ಬೆಂಗಳೂರು. ಡಿ,7- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ನಡೆದಿರುವ ಅಕ್ರಮಕ್ಕೆ ಕೊನೆಯೇ ಇಲ್ಲದಂತಾಗಿದೆ.ಶಿವಾಜಿನಗರ ಮಹದೇವಪುರ ಕ್ಷೇತ್ರದಲ್ಲಿ ನಡೆದ ಪರಿಷ್ಕರಣೆಯ ಅಕ್ರಮದ ಹಿನ್ನೆಲೆಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಸೇರಿದಂತೆ ಹಲವರು ಸೇವೆಯಿಂದ ಅಮಾನತುಗೊಂಡಿದ್ದಾರೆ
ಇದೀಗ ಬೆಂಗಳೂರಿನ ಇತರೆ ವಿಧಾನಸಭಾ ಕ್ಷೇತ್ರಗಳಲ್ಲೂ ಇಂತಹುದೇ ಅಕ್ರಮ ನಡೆದಿರುವ ಆರೋಪಗಳು ಕೇಳಿಬಂದಿವೆ.ಈ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಪಟ್ಟಿ ಪರಿಶೀಲನೆ ಆರಂಭಿಸಿದ್ದಾರೆ.
ಇಂತಹ ಪ್ರಕ್ರಿಯೆ ಆರಂಭಿಸಿರುವ ಮಾಜಿ ಮಂತ್ರಿ ಕೃಷ್ಣ ಬೈರೇಗೌಡ ಬ್ಯಾಟರಾಯನ ಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗಾಗಿ ಬೇಡಿಕೆ ಸಲ್ಲಿಸಿದ್ದಾರೆ. ಬೂತ್ ವಾರು ಪರಿಷ್ಕರಣೆಯಾಗಿರುವ ಪಟ್ಟಿಯಲ್ಲಿ ಸೇರ್ಪಡೆಯಾದ ಹಾಗೂ ಕೈಬಿಟ್ಟ ಮತದಾರರ ಹೆಸರು ಪರಿಶೀಲಿಸಲು ಇದು ಅಗತ್ಯ ಎಂದು ಅಧಿಕಾರಿಗಳಿಗೆ ಮನವಿ ಮಾಡಿ ಎರಡು ವಾರ ಕಳೆದರೂ ಪಟ್ಟಿ ಪೂರೈಸಿಲ್ಲ.
ಮಾಜಿ ಮಂತ್ರಿ ಹಾಗೂ ಕ್ಷೇತ್ರದ ಹಾಲಿ ಶಾಸಕರೇ ಪತ್ರ ಬರೆದು ಕೇಳಿದರೂ,ವಿವರ ಲಭ್ಯವಾಗಿಲ್ಲ.ಇದನ್ನು ಗಮನಿಸಿದರೆ,ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ಅನುಮಾನಗಳು ಮೂಡುತ್ತವೆ.
ಹೀಗಾಗಿ ರಾಜ್ಯದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುವ ಕೃಷ್ಣ ಬೈರೇಗೌಡ,ಕ್ಷೇತ್ರದಲ್ಲಿ ಹಲವರ ಮತದಾರರ ಹೆಸರನ್ನು ಪಟ್ಟಿಯಿಂದ ಬಿಡಲಾಗಿದೆ.ಇದಕ್ಕಾಗಿಯೇ ತಮಗೆ ಪಟ್ಟಿ ನೀಡುತ್ತಿಲ್ಲ ಎಂದಿದ್ದಾರೆ.