ಶಿವಮೊಗ್ಗ,ನ.5-ಬಂಧಿಸಲು ಬೆನ್ನಟ್ಟಿ ಹೋದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಆರೋಪಿಗೆ ಗುಂಡು ಹೊಡೆದು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಪೊಲೀಸರ ಗುಂಡು ಎಡಗಾಲಿಗೆ ತಗುಲಿ ಗಾಯಗೊಂಡ ಅಸ್ಲಂ ಮೆಗ್ಗಾನ್
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪುರಲೆ ರಸ್ತೆಯಲ್ಲಿ ನಿರ್ಮಾಣವಾಗಿರುವ ಬಡಾವಣೆಯೊಂದರಲ್ಲಿ ಅಸ್ಲಂ ಅವಿತುಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಠಾಣೆ ಪೊಲೀಸರು ಆತನ ಬಂಧನಕ್ಕೆ ತೆರಳಿದ್ದರು.
ದೊಡ್ಡಪೇಟೆ ಠಾಣೆ ಪಿಎಸ್ಐ ವಸಂತ್ ಅವರ ನೇತೃತ್ವದಲ್ಲಿ ಅಸ್ಲಂ ಬಂಧನಕ್ಕೆ ತೆರಳಲಾಗಿತ್ತು. ಈ ಸಂದರ್ಭ ಅಸ್ಲಂ, ಪೊಲೀಸ್ ಸಿಬ್ಬಂದಿ ರಮೇಶ್ ಅವರ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ರಮೇಶ್ ಅವರು ಗಾಯಗೊಂಡಿದ್ದಾರೆ. ದಾಳಿ ನಡೆಸಿ ಅಸ್ಲಂ ಪರಾರಿಯಾಗಲು ಯತ್ನಿಸಿದ್ದಾನೆ.
ಆತ್ಮ ರಕ್ಷಣೆಗಾಗಿ ಗುಂಡು:
ಪರಾರಿಯಾಗಲು ಯತ್ನಿಸಿದ ಅಸ್ಲಂಗೆ ಪಿಎಸ್ಐ ವಸಂತ್ ಅವರು ಎಚ್ಚರಿಕೆ ನೀಡಿದ್ದಾರೆ ಆದರೂ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ. ಅಸ್ಲಂನ ಎಡಗಾಲಿಗೆ ಗುಂಡು ತಾಗಿದ್ದು, ಆತ ಗಾಯಗೊಂಡಿದ್ದಾನೆ. ಕೂಡಲೆ ಪೊಲೀಸ್ ಸಿಬ್ಬಂದಿ ರಮೇಶ್ ಮತ್ತು ಆರೋಪಿ ಅಸ್ಲಂನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಪೊಲೀಸ್ ಸಿಬ್ಬಂದಿ ರಮೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಸ್ಲಂಗೆ ವಿರುದ್ಧ ವಿವಿಧ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ.ಕಳೆದ ಆ.30ರಂದು ರಾತ್ರಿ ಬಿ.ಹೆಚ್.ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಅಶೋಕ್ ಪ್ರಭು ಎಂಬಾತನ ಜೊತೆಗೆ ನಾಲ್ವರು ಕ್ಷುಲಕ ವಿಚಾರಕ್ಕೆ ಜಗಳವಾಡಿದ್ದರು.
ಹರಿತವಾದ ಆಯುಧದಿಂದ ಅಶೋಕ್ ಪ್ರಭು ಎಡಗಲ್ಲದ ಮೇಲೆ ಹಲ್ಲೆ ಮಾಡಿದ್ದರು. ಗಾಯಗೊಂಡಿದ್ದ ಅಶೋಕ್ ಪ್ರಭು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಪ್ರಕರಣ ಸಂಬಂಧ ಸಾಗರದ ಆಸೀಫ್ ಅಲಿಯಾಸ್ ಚೆಲ್ಲಿ (26) ಎಂಬಾತನ್ನು ಶುಕ್ರವಾರ ಬಂಧಿಸಲಾಗಿತ್ತು. ಮತ್ತೊಬ್ಬ ಆರೋಪಿ ಅಸ್ಲಂ ಎಂಬಾತ ಪುರಲೆ ರಸ್ತೆಯಲ್ಲಿ ಬಡಾವಣೆಯಲ್ಲಿ ಅಡಗಿರುವ ಖಚಿತ ಮಾಹಿತಿ ಲಭ್ಯವಾಗಿತ್ತು ಎಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
Previous Articleತಿರುಪತಿ, ಧರ್ಮಸ್ಥಳದಲ್ಲಿ ದರ್ಶನಕ್ಕೆ ಅಡ್ಡಿ
Next Article ತಿರುಪತಿ ತಿಮ್ಮಪ್ಪನ ಆದಾಯ ಎಷ್ಟು ಗೊತ್ತಾ?