ಬೆಂಗಳೂರು – ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಬೇಕಾ ಹಾಗಾದರೆ ಅರ್ಜಿ ಶುಲ್ಕ ಕೊಟ್ಟು ಅರ್ಜಿ ಪಡೆದು ಡಿ.ಡಿ.ಜೊತೆ ಅರ್ಜಿ ಸಲ್ಲಿಸೋದು ಕಡ್ಡಾಯ . ಆನಂತರ ಅದನ್ನು ಪರಿಶೀಲನಾ ಸಮಿತಿ ಪರಮಾರ್ಷೆ ಮಾಡಲಿದೆ.
ಹೀಗೊಂದು ನಿಯಮವನ್ನು ಪ್ರದೇಶ ಕಾಂಗ್ರೆಸ್ ರೂಪಿಸಿದೆ. ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿರುವವರು ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 5 ರಿಂದ 15 ರವರೆಗೆ ಅರ್ಜಿ ಹಾಕಬಹುದು. ಅರ್ಜಿಗೆ ₹5 ಸಾವಿರ ಶುಲ್ಕ ಕಡ್ಡಾಯ ಮಾಡಲಾಗಿದೆ.
ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗದವರು ₹2 ಲಕ್ಷ ಡಿ.ಡಿ.ಯ ಜೊತೆಗೆ ತಮ್ಮ ಕಾಂಗ್ರೆಸ್ ಸದಸ್ಯತ್ವ ವಿವರ ಲಗತ್ತಿಸಬೇಕು. ಪರಿಶಿಷ್ಟ ವರ್ಗದವರಿಗೆ ಶೇ. 50 ರಷ್ಟು ವಿನಾಯಿತಿ ನೀಡಲಾಗಿದೆ.ಡಿಡಿ ಹಾಗೂ ಅರ್ಜಿ ಶುಲ್ಕದ ಮೂಲಕ ಸಂಗ್ರಹವಾಗುವ ಈ ಹಣ ಪಕ್ಷದ ಕಟ್ಟಡ ಕಾಮಗಾರಿ ನಿಧಿಗೆ ಜಮೆ ಆಗಲಿದೆ.
ಸುದ್ದಿಗಾರರೊಂದಿಗೆ ಈ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘2023 ರ ಚುನಾವಣೆಯಲ್ಲಿ ಹಾಲಿ ಶಾಸಕರ ಸಮೇತ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ನಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಅರ್ಜಿ ಹಾಕಬೇಕು. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಸ್ಪಷ್ಟಪಡಿಸಿದರು.
ಪಕ್ಷಕ್ಕೆ ಮರಳಿ:
ವಿವಿಧ ಕಾರಣಗಳಿಂದ ಪಕ್ಷ ಬಿಟ್ಟವರು ಮತ್ತೆ ಪಕ್ಷ ಸೇರಲು ಅವಕಾಶ ನೀಡಲಾಗಿದೆ. ಅಂತವರನ್ನು ಮತ್ತೆ ಸೇರಿಸಿಕೊಳ್ಳುವ ವಿಚಾರದಲ್ಲಿ ಮುಕ್ತ ಅವಕಾಶ ನೀಡಿದ್ದೇವೆ. ಅದಕ್ಕಾಗಿ ಒಂದು ಸಮಿತಿ ಇದೆ. ಪಕ್ಷದ ಸಿದ್ಧಾಂತ ಒಪ್ಪಿಕೊಳ್ಳುವ ಯಾರು ಬೇಕಾದರೂ ಅರ್ಜಿ ಹಾಕಬಹುದು ಆದರೆ ಯಾರನ್ನು ಸೇರಿಸಿಕೊಳ್ಳಬೇಕು ಯಾರನ್ನು ಸೇರಿಸಿಕೊಳ್ಳಬಾರದು ಎಂಬ ನಿರ್ಧಾರವನ್ನು ಸಮಿತಿ ಕೈಗೊಳ್ಳಲಿದೆ’ ಎಂದು ಹೇಳಿದರು.
ಹಲವು ಮಂದಿ ಕಾಂಗ್ರೆಸ್ ಸದಸ್ಯತ್ವ ಪಡೆಯಲು ಉತ್ಸುಕರಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಆನ್ ಲೈನ್ ಮೂಲಕ ನೋಂದಣಿ ಆರಂಭಿಸಿದ್ದೇವೆ. ಕೆಲವು ನಾಯಕರು ಕಾಂಗ್ರೆಸ್ ಸೇರಲು ಬಯಸಿದ್ದು, ನನ್ನ ಸಂಪರ್ಕದಲ್ಲಿದ್ದಾರೆ. ಅವರ ಹೆಸರನ್ನು ಈಗ ಬಹಿರಂಗ ಪಡಿಸುವುದಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವ ಒಪ್ಪಿ ಬೇಷರತ್ತಾಗಿ ಪಕ್ಷ ಸೇರಲು ಬಯಸುವವರು ಅರ್ಜಿ ಹಾಕಬಹುದು. ಅವರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಸರ್ವೋದಯ ಸಮಾವೇಶ:
ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಮೊದಲ ಬಾರಿಗೆ ಇದೇ 6 ರಂದು ಆಗಮಿಸುತ್ತಿದ್ದು, ಅವರನ್ನು ಅಭಿನಂದಿಸಲು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸರ್ವೋದಯ ಸಮಾವೇಶ ಆಯೋಜಿಸಲಾಗಿದೆ.
ರಾಜ್ಯದ ವಿವಿಧ ಮೂಲೆಯಿಂದ ಜನ ಆಗಮಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮಧ್ಯಾಹ್ನ ಹಮ್ಮಿಕೊಂಡಿದ್ದೇವೆ. ರಾಜ್ಯದ ಎಲ್ಲ ನಾಯಕರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಆಗಮಿಸಲಿದ್ದಾರೆ. ಅವರು ಎರಡು ದಿನ ಮುಂಚಿತವಾಗಿ ಆಗಮಿಸಲಿದ್ದಾರೆ. ರಾಜ್ಯದ ವಿವಿಧ ನಾಯಕರ ಜತೆ ಒಂದು ವಾರ ಸಭೆ ನಡೆಸಲಿದ್ದಾರೆ ಎಂದು ಹೇಳಿದರು.
Previous Articleಸುಧಾ ಮೂರ್ತಿ ಏನು ಹೇಳಿದ್ದಾರೆ…ಕೇಳಿ!
Next Article ಮಡಿಕೇರಿಯ ತುಫೈಲ್ ಬಂಧನ ಯಾವಾಗ?