ಬೆಂಗಳೂರು, ಸೆ.12- ತೀವ್ರ ಹೃದಯಾಘಾತದಿಂದ ಇತ್ತೀಚೆಗೆ ನಿಧನರಾದ ಅರಣ್ಯ ಸಚಿವ ಉಮೇಶ್ ಕತ್ತಿ ಅವರಿಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ, ಸಂತಾಪ ಸೂಚಕ ನಿರ್ಣಯ ಮಂಡಿಸಿದ ಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,ಮೃತರ ಗುಣಗಾನ ಮಾಡಿದರು.
ಇದನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ತಾವು ಅತ್ಯಂತ ದುಃಖ ಹಾಗೂ ಭಾರದ ಮನಸ್ಸಿನಿಂದ ನಾನು ಈ ಕಲಾಪದಲ್ಲಿ ಭಾಗಿಯಾಗುತ್ತಿದ್ದೇನೆ. ಎಲ್ಲವೂ ಸರಿಯಾಗಿದ್ದರೆ ಕತ್ತಿಯವರು ಈ ಸದನದ ಮೊದಲನೇ ಸಾಲಿನಲ್ಲಿ ಇರಬೇಕಿತ್ತು. ಆದರೆ ವಿಧಿ ಸಂಕಲ್ಪ ಬೇರೆಯದೇ ಇತ್ತು” ಎಂದು ಬೇಸರ ವ್ಯಕ್ತಪಡಿಸಿದರು.
ಕತ್ತಿ ಅತ್ಯಂತ ಕ್ರಿಯಾಶೀಲ, ವರ್ಣರಂಜಿತ ರಾಜಕಾರಣಿ. 25 ನೇ ವರ್ಷಕ್ಕೆ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ನನ್ನ ಕಿಸೆಯಲ್ಲಿ ಎಲ್ಲಾ ಪಕ್ಷದ ಬಿ.ಫಾರ್ಮ್ ಇದೆ.ಯಾವುದೋ ಬೇಕೋ ಅದನ್ನು ನಾನು ಆರಿಸಿಕೊಳ್ಳುತ್ತೇನೆ ಎಂದು ಚಟಾಕಿ ಹಾರಿಸುತ್ತಿದ್ದರು. ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಅವರು ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿದ್ದರು. ಆದರೆ ವಾಸ್ತವದಲ್ಲಿ ಅವರಿಗೆ ರಾಜ್ಯ ವಿಭಜನೆ ಬಗ್ಗೆ ಒಲವಿರಲಿಲ್ಲ ಎಂದರು.
ಅಜಾತಶತ್ರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ ಉಮೇಶ್ ಕತ್ತಿ ಯಾವುದೇ ರಾಜಕೀಯ ಪಕ್ಷದಲ್ಲಿದ್ದರು ಸ್ನೇಹ ಮತ್ತು ವಿಶ್ವಾಸಕ್ಕೆ ಕೊರತೆ ಇರಲಿಲ್ಲ. ಅವರೊಬ್ಬ ಅಜಾತ ಶತ್ರು ಎಂದು ಬಣ್ಣಿಸಿದರು.
ಜನತಾ ಪರಿವಾರದಿಂದ ರಾಜಕೀಯ ಜೀವನ ಆರಂಭಿಸಿದ ಅವರು, ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ಒಟ್ಟು 9ಬಾರಿ ಚುನಾವಣೆಯಲ್ಲಿ ಸ್ರ್ಪಧಿಸಿ 8 ಬಾರಿ ಗೆದ್ದಿದ್ದರು. ಬಂಧಿಖಾನೆ, ಲೋಕೋಪಯೋಗಿ, ಕೃಷಿ, ತೋಟಗಾರಿಕೆ, ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸೇರಿದಂತೆ ಅನೇಕ ಖಾತೆಗಳನ್ನು ನಿರ್ವಹಿಸಿದ್ದ ಅವರು, ಬೇರೆ ಪಕ್ಷಗಳಲ್ಲಿದ್ದರೂ ಸ್ನೇಹಕ್ಕೆ ಕೊರತೆ ಇರಲಿಲ್ಲ. ನನ್ನ ಪಾಲಿಗೆ ಅವರೊಬ್ಬ ಅಜಾತ ಶತ್ರು ಎಂದು ಹೇಳಿದರು
ಇದೇ ವೇಳೆ ಇತ್ತೀಚೆಗೆ ಅಗಲಿದ ಮಾಜಿ ಸಚಿವರಾದ
ಎಂ.ರಘುಪತಿ, ಪ್ರಭಾಕರ್ ರಾಣೆ, ಸಿ.ಯಾದವ್, ಕೆಂಪೇಗೌಡ, ಜಿ.ವಿ.ಶ್ರೀರಾಮರೆಡ್ಡಿ, ಸಿ.ಎಂ.ದೇಸಾಯಿ, ಎ.ಜಿ.ಕೊಡ್ಗಿ,ಈಶಣ್ಣ ಗುಳಗಣ್ಣನವರ, ಶಿವಮೊಗ್ಗ ಸುಬ್ಬಣ್ಣ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.