ಲಾಲ್ ಸಿಂಗ್ ಚಡ್ಡಾ’ ಚಿತ್ರದ ಒಂದು ದೃಶ್ಯದಲ್ಲಿ ಆಮಿರ್ ಖಾನ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾನಸಿಕವಾಗಿ ಅಸಮರ್ಥ ವ್ಯಕ್ತಿಯ ಪಾತ್ರ ಇದಾಗಿದ್ದು, ಅಂಥ ವ್ಯಕ್ತಿಗೆ ಭಾರತೀಯ ಸೇನೆಯಲ್ಲಿ ಕೆಲಸ ಸಿಗುತ್ತದೆಯೇ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಈ ರೀತಿಯ ವ್ಯಕ್ತಿ ಹೋರಾಡಿದ್ದ ಎಂಬ ರೀತಿಯಲ್ಲಿ ತೋರಿಸಲಾಗಿದೆ. ಇದರಿಂದ ಭಾರತೀಯ ಸೇನೆಗೆ ಅವಮಾನ ಆಗಿದೆ ಎಂದು ದೆಹಲಿ ಮೂಲದ ವಕೀಲ ವಿನೀತ್ ಜಿಂದಾಲ್ ಚಿತ್ರತಂಡದ ವಿರುದ್ಧ ದೂರು ನೀಡಿದ್ದಾರೆ. ನಟ ಆಮಿರ್ ಖಾನ್, ನಿರ್ದೇಶಕ ಅದ್ವೈತ್ ಚಂದನ್ ಹಾಗು ನಿರ್ಮಾಣ ಸಂಸ್ಥೆಯಾದ ‘ಪ್ಯಾರಮೌಂಟ್ ಪಿಕ್ಚರ್ಸ್’ ವಿರುದ್ಧ ದೂರು ನೀಡಲಾಗಿದೆ. ‘ಕಾರ್ಗಿಲ್ ಯುದ್ಧಕ್ಕಾಗಿ ಅತ್ಯುತ್ತಮ ಮತ್ತು ಸಮರ್ಥ ಸೈನಿಕರನ್ನು ಕಳಿಸಲಾಗಿತ್ತು. ಆದರೆ ಈ ಚಿತ್ರದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸೈನಿಕನ ಪಾತ್ರದಲ್ಲಿ ತೋರಿಸಲಾಗಿದೆ. ಇದರಿಂದ ಭಾರತೀಯ ಸೇನೆಯನ್ನು ಅವಮಾನಿಸಿದಂತೆ ಆಗಿದೆ’ ಎಂದು ದೂರಿನಲ್ಲಿ ಹೇಳಲಾಗಿದೆ.