ಬೆಂಗಳೂರು,ಜ.21- ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಚೌಕಟ್ಟು ಬಿದ್ದು ತಾಯಿ, ಮಗು ಸಾವನ್ನಪ್ಪಿದ ಪ್ರಕರಣಕ್ಕೆ
ಇಂಜಿನಿಯರಿಂಗ್ ವೈಫಲ್ಯ ಹಾಗೂ ಕಳಪೆ ಕಾಮಗಾರಿ ಕಾರಣ ಎಂದು ತಜ್ಞರ ವರದಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐಐಎಸ್ಸಿ ತಜ್ಞರ ತಂಡವು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರಿಗೆ ತನಿಖಾ ವರದಿ ಸಲ್ಲಿಸಿದೆ.
ಕಿಶೋರ್ ಚಂದ್ರ ನೇತೃತ್ವದ ತಜ್ಞರ ತಂಡವು ವರದಿ ಸಲ್ಲಿಸಿದ್ದು, ವರದಿಯಲ್ಲಿ ತಾಯಿ, ಮಗು ಸಾವಿಗೆ ಇಂಜಿನಿಯರ್, ಗುತ್ತಿಗೆದಾರರೇ ಕಾರಣ ಎಂದು ಉಲ್ಲೇಖಿಸಲಾಗಿದೆ.
ಐಐಎಸ್ಸಿ ತಂಡ ತನಿಖೆಯನ್ನು ಪ್ರಾರಂಭಿಸುವಾಗ, ಕಾಮಗಾರಿಗೆ ಬಳಸಿದ್ದ ಕಂಬಿ, ಮರಳು, ಸಿಮೆಂಟ್ಗಳ ಕ್ವಾಲಿಟಿ ವರದಿ ಅಲ್ಲದೇ ಜಲ್ಲಿ, ಮಣ್ಣು, ಸಿಮೆಂಟ್ಗಳ ಪರೀಕ್ಷಾ ವರದಿಯನ್ನು ಪಡೆಯಲಾಗಿತ್ತು.
ಪಿಲ್ಲರ್ ನಿರ್ಮಾಣದ ವೇಳೆ ಬಿಎಂಆರ್ ಸಿಎಲ್ 18 ಮೀಟರ್ ಎತ್ತರದ ಕಂಬಿ ಚೌಕಟ್ಟನ್ನು ಕಟ್ಟಿತ್ತು. ಈ ಎತ್ತರದಲ್ಲಿ 6 ಅಂತಸ್ತಿನ ಮನೆ ಕಟ್ಟಬಹುದು, ಅಷ್ಟು ಉದ್ದದ ಕಂಬಿ ಪಿಲ್ಲರ್ ಏಕೆ ಕಟ್ಟಿದರು.? ಇಷ್ಟು ಎತ್ತರದ ಪಿಲ್ಲರ್ ಕಟ್ಟಿದಾಗ, ಮುಂಜಾಗ್ರತಾ ಕ್ರಮವಾಗಿ ಕಂಬಿಯ ಪಿಲ್ಲರ್ ಚೌಕಟ್ಟಿಗೆ ಸರಿಯಾದ ರಕ್ಷಣೆ ನೀಡಬೇಕಿತ್ತು.ರಕ್ಷಣೆ ನೀಡದಿದ್ದದ್ದೇ ಅನಾಹುತಕ್ಕೆ ಕಾರಣವಾಗಿದೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.
ಕೆಲಸಗಾಗರು ಕಂಬಿಯ ಪಿಲ್ಲರ್ ಅನ್ನು ನೇರವಾಗಿ ನಿಲ್ಲಿಸಲು ಸುತ್ತಲೂ ರಕ್ಷಣೆ ನೀಡಬೇಕಿತ್ತು. ಅದು ಕೆಲಸಗಾರರಿಗೆ ಗೊತ್ತಾಗಲ್ಲ, ಗುತ್ತಿಗೆದಾರರೇ ಹಾಗೂ ಇಂಜಿನಿಯರ್ಗಳೇ ಅದನ್ನು ನೋಡಿಕೊಳ್ಳಬೇಕು. ಸದ್ಯಕ್ಕೆ ಗುತ್ತಿಗೆದಾರರೇ ಹಾಗೂ ಇಂಜಿನಿಯರ್ಗಳೇ ಅನಾಹುತಕ್ಕೆ ನೇರ ಹೊಣೆ. ಕಂಟ್ರ್ಯಾಕ್ಟರ್ ಹಾಗೂ ಇಂಜಿನಿಯರ್ಗಳನ್ನೆ ತಪ್ಪಿತಸ್ಥರೆಂದು ವರದಿಯಲ್ಲಿ ಉಲ್ಲೇಖವಾಗಿದೆ.
ಘಟನೆ ಹಿನ್ನೆಲೆ:
ಕಳೆದ ಜ.10 ರಂದು ನಾಗವಾರ ರಿಂಗ್ ರೋಡ್‍ನ ಎಚ್‍ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕಂಬಿ ಬಿದ್ದು ತಾಯಿ ಹಾಗೂ ಮಗು ಮೃತಪಟ್ಟಿದ್ದರು. ಮೃತ ತೇಜಸ್ವಿನಿ ಹಾಗೂ ಅವರ ಪತಿ ತಮ್ಮಿಬ್ಬರು ಅವಳಿ ಮಕ್ಕಳ ಜೊತೆಯಲ್ಲಿ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಪಿಲ್ಲರ್ ಅವರ ಬೈಕ್ ಮೇಲೆ ಬಿದ್ದಿತ್ತು. ಅವರ ಕುಟುಂಬದ ನಾಲ್ವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಘಟನಾ ಸ್ಥಳದಲ್ಲಿ ನೆರೆದಿದ್ದ ಜನರು ಗಾಯಗೊಂಡಿದ್ದ ತಾಯಿ ಮತ್ತು ಮಗುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ತೇಜಸ್ವಿನಿ ಹಾಗೂ ಮಗು ವಿಹಾನ್ ಮೃತಟ್ಟಿದ್ದಾರೆ. ಒಂದು ವರ್ಷದ ಮಗು ಮತ್ತು ಲೋಹಿತ್ ಕುಮಾರ್ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
Previous Articleಪ್ರತಿಷ್ಟೆಗಾಗಿ ರಸ್ತೆಯ ಮೇಲೆ ನಡೆದ ರಾದ್ಧಾಂತ
Next Article ಇಂಗ್ಲೆಂಡ್ ನ ಪ್ರಧಾನ ಮಂತ್ರಿ ರಿಷಿ ಸುನಾಕ್’ರಿಗೆ ದಂಡ!