ಡೆ
ಮುಂಬಯಿ: ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಅವರು ಕಳೆದ ವಾರ ಕೋವಿಡ್ ಸೋಂಕಿಗೆ ತುತ್ತಾದ ಬೆನ್ನಲ್ಲೇ ತಂಡದ ಕ್ಯಾಂಪ್‌ನಲ್ಲಿ ಮತ್ತೆರಡು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ಆತಂಕ ಮೂಡಿಸಿವೆ. ಈ ಪೈಕಿ ಒಬ್ಬರು ವಿದೇಶಿ ಆಟಗಾರರು ಹಾಗು ಮತ್ತೊಬ್ಬರು ಬೆಂಬಲ ಸಿಬ್ಬಂದಿ ಎಂದು ತಿಳಿದುಬಂದಿದೆ.
ಡೆಲ್ಲಿ ಕ್ಯಾಪಿಟಲ್ ತಂಡವು ಏ. 20 ಹಾಗೂ 22ರಂದು ಪುಣೆಯಲ್ಲಿ ಎರಡು ಪಂದ್ಯಗಳನ್ನು ಆಡಬೇಕಿದೆ. ಆದರೆ, ಕೋವಿಡ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ತಂಡವು ಪುಣೆಗೆ ಪಯಣಿಸುವುದನ್ನು ತಡೆಯಲಾಗಿದೆ. ತಂಡದ ಎಲ್ಲ ಸದಸ್ಯರನ್ನೂ ಕೊಠಡಿಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ, ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡಲಾಗಿದ್ದು, ಇವುಗಳ ಫಲಿತಾಂಶದ ಆಧಾರದಲ್ಲಿ ಮುಂದಿನ ನಡೆಯನ್ನು ನಿರ್ಧರಿಸಲಾಗುವುದು. ಎ. 20ರಂದು ಡೆಲ್ಲಿ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯವನ್ನು ಆಡಬೇಕಿದೆ. ಅದನ್ನು ಮರುನಿಗದಿ ಮಾಡಲಾಗುವುದೇ ಎನ್ನುವ ಕುರಿತು ಸ್ಪಷ್ಟ ಮಾಹಿತಿಗಳು ಇನ್ನೂ ಲಭ್ಯವಿಲ್ಲ. ಐಪಿಎಲ್ ನಿಯಮಗಳ ಪ್ರಕಾರ ಕೋವಿಡ್‌ಗೆ ತುತ್ತಾದ ವ್ಯಕ್ತಿಯನ್ನು ಕನಿಷ್ಠ 7 ದಿನಗಳ ಕಾಲ ಐಸೋಲೇಶನ್‌ಗೆ ಒಳಪಡಿಸಲಾಗುವುದು. ಬಯೋ ಬಬಲ್‌ಗೆ ಮರಳಲು 24 ಗಂಟೆಗಳ ಅಂತರದಲ್ಲಿ ಮಾಡಲಾದ ಎರಡು ಆರ್‌ಟಿ-ಪಿಸಿಆರ್ ಪರೀಕ್ಷೆಗಳಲ್ಲಿ ನೆಗೆಟಿವ್ ಫಲಿತಾಂಶಗಳನ್ನು ಹೊಂದಿರಬೇಕು. ಕನಿಷ್ಠ 12 ಆಟಗಾರರು ಲಭ್ಯರಿರುವ ತಂಡ (ಇದರಲ್ಲಿ ಕನಿಷ್ಠ 7 ಭಾರತೀಯರಿರಬೇಕು ಮತ್ತು ಒಬ್ಬರು ಬದಲಿ ಕ್ಷೇತ್ರರಕ್ಷಕರಿರಬೇಕು) ಮಾತ್ರ ಪಂದ್ಯವನ್ನು ಆಡಬಹುದು. ಕಳೆದ ವರ್ಷವೂ ಕೋವಿಡ್ ಕಾರಣಕ್ಕೆ ಅರ್ಧದಲ್ಲಿ ಟೂರ್ನಿಯನ್ನು ಸ್ಥಗಿತಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.