ಬೆಂಗಳೂರು,ಆ.30- ಏಳು ವರ್ಷಗಳಿಂದ ನಗರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಳ್ಳತನ ಮಾಡಿ ಮೋಜು ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಿಳೇಕಹಳ್ಳಿಯ ದೊರೆಸ್ವಾಮಿಪಾಳ್ಯದ ರವಿ(37) ಹಾಗೂ ಜೆಪಿ ನಗರದ 7ನೇಹಂತದ
ಶಂಕರ ಅಲಿಯಾಸ್ ಆಟೋ ಶಂಕರ(44) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 40 ಲಕ್ಷ ರೂಮೌಲ್ಯದ 800 ಗ್ರಾಂ ಚಿನ್ನಾಭರಣ 3 ಕೆಜಿ 300 ಗ್ರಾಂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಆರೋಪಿಗಳು ಕಳೆದ ಏಳು ವರ್ಷಗಳಿಂದ ನಗರದಲ್ಲಿ ಕಳ್ಳತನ ಮಾಡುತ್ತಿದ್ದು ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದರು.ಕಳವು ಮಾಡಿದ ವಸ್ತುಗಳನ್ನು ಮಾರಾಟ ಮಾಡಿ ಮೋಜು ಮಾಡುತ್ತಿದ್ದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದರು.
ಇತ್ತೀಚಿಗೆ ವರಮಹಾಲಕ್ಷ್ಮಿ ಹಬ್ಬದ ದಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಇನ್ನು ಮಹದೇವಪುರ, ಕೆ.ಆರ್ ಪುರಂ, ಬೈಯಪ್ಪನಹಳ್ಳಿ ಸೇರಿದಂತೆ ನಗರದ ಅನೇಕ ಭಾಗದಲ್ಲೂ ಖದೀಮರು ಕೈಚಳಕ ತೋರಿಸಿದ್ದರು.
ಬೈಯಪ್ಪನಹಳ್ಳಿ ಬಳಿ ನಡೆದಿದ್ದ ಮನೆಗಳವು ಪ್ರಕರಣವನ್ನು ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಖಚಿತವಾದ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Previous Articleವಾಲ್ಮೀಕಿ ಸಮುದಾಯಕ್ಕೆ ಶೀಘ್ರವೇ ಸಿಹಿ ಸುದ್ದಿ.
Next Article ಮಳೆ ಹಾನಿ ಸಂತ್ರಸ್ತರಿಗೆ 250 ಕೋಟಿ ತುರ್ತು ಪರಿಹಾರ