ಬೆಂಗಳೂರು,ಸೆ.15-
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾದ
ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಪರಿಷತ್ ಸಭಾಪತಿ ಚುನಾವಣೆಯ ಕಣಕ್ಕಿಳಿಸಲು ಬಿಜೆಪಿಬನಿರ್ಧರಿಸಿದೆ.
ಮೂಲಗಳ ಪ್ರಕಾರ ಸೆಪ್ಟೆಂಬರ್ 20 ಮತ್ತು 21ರಂದು ವಿಧಾನಪರಿಷತ್‍ನ ಸಭಾಪತಿ ಚುನಾವಣೆ ನಡೆಯಲಿದ್ದು, ಬಸವರಾಜ ಹೊರಟ್ಟಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಬಿಜೆಪಿ ತೀರ್ಮಾನಿಸಿದೆ.
ಕೇಂದ್ರ ಚುನಾವಣಾ ಸಮಿತಿಗೆ ಹೊರಟ್ಟಿ ಅವರ ಒಂದೇ ಹೆಸರನ್ನು ಶಿಫಾರಸ್ಸು ಮಾಡಬೇಕೆಂಬ ತೀರ್ಮಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ನಾಯಕರು ತೆಗೆದುಕೊಂಡಿದ್ದಾರೆ.
ಜೆಡಿಎಸ್ ನಲ್ಲಿದ್ದ ಹೊರಟ್ಟಿ ಚುನಾವಣೆ ಸಮಯದಲ್ಲಿ ಬಿಜೆಪಿ ಸೇರ್ಪಡೆಯಾದರು ಆಗ ಅವರಿಗೆ ಪರಿಷತ್ ಸಭಾಪತಿ ಹುದ್ದೆಯ ಭರವಸೆ ನೀಡಲಾಗಿತ್ತು ಅದರಂತೆ ಇದೀಗ ನಡೆಯಲಿರುವ ಚುನಾವಣೆಯಲ್ಲಿ ಅವರನ್ನು ಕಣಕ್ಕಿಳಿಸಲಾಗುತ್ತಿದೆ ಸದನದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿದ್ದು ಹೊರಟ್ಟಿ ಆಯ್ಕೆ ಸುಲಭ ಎನ್ನಲಾಗುತ್ತಿದೆ.
ಪರಿಷತ್ ನಲ್ಲಿಕಾಂಗ್ರೆಸ್ 26 ಸದಸ್ಯರನ್ನು ಹೊಂದಿದ್ದರೆ, ಜೆಡಿಎಸ್ 8 ಸದಸ್ಯರನ್ನು ಹೊಂದಿದೆ. ಸಭಾಪತಿ ಚುನಾವಣೆಯಲ್ಲಿ ಗೆಲ್ಲಬೇಕಾದರೆ 38 ಮತಗಳನ್ನು ಪಡೆಯಬೇಕು. ಬಿಜೆಪಿ 39 ಸದಸ್ಯರನ್ನು ಹೊಂದಿರುವುದರಿಂದ ಸುಲಭವಾಗಿ ಗೆಲ್ಲಲಿದೆ. ಈ ಲೆಕ್ಕಾಚಾರದಲ್ಲಿ ಕಾಂಗ್ರೆಸ್, ಜೆಡಿಎಸ್ ಚುನಾವಣಾ ಕಣದಿಂದ ಹಿಂದೆ ಸರಿದರೆ ಹೊರಟ್ಟಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.