ಬೆಂಗಳೂರು,ನ.22- ಮಂಗಳೂರು ಆಟೋ ರಿಕ್ಷಾ ಸ್ಫೋಟ ಪ್ರಕರಣಕ್ಕೆ ನಗರದ ಲಿಂಕ್ ಇರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಬಾಂಬ್ ಸ್ಫೋಟ ನಡೆಸಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶಾರಿಕ್ ಸಂಪರ್ಕಿತ ರುಹುಲ್ಲಾ ನಗರದಲ್ಲಿ ಪತ್ತೆಯಾಗಿದ್ದಾನೆ.
ಕೆಜಿ ಹಳ್ಳಿ ಸಮೀಪ ರುಹಲ್ಲಾ ಮೊಬೈಲ್ ಲೋಕೇಷನ್ ಪತ್ತೆಯಾಗಿದೆ. ಅಲ್ಲಿಗೆ ಭೇಟಿ ನೀಡಿ, ತನಿಖೆ ನಡೆಸಿದ ಪೊಲೀಸರು ಮೊಬೈಲ್, ಲ್ಯಾಪ್‌ಟಾಪ್ ಪರಿಶೀಲಿಸಿದಾಗ ಶಾರಿಕ್ ಜೊತೆ ರುಹುಲ್ಲಾ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ.
ಬಳಿಕ ಶಂಕಿತ ರುಹಲ್ಲಾನನ್ನು ಮೈಸೂರು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಶಾರಿಕ್ ತನ್ನ ಸ್ನೇಹಿತ ಮಾಝ್ ಬಂಧನವನ್ನು ಸಹಿಸದ ಪ್ರತೀಕಾರಕ್ಕೆ ಇಳಿದು, ಬಾಂಬ್ ಸ್ಫೋಟಿಸಲು ಮುಂದಾಗಿದ್ದ. ಗುರು ಯಾಸೀನ್, ಸ್ನೇಹಿತ ಮಾಝ್ ಬಂಧನದ ಸೇಡಿಗೆ ಪ್ರತೀಕಾರ ತೀರಿಸಿಕೊಳ್ಳಲು ಹೀಗೆ ಮಾಡಿದ್ದ. ಅಲ್ಲದೇ, ಈ ಮೂವರು ಭಾರತವನ್ನು ಇಸ್ಲಾಂ ರಾಷ್ಟ್ರವಾಗಿ ಮಾಡುವ ಗುರಿ ಹೊಂದಿದ್ದರು ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.
ಲಕ್ಷ-ಲಕ್ಷ ಹಣ:
ಬಾಂಬ್ ಸ್ಫೋಟ ಪ್ರಕರಣದ ಬಳಿಕ ಶಾರಿಕ್ ಸಹೋದರಿಯರ ಖಾತೆಗೆ ಲಕ್ಷ- ಲಕ್ಷ ಹಣ ಹರಿದುಬಂದಿದೆ ಎಂದು ಹೇಳಲಾಗುತ್ತಿದೆ. ಇಷ್ಟೊಂದು ಹಣ ಶಾರೀಕ್‌ಗೆ ಬರುತ್ತಿದ್ದಿದ್ದು ಎಲ್ಲಿಂದ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಭಾರತವನ್ನು ಗುರಿಯಾಗಿಸಿಕೊಂಡು ವಿದೇಶದಿಂದ ಫಂಡಿಂಗ್ ಮಾಡ್ತಿದ್ದಾರಾ? ಶಾರಿಕ್‌ಗೂ ವಿದೇಶದಿಂದಲೇ ಫಂಡಿಂಗ್ ಮಾಡಲಾಗುತ್ತಿತ್ತು ಎನ್ನುವ ಅನುಮಾನ ವ್ಯಕ್ತವಾಗಿದೆ.
ಮೂವರು ನಾಪತ್ತೆ:
ಐಸಿಸ್ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಶಂಕಿಸಲಾಗಿರುವ, 2020ರಿಂದ ನಾಪತ್ತೆಯಾಗಿರುವ ಮೂವರು ವ್ಯಕ್ತಿಗಳು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಖ್ಗೆ ತಾಂತ್ರಿಕ ಹಾಗೂ ಹಣಕಾಸು ನೆರವು ನೀಡಿರಬಹುದು. ಅವರೇ ಈತನ ‘ಹ್ಯಾಂಡ್ಲರ್’ ಸಹ ಆಗಿರಬಹುದು.
ಪೊಲೀಸ್ ಪರಿಭಾಷೆಯಲ್ಲಿ ‘ಹ್ಯಾಂಡ್ಲರ್’ ಎಂದರೆ ಉಗ್ರಗಾಮಿ ಚಟುವಟಿಕೆ ನಡೆಸಲು ಗುರುತಿಸಿದ ವ್ಯಕ್ತಿಯ ಕಾರ್ಯನಿರ್ವಹಣೆಯನ್ನು ದೂರದಿಂದಲೇ ನಿಯಂತ್ರಿಸುವುದು ಎಂಬ ಅರ್ಥವಿದೆ ಎಂದು
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಐಸಿಸ್ ಜೊತೆಗೆ ನಂಟು:
ಐಸಿಸ್ ಜೊತೆಗೆ ನಂಟು ಹೊಂದಿರುವ ಶಂಕೆ ಇರುವ ಮುಸಾಬಿರ್ ಹುಸೇನ್, ಅಬ್ದುಲ್ ಮಥೀನ್ ತಾಹಾ ಮತ್ತು ಅರಾಫತ್ ಅಲಿ ಜಂಟಿಯಾಗಿ ಶಾರಿಕ್ನ ಚಟುವಟಿಕೆಗಳನ್ನು ನಿರ್ವಹಿಸಿರುವ ಸಾಧ್ಯತೆಯಿದೆ. ಅವರೇ ಶಾರಿಕ್ಗೆ ಹಣಕಾಸು ಹೊಂದಿಸಿಕೊಡುವುದರ ಜೊತೆಗೆ ಹ್ಯಾಂಡ್ಲರ್ಗಳಾಗಿಯೂ ಕಾರ್ಯನಿರ್ವಹಿಸಿರಬಹುದು ಎಂದು ತಿಳಿಸಿದರು.
ಶಾರಿಕ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಾಸಿ ಎಂದು ಸ್ಪಷ್ಟವಾಗಿದೆ. ಈತನ ಮೇಲೆ ಈ ಮೊದಲು ಮೂರು ಪ್ರಕರಣಗಳು ದಾಖಲಾಗಿವೆ. ಮುಸಾಬಿರ್ ಹುಸೇನ್ ಮತ್ತು ಮಥೀನ್ ತಾಹಾ ವಿರುದ್ಧ 2020ರಲ್ಲಿ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿತ್ತು.
ನಾಲ್ವರನ್ನು ಬಂಧನ:
ಇನ್ನು ಗೋಡೆ ಬರಹ ಪ್ರಕರಣದಲ್ಲಿ ತಲೆಮರೆಸಿಕೊಂಡ ಅರಾಫತ್ ಅಲಿ ದುಬೈನಲ್ಲಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಈವರೆಗೂ ನಾಲ್ವರನ್ನು ಬಂಧಿಸಲಾಗಿದೆ. ಮೈಸೂರಿನ ಇಬ್ಬರು, ಮಂಗಳೂರಿನ ಒಬ್ಬ ಹಾಗೂ ಊಟಿಯಿಂದ ಒಬ್ಬನನ್ನು ಬಂಧಿಸಿ ಕರೆತರಲಾಗಿದೆ ಎಂದರು.
ಕೊಯಮತ್ತೂರು, ಕೇರಳ, ತಮಿಳುನಾಡು ತಿರುಗಾಡಿ ಕಳೆದ ಸೆ.20ರಂದು ಮೈಸೂರಿಗೆ ಶಾರಿಕ್ ಬಂದಿದ್ದ. ಮೈಸೂರಿನ ಲೋಕ ನಾಯಕ ನಗರದಲ್ಲಿ ಮೋಹನ್‍ಕುಮಾರ್ ಎಂಬುವರ ಮನೆಯಲ್ಲಿ ಬಾಡಿಗೆಗೆ ಇದ್ದನು. ಮನೆ ಮಾಲೀಕರಿಗೆ ಈತನ ಬಗ್ಗೆ ಗೊತ್ತಿರಲಿಲ್ಲ. ಹುಬ್ಬಳ್ಳಿ–ಧಾರವಾಡ ನಿವಾಸಿ ಪ್ರೇಮ್‍ರಾಜ್ ಎಂಬ ಆಧಾರ್ ಕಾರ್ಡ್ ಹೊಂದಿದ್ದನು ಎಂದು ಹೇಳಿದರು.