ಬೆಂಗಳೂರು,ಜ.14- ಅನೇಕ ಪ್ರಭಾವಿಗಳ ಜಾತಕ ನನ್ನ ಕೈಯಲ್ಲಿದೆ ಹುಷಾರ್! ಏನ್ ಮಾಡಬೇಕು ಅಂತ ನನಗೆ ಚೆನ್ನಾಗಿ ಗೊತ್ತು. ಸರಿಯಾದ ಸಮಯಕ್ಕೆ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ನೋಡ್ತಾ ಇರಿ..ಇದು ತಮ್ಮನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಸ್ಯಾಂಟ್ರೋ ರವಿ ಹೇಳಿದ ಮಾತು.
ಗುಜರಾತಿನ ಅಹಮದಾಬಾದ್ ನಲ್ಲಿ ಸಿಕ್ಕಿಬಿದ್ದಿರುವ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್‌ನನ್ನು ಮೈಸೂರಿಗೆ ಕರೆತಂದಿರುವ ಪೊಲೀಸರು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.ಸ್ವತಃ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರೆ ವಿಚಾರಣೆ ನೇತೃತ್ವ ವಹಿಸಿದ್ದಾರೆ.
ಅಲೋಕ್ ಅವರ ಮುಂದೆ ತನ್ನ ಸಂಪರ್ಕ, ಕೆಲವು ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಒಡನಾಟ, ಗೃಹ ಸಚಿವರ ಕಚೇರಿಯ ಸಿಬ್ಬಂದಿ ಹಾಗೂ ಪೊಲೀಸ್ ಮಹಾ ನಿರ್ದೇಶಕರ ಕಚೇರಿ ಸಿಬ್ಬಂದಿ ತನ್ನೊಂದಿಗೆ ಹೊಂದಿರುವ ನಂಟಿನ ಬಗ್ಗೆ ಕೆಲವು ಮಾಹಿತಿ ನೀಡಿದ್ದು ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದ್ದಾನೆ ಎನ್ನಲಾಗಿದೆ.
ಅಧಿಕಾರಸ್ಥ ರಾಜಕಾರಣಿಗಳ ಆಪ್ತರು, ಹಿರಿಯ ಅಧಿಕಾರಿಗಳು ಈತನ ಮೊಬೈಲ್ ಗೆ ಕಳುಹಿಸಿರುವ ಸಂದೇಶ,ಹಾಗೂ ಕೆಲವು ದೃಶ್ಯಗಳನ್ನು ನೋಡಿದ ಅಲೋಕ್ ಕುಮಾರ್ ಬೆಚ್ಚಿಬಿದ್ದಿದ್ದಾರೆ,ಅವುಗಳ ವಿವರ ಕೇಳಿದಾಗ ಅನೇಕ ಪ್ರಭಾವಿಗಳ ಜಾತಕ ನನ್ನ ಕೈಯಲ್ಲಿದೆ ಸಮಯ ಬಂದಾಗ ಹೇಳುತ್ತೇನೆ ಎಂದು ತಕ್ಷಣಕ್ಕೆ ಯಾವುದೇ ಮಾಹಿತಿ ನೀಡದೆ ನುಣುಚಿಕೊಳ್ಳುತ್ತಿದ್ದಾನೆನ್ನಲಾಗಿದೆ.
ಪತ್ನಿಗೆ ವಂಚನೆ, ಅತ್ಯಾಚಾರ ಪ್ರಕರಣದ ಆರೋಪಿ, ಪೊಲೀಸ್ ಅಧಿಕಾರಿಗಳ ವರ್ಗಾವಣೆ ದಂಧೆಯ ಕಿಂಗ್ಪಿನ್ ಸ್ಯಾಂಟ್ರೋ ರವಿಯನ್ನ ಗುಜರಾತ್ನ ಅಹಮದಾಬಾದ್ನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿ ಕರೆ ತಂದಿದ್ದಾರೆ.
ಸ್ಯಾಂಟ್ರೋ ರವಿ ಜೊತೆಗೆ ಬಂಧಿತ ರಾಮ್ ಜಿ (45), ಸತೀಶ್ ಕುಮಾರ್ (35) ಹಾಗೂ ಪ್ರಕರಣದ ಸಂಬಂಧಿಸಿದಂತೆ ರಾಜ್ಯದಲ್ಲಿ ಮಧುಸೂದನ್ ನನ್ನು ವಿಚಾರಣೆ ನಡೆಸಲಾಗಿದೆ.
ಸ್ಯಾಂಟ್ರೋ ರವಿ ವೇಶ್ಯಾವಾಟಿಕೆಯಿಂದ ಹಿಡಿದು ವರ್ಗಾವಣೆ ದಂಧೆವರೆಗೆ ಪಳಗಿದ್ದ. ಮದುವೆ, ಉದ್ಯೋಗ ಮತ್ತಿತರ ಆಸೆ, ಆಮಿಷಗಳನ್ನು ಒಡ್ಡಿ ಹಲವು ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಿದ್ದ ಎಂಬ ಸಂಗತಿಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಈತನ ಮೇಲೆ 1995ರಿಂದ ಇಲ್ಲಿಯವರೆಗೆ ಮೈಸೂರು, ಬೆಂಗಳೂರು, ಮಂಡ್ಯ ಮೊದಲಾದ ಕಡೆ 22 ಪ್ರಕರಣಗಳು ದಾಖಲಾಗಿವೆ. 2005ರಲ್ಲಿ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದು, ಜೈಲಿಗೆ ಹೋಗಿ ಬಂದಿದ್ದ. ಈತನ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಜೈಲಿನಲ್ಲಿರುವಾಗಲೇ ಹಲವಾರು ಪಾತಕಿಗಳ ಸಂಪರ್ಕ ಬೆಳೆಸಿಕೊಂಡಿದ್ದ. ಮದುವೆ, ಉದ್ಯೋಗ ಮತ್ತಿತರ ಆಸೆ, ಆಮಿಷಗಳನ್ನು ಒಡ್ಡಿ, ಹಲವು ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಿದ್ದ. ಈ ಮಧ್ಯೆ, ಆತ ಸ್ಯಾಂಟ್ರೋ ಕಾರನ್ನೇ ತನ್ನ ದಂಧೆಗೆ ಹೆಚ್ಚಾಗಿ ಬಳಸುತ್ತಿದ್ದ. ಹೀಗಾಗಿ, ಆತನಿಗೆ ಸ್ಯಾಂಟ್ರೋ ರವಿ ಎಂಬ ಹೆಸರು ಬಂತು.
ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳ ಸಖ್ಯ ಬೆಳೆಸಿಕೊಂಡು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದ. ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿಯೇ ತಿಂಗಳಾನುಗಟ್ಟಲೇ ಉಳಿದುಕೊಂಡು ದಂಧೆ ನಡೆಸಿಕೊಂಡಿದ್ದ. ಕೋಟ್ಯಂತರ ರು. ಸಂಪಾದಿಸಿ, ಆಸ್ತಿಪಾಸ್ತಿ ಮಾಡಿಕೊಂಡಿದ್ದ.
ಮೂರು ತಿಂಗಳ ಹಿಂದೆ ರವಿ ‘ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಮನೆಗೆ ಬರುತ್ತಾರೆ. ಆತನೊಂದಿಗೆ ಮಲಗು. ನಮಗೆ ಒಳ್ಳೆಯ ದುಡ್ಡು ಸಿಗುತ್ತದೆ. ಜೊತೆಗೆ ನಮ್ಮ ಕೆಲಸಗಳು ಆಗುತ್ತವೆ’ ಎಂದು ಪತ್ನಿಯನ್ನು ಪುಸಲಾಯಿಸಲು ನೋಡಿದ್ದ. ಆಕೆ ತಿರಸ್ಕರಿಸಿದ್ದಳು. ಈ ಘಟನೆ ಬಳಿಕ, ಆಕೆ ಈತನಿಂದ ದೂರವಾದಳು. ಆ ಸಮಯದಲ್ಲಿ ಈತನ ಲ್ಯಾಪ್‌ಟಾಪ್ ಕಾಣೆಯಾಗಿದ್ದು, ಅದರಲ್ಲಿ ಆತನ ದಂಧೆಯ ವಿವರಗಳಿದ್ದವು. ಯುವತಿಯರಿಗೆ ಕಾರಿನ ನಂಬರ್ ನೀಡಿ, ಹೈಲೆವೆಲ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಇತ್ತು. ಅದು ಬಹಿರಂಗವಾದರೆ ಕಷ್ಟಎಂದು ಆಕೆಯ ವಿರುದ್ಧ ಬೆಂಗಳೂರಿನಲ್ಲಿ ಕೇಸು ಹಾಕಿಸಿ, ಆಕೆ ಹಾಗೂ ನಾದಿನಿಯನ್ನು ಜೈಲಿಗೆ ಹಾಕಿಸಿದ್ದ. ಆಕೆ ಜಾಮೀನಿನ ಮೇಲೆ ಈಚೆ ಬಂದ ನಂತರ, ಒಡನಾಡಿ ಸಂಸ್ಥೆಯ ಆಶ್ರಯಕ್ಕೆ ಬಂದು, ಆತನ ವಿರುದ್ಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಅಲ್ಲಿಂದೀಚೆಗೆ ಆತನ ಎಲ್ಲಾ ಹಗರಣಗಳು ಬಹಿರಂಗವಾದವು. ಹೊರ ರಾಜ್ಯಗಳ ಪೊಲೀಸರಿಂದಲೂ ನೆರವು ಸ್ಯಾಂಟ್ರೋ ರವಿಯನ್ನು ಬಂಧಿಸಲು ಮೈಸೂರು ನಗರ ಪೊಲೀಸರಿಗೆ ವಿವಿಧ ಜಿಲ್ಲೆಯ ಪೊಲೀಸರು, ಗುಜರಾತ್ ಸೇರಿದಂತೆ ಹೊರ ರಾಜ್ಯದ ಪೊಲೀಸರು ಸಹಕಾರ, ಸಾಥ್ ನೀಡಿದ್ದಾರೆ. ರಾಜ್ಯ ಪೊಲೀಸರು ಎಲ್ಲೆಡೆ ಸಾಂಘಿಕವಾಗಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿಯ ಪತ್ತೆಗಾಗಿ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ರಾಮನಗರ ಎಸ್ಪಿ ಡಾ. ಸಂತೋಷ್ ಬಾಬು, ಮಂಡ್ಯ ಎಸ್ಪಿ ಎನ್. ಯತೀಶ್, ರಾಯಚೂರು ಎಸ್ಪಿ ಬಿ. ನಿಖಿಲ್ ನೇತೃತ್ವದಲ್ಲಿ ವಿವಿಧ ತಂಡಗಳನ್ನು ರಚಿಸಲಾಗಿತ್ತು.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಚಿವರೊಂದಿಗೆ ಸ್ಯಾಂಟ್ರೋ ರವಿ ಇರುವ ವಿಡಿಯೋ ಕ್ಲಿಪಿಂಗ್ ಬಿಡುಗಡೆ ಮಾಡಿದ ನಂತರ ಪ್ರಕರಣಕ್ಕೆ ಮತ್ತಷ್ಟುತಿರುವು ಸಿಕ್ಕಿತು. ಆತ ಹಳೆಯ ಪ್ರಕರಣದ ತಪ್ಪೊಪ್ಪಿಗೆಯಲ್ಲಿ ತಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದು ಬಹಿರಂಗವಾಯಿತು. ಇದು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಯಿತು.
ಬಳಿಕ, ತನ್ನ ಬಂಧನ ಖಚಿತ ಎಂಬುದು ಗೊತ್ತಾದ ಕೂಡಲೇ ಆತ ತಲೆ ಮರೆಸಿಕೊಂಡ. ಈ ಮಧ್ಯೆ, ಮೈಸೂರಿನ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ. ಇದರ ವಿಚಾರಣೆ ಜ.17ಕ್ಕೆ ನಿಗದಿಯಾಗಿದೆ.
Previous Articleಹೈ ಪ್ರೊಫೈಲ್ ಗಾಂಜಾ ದಂಧೆ
Next Article ಬೆಂಗಳೂರು VV campusನಲ್ಲಿ ಚಿರತೆಯಲ್ಲ ಕಾಡುಬೆಕ್ಕು