ಕರ್ನಾಟಕ : ಸಾಂಕ್ರಾಮಿಕ ಕೋವಿಡ್ 4ನೇ ಅಲೆ ಬರಬಹುದು ಎಂದು ತಜ್ಞರು ಎಚ್ಚರಿಸಿರುವ ಹಿನ್ನೆಲೆಯಲ್ಲಿ 6ರಿಂದ 12 ವರ್ಷದೊಳಗಿನ ಮಕ್ಕಳಿಗೆ ಸೋಮವಾರದಿಂದಲೇ ಲಸಿಕಾ ಅಭಿಯಾನವನ್ನು ಆರಂಭಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ ಆರೊಗ್ಯ ಸಚಿವ ಡಾ.ಸುಧಾಕರ್, ಇಡೀ ರಾಜ್ಯದಲ್ಲಿ ದೊಡ್ಡ ಮಟ್ಟದ ಲಸಿಕಾ ಅಭಿಯಾನವನ್ನು ಆರಂಭ ಮಾಡುತ್ತೇವೆ. 6-12 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.
ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು. ಬೇಸಿಗೆ ರಜೆ ಪ್ರಾರಂಭವಾಗಿರುವುದರಿಂದ ಶಾಲೆಯಲ್ಲಿ ಮಾಡಬೇಕೆ ಅಥವಾ ಆಯಾ ಶಿಕ್ಷಣ ಸಂಸ್ಥೆಗಳಲ್ಲಿ ನೀಡಬೇಕೆ ಎಂಬುದರ ಕುರಿತು ಚರ್ಚಿಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸೋಮವಾರದಿಂದಲೇ ಲಸಿಕೆ ನೀಡಲು ನಾವು ತಯಾರಿ ಮಾಡಿಕೊಳ್ಳುತ್ತಿದ್ದೇವೆ. 6-12 ವರ್ಷದ ಮಕ್ಕಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ನೋಡಿಕೊಂಡು ಲಸಿಕೆ ಉಚಿತವಾಗಿ ನೀಡುವುದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಮುಖ್ಯಮಂತ್ರಿಗಳು ಯಾವ ನಿರ್ದೇಶನ ನೀಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದರು.