ತುಮಕೂರು: ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರುವ ಫ್ಲಕ್ಸ್’ನಲ್ಲಿದ್ದ ವೀರ ಸಾವರ್ಕರ್ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದು ಹಾಕಿರು ಘಟನೆ ತುಮಕೂರು ನಗರದಲ್ಲಿ ನಡೆದಿದೆ. ನಗರದ ಎಂಪ್ರೆಸ್ ಕಾಲೇಜು ಮುಂಭಾಗ ನಗರ ಶಾಸಕ ಜ್ಯೋತಿಗಣೇಶ್ ರವರು ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರುವ ಫ್ಲೆಕ್ಸ್ ಅಳವಡಿಸಿದ್ದು, ಕಿಡಿಗೇಡಿಗಳು ಸಾವರ್ಕರ್ ರವರ ಭಾವಚಿತ್ರವಿರುವ ಫ್ಲೆಕ್ಸನ್ನು ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ. ಕಿಡಿಗೇಡಿಗಳು ಶಿವಮೊಗ್ಗದಲ್ಲಿ ನಡೆದ ಘಟನೆಯಿಂದ ಪ್ರೇರಿತಗೊಂಡು ಶಾಂತಿ ಸುವ್ಯವಸ್ಥೆಯಿಂದಿರುವ ತುಮಕೂರು ನಗರದಲ್ಲಿ ವೀರ ಸಾವರ್ಕರ್ ಫೋಟೋ ಹರಿದು ಹಾಕಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೂರು ದಿನಗಳ ಹಿಂದೆ ಫ್ಲೆಕ್ಸ್ ಹಾಕಲಾಗಿದ್ದು, ಅಂದಿನಿಂದ ಎಲ್ಲ ಫ್ಲೆಕ್ಸ್’ಗಳು ಸುಸ್ಥಿತಿಯಲ್ಲಿದ್ದವು. ಆದರೆ ಸ್ವಾತಂತ್ರ್ಯ ದಿನೋತ್ಸವದ ರಾತ್ರಿ ಕಿಡಿಗೇಡಿಗಳು ವೀರ ಸಾರ್ವಕರ್ ಭಾವಚಿತ್ರ ಇರುವ ಫ್ಲೆಕ್ಸ್ ಅನ್ನು ಮಾತ್ರ ಹರಿದು ಹಾಕಿದ್ದಾರೆ. ಈ ಕುರಿತು ಹಿಂದೂಪರ ಸಂಘಟನೆಗಳ ಮುಖಂಡರು ಹಾಗು ನಾಗರೀಕರು ತೀವ್ರ ಬೇಸರ ವ್ಯಕ್ತಪಡಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.