಲಿ ಅತಿದೊಡ್ಡ ಜನಸಂಖ್ಯೆಯಾಗಿದ್ದಾರೆ.
ತೈವಾನ್ ದ್ವೀಪವು ಚೀನಾದ ಭಾಗವೇ ಆಗಿತ್ತು. ಆದರೆ 1949 ರಲ್ಲಿ ನಡೆದ ಅಂತರ್ಯುದ್ಧದ ಸಮಯದಲ್ಲಿ ತೈವಾನ್ ಚೀನಾದಿಂದ ಬೇರ್ಪಟ್ಟಿತ್ತು. ಆದರೆ, ಚೀನಾ ಈಗಲೂ ತೈವಾನ್ ದ್ವೀಪವನ್ನು ತನ್ನ ಸ್ವಂತ ಪ್ರದೇಶ ಎಂದು ಹೇಳುತ್ತದೆ. ಅಷ್ಟೇ ಅಲ್ಲ ತೈವಾನ್ ಮೇಲೆ ಪ್ರಾಬಲ್ಯ ಸಾಧಿಸಲು ಮಿಲಿಟರಿ ಕಾರ್ಯಾಚರಣೆ ಮಾಡಲು ಹಿಂಜರಿಯಲ್ಲ ಎಂದೂ ಘೋಷಿಸಿದೆ.ತೈವಾನನ್ನು ತನ್ನ ಜತೆ ವಿಲೀನಗೊಳಿಸಲು ಚೀನಾ ಒತ್ತಡ ಹೇರುತ್ತಿದೆ. ತೈವಾನ್ ತನ್ನ ಅವಿಭಾಜ್ಯ ಅಂಗವೆಂದು ಹೇಳುತ್ತಿದೆ. ಬೆದರಿಕೆಯ ತಂತ್ರವಾಗಿ ತೈವಾನ್ ಜಲಸಂಯ ಮೇಲೆ ಚೀನಾದ ಹಲವಾರು ವಿಮಾನಗಳು ಕಳೆದ ತಿಂಗಳು ಹಾರಾಡಿದ್ದವು.
ಮತ್ತೊಂದೆಡೆಯಲ್ಲಿ ಚೀನಾ ಎಷ್ಟೇ ಒತ್ತಡ ಹೇರಿದರೂ ಅದರ ಭಾಗವಾಗುವುದಿಲ್ಲ ಎಂದು ತೈವಾನ್ ಈಗಾಗಲೇ ಘೋಷಿಸಿದೆ. ತಮ್ಮದು ಪ್ರಜಾತಾಂತ್ರಿಕ ರಾಷ್ಟ್ರ.ಇಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ನಾಯಕರಿದ್ದಾರೆ. ಸಶಸ್ತ್ರ ಪಡೆಗಳಲ್ಲಿ ಸುಮಾರು 300,000 ಸಕ್ರಿಯ ಯೋಧರಿದ್ದಾರೆ ಹೀಗಾಗಿ ತಮ್ಮದು ಸ್ವತಂತ್ರ ಅಸ್ತಿತ್ವ ಎಂದು ಜಾಗತಿಕ ಮನ್ನಣೆ ಪಡೆಯಲು ಪ್ರಯತ್ನ ಮುಂದುವರೆಸಿದೆ.
ಹೀಗಿದ್ದರೂ ಕೂಡಾ ಪ್ರಜಾತಂತ್ರ ದೇಶವಾಗಿರುವ ತೈವಾನ್ ಸದಾ ಚೀನಾ ದಾಳಿಯ ಭೀತಿಯಲ್ಲಿಯೇ ಬದುಕುತ್ತಿದೆ. ತೈವಾನ್ ಅನ್ನು ಚೀನಾ ತನ್ನ ಅಂಗ ಎಂದೇ ಭಾವಿಸಿದ್ದು, ಒಂದಲ್ಲಾ ಒಂದು ದಿನ ಬಲಪ್ರಯೋಗದಿಂದಲಾದರೂ ಸರಿ ಅದನ್ನು ವಶಪಡಿಸಿಕೊಳ್ಳುವುದಾಗಿ ಘೋಷಿಸಿದೆ.ಇದಕ್ಕಾಗಿ ದೊರೆಯುವ ಎಲ್ಲಾ ಅವಕಾಶ ಬಳಸುತ್ತಿದೆ.
ಇದರಿಂದ ಹೊರಬರುವ ಸಲುವಾಗಿ ಒಂದಷ್ಟು ಪ್ರಯತ್ನಗಳು ನಡೆದಿದ್ದವು.
1980 ರಲ್ಲಿ ತೈವಾನ್ ಚೀನಾಕ್ಕೆ ಭೇಟಿ ಮತ್ತು ಹೂಡಿಕೆಯ ನಿಯಮಗಳನ್ನು ಸಡಿಲಗೊಳಿಸಿದ್ದರಿಂದ ಸಂಬಂಧಗಳು ಸುಧಾರಿಸಲು ಪ್ರಾರಂಭಿಸಿದವು.
1991 ರಲ್ಲಿ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದೊಂದಿಗಿನ ಯುದ್ಧವು ಮುಗಿದಿದೆ ಎಂದು ಅದು ಘೋಷಿಸಿತು. ಚೀನಾ “ಒಂದು ದೇಶ, ಎರಡು ವ್ಯವಸ್ಥೆಗಳು” ಎಂದು ಕರೆಯಲ್ಪಡುವ ಆಯ್ಕೆಯನ್ನು ಪ್ರಸ್ತಾಪಿಸಿತು, ಇದು ಬೀಜಿಂಗ್‌ನ ನಿಯಂತ್ರಣಕ್ಕೆ ಬರಲು ಒಪ್ಪಿಕೊಂಡರೆ ತೈವಾನ್ ಸ್ವಾಯತ್ತತೆಯನ್ನು ಅನುಭವಿಸಬಹುದು ಅಂತ ಚೀನಾ ಆಮಿಷವೊಡ್ಡಿತು. ಈ ವ್ಯವಸ್ಥೆಯು 1997 ರಲ್ಲಿ ಹಾಂಗ್ ಕಾಂಗ್ ಚೀನಾಕ್ಕೆ ಹಿಂದಿರುಗಲು ಮತ್ತು ಬೀಜಿಂಗ್ ತನ್ನ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸಿದಾಗ ಮತ್ತೆ ಸಂಘರ್ಷ ಶುರುವಾಯ್ತು.
ಇದೀಗ ಉಕ್ರೇನ್ ಮೇಲೆ ರಷ್ಯಾ ದಾಳಿಯ ನಂತರ ತೈವಾನ್ ವಿಚಾರದಲ್ಲಿ ಚೀನಾ ಕಠಿಣ ಧೋರಣೆ ತಳೆದಿದೆ ಎನ್ನಲಾಗುತ್ತಿದೆ. ಉಕ್ರೇನ್ ಅನ್ನು ವಶಕ್ಕೆ ತೆಗೆದುಕೊಳ್ಳಲು ರಷ್ಯಾ ಅನುಸರಿಸುತ್ತಿರುವ ಕ್ರಮಗಳ ಮಾದರಿಯಲ್ಲಿಯೇ ತೈವಾನ್ ವಿಚಾರದಲ್ಲಿ ವರ್ತಿಸಲು ಚೀನಾ ಮುಂದಾಗಿದೆ.
ತೈವಾನ್ ನ ಸುತ್ತಮುತ್ತಲೂ ಮಿಲಿಟರಿ ಚಟುವಟಿಕೆ ಹೆಚ್ಚಿಸಿದೆ. ತೈವಾನ್ನ ಭೂ ಪ್ರದೇಶದ ಮಾದರಿಯನ್ನೇ ಮರುಸೃಷ್ಟಿಸಿ ಹಲವು ಬಾರಿ ಚೀನಾ ಸೇನೆಯು ಅಣಕು ದಾಳಿಯ ಕಾರ್ಯಾಚರಣೆ ನಡೆಸುವ ಮೂಲಕ ತಾಲೀಮು ಕೂಡ ಮಾಡಿದೆ.
ಕಳೆದ ಜನವರಿ 23ರಂದು ಚೀನಾದ 23 ಯುದ್ಧ ವಿಮಾನಗಳು ತೈವಾನ್ ವಾಯುಗಡಿ ಉಲ್ಲಂಘಿಸಿದ್ದವು. ಕಳೆದ ವರ್ಷ, 2021ರಲ್ಲಿ ಒಟ್ಟು 969 ಬಾರಿ ತೈವಾನ್ ವಾಯುಗಡಿಯಲ್ಲಿ ಚೀನಾದ ಯುದ್ಧವಿಮಾನಗಳು ಹಾರಾಟ ನಡೆಸಿದ್ದವು. 2020ರಲ್ಲಿ 380 ಬಾರಿ ಚೀನಾದ ಯುದ್ಧವಿಮಾನಗಳು ತೈವಾನ್ ವಾಯುಗಡಿ ಉಲ್ಲಂಘಿಸಿದ್ದವು. 2022ರಲ್ಲಿ ಈವರೆಗೆ ತೈವಾನ್ ಮೇಲೆ 465 ಬಾರಿ ಚೀನಾದ ಯುದ್ಧ ವಿಮಾನಗಳು ಹಾರಾಡಿವೆ.
ತೈವಾನ್ ವಿಚಾರದಲ್ಲಿ ಚೀನಾದ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಮೆರಿಕ ಅಗತ್ಯ ಬಿದ್ದರೆ ಮಧ್ಯಪ್ರವೇಶಿಸುವುದಾಗಿ ಎಚ್ಚರಿಸಿದೆ. ಅದರಂತೆ ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರಜಾಪ್ರಭುತ್ವದ ಹೋರಾಟಕ್ಕೆ ಬೆಂಬಲಿಸುವ ಉದ್ದೇಶದಿಂದ ಅವರು ಭೇಟಿ ನೀಡಿದ್ದರು ಎಂದು ಸಮರ್ಥನೆ ನೀಡಿದೆ.
ಇದಕ್ಕೆ ಚೀನಾ ನಖಶಿಖಾಂತ ಉರಿದು ಹೋಗಿದೆ.
ನ್ಯಾನ್ಸಿ ಪೆಲೋಸಿ ತೈವಾನ್ ತಲುಪುತ್ತಿದ್ದಂತೆ ಮಿಲಟರಿ ಕಾರ್ಯಾಚರಣೆ ಘೋಷಿಸಿದೆ. ಇದರಿಂದ ಇದೀಗ ಬಿಕ್ಕಟ್ಟು ಸೃಷ್ಟಿಯಾಗಿದೆ ಇದರಿಂದ ಕೇವಲ ಚೀನಾ ಅಥವ ತೈವಾನ್ ಗೆ ಮಾತ್ರ ನಷ್ಟವಾಗುವುದಿಲ್ಲ ಇದರಿಂದ ಇಡೀ ಜಗತ್ತಿಗೆ ನಷ್ಟ ವಾಗುತ್ತದೆ
ಹೌದು, ಅದು ಹೇಗೆಂದರೆ ಪ್ರಪಂಚದ ಹೆಚ್ಚಿನ ದೈನಂದಿನ ಎಲೆಕ್ಟ್ರಾನಿಕ್ ಉಪಕರಣಗಳು – ಫೋನ್‌ಗಳಿಂದ ಲ್ಯಾಪ್‌ಟಾಪ್‌ಗಳು, ಕೈಗಡಿಯಾರಗಳು ಮತ್ತು ಆಟಗಳ ಕನ್ಸೋಲ್‌ಗಳವರೆಗೆ ಎಲ್ಲವೂಗಳಿಗೆ ತೈವಾನ್‌ನಲ್ಲಿ ತಯಾರಿಸಿದ ಕಂಪ್ಯೂಟರ್ ಚಿಪ್‌ಗಳು ಬೇಕು ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಅಥವಾ TSMC – ಪ್ರಪಂಚದ ಅರ್ಧದಷ್ಟು ಮಾರುಕಟ್ಟೆಯನ್ನು ಹೊಂದಿದೆ ಹೀಗಾಗಿ ಈ ಬಿಕ್ಕಟ್ಟು ಜಗತ್ತಿನ ಅರ್ಥ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಲಿದೆ ಎನ್ನಲಾಗುತ್ತಿದೆ.
ವಾರ್ತಾಚಕ್ರ ವಿಶೇಷ