ಬೆಂಗಳೂರು,ಅ.30-ವಿಧಾನಸಭೆ ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ಬಿಜೆಪಿ ಇದೀಗ ಮತ್ತೊಂದು ಗುಪ್ತ ಕಾರ್ಯ ಸೂಚಿ ಪ್ರಯೋಗಿಸಲು ಮುಂದಾಗಿದೆ.
ಗುಜರಾತ್ ಮಾದರಿಯಲ್ಲಿ ಸರ್ಕಾರ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಚಿಂತನೆ ನಡೆಸಿದೆ.
ಈಗಾಗಲೇ ಉತ್ತರಖಂಡ್‍ನಲ್ಲಿ ಈ ಕಾಯ್ದೆ ಅನುಷ್ಠಾನವಾಗಿದ್ದು, ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿಮಾಚಲ ಪ್ರದೇಶ ಹಾಗೂ ಗುಜರಾತ್‍ನಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಅಲ್ಲಿನ ಸರ್ಕಾರಗಳು ಮುಂದಾಗಿವೆ. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಈ ಮಸೂದೆಯನ್ನು ಡಿಸೆಂಬರ್‍ನಲ್ಲಿ ನಡೆಯಲಿರುವ ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಮಾಡಲು ಚಿಂತನೆ ನಡೆಸಿದೆ ಎಂದು ಬಿಜೆಪಿ ಯ ಉನ್ನತ ಮೂಲಗಳು ತಿಳಿಸಿವೆ.
ಕಾಯಿದೆ ಸಿದ್ಧಪಡಿಸಲು ಗುಜರಾತ್‍ನಂತೆ ಇಲ್ಲೂ ಕೂಡ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಸಮಿತಿಯ ಸದಸ್ಯರಾಗಿರುತ್ತಾರೆ ಎನ್ನಲಾಗಿದೆ.
ಈ ಸಮಿತಿ ಒಂದು ತಿಂಗಳಲ್ಲಿ ರಾಜ್ಯದ ಕೆಲವೆಡೆ ಪ್ರವಾಸ ಮಾಡಿ, ಹಲವಾರು ಸಲಹೆ ಸೂಚನೆಗಳನ್ನು ಪಡೆದು ವರದಿ ನೀಡಲಿದೆ.ಇದನ್ನು ಆಧರಿಸಿ ಕಾನೂನು ಇಲಾಖೆ ಕಾಯಿದೆ ಸಿದ್ದ ಪಡಿಸಲಿದೆ.
ವಾಸ್ತವವಾಗಿ ಈ ಮಸೂದೆಯನ್ನು ಈ ಹಿಂದೆ ಜಾರಿಗೆ ತಂದಿರುವ ಧಾರ್ಮಿಕ ಸ್ವತಂತ್ರ ಸಂರಕ್ಷಣೆ ಹಕ್ಕು 2021 ಕಾಯ್ದೆಗೂ ಮುನ್ನವೇ ಜಾರಿ ಮಾಡಬೇಕೆಂದು ಆರ್‍ಎಸ್‍ಎಸ್ ನಾಯಕರು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದರು.
ಆ ವೇಳೆ ಉತ್ತರಖಂಡ್ ಹೊರತುಪಡಿಸಿದರೆ ಯಾವುದೇ ರಾಜ್ಯಗಳು ಈ ಮಸೂದೆಯನ್ನು ಜಾರಿ ಮಾಡಲು ಮುಂದಾಗಿರಲಿಲ್ಲ. ಈಗ ಬಿಜೆಪಿ ಆಡಳಿತವಿರುವ ರಾಜ್ಯಗಳು ಹಂತ ಹಂತವಾಗಿ ಅನುಷ್ಠಾನ ಮಾಡುತ್ತಿರುವುದರಿಂದ ರಾಜ್ಯ ಸರ್ಕಾರವು ಜಾರಿ ಮಾಡಲು ಮುಂದಾಗಿದೆ.
Previous Articleಬ್ಯಾಂಕ್ ಗ್ರಾಹಕರ Data ಅಪಾಯದಲ್ಲಿ
Next Article ಭಗತ್ ಸಿಂಗ್ ಪಾತ್ರಕ್ಕಾಗಿ ಅಂತ್ಯ ತಂದುಕೊಂಡ!