ಬೆಂಗಳೂರು, ಜ.23-
‘ಭ್ರಷ್ಟಾಚಾರದ ಗಂಗೋತ್ರಿ ಎಂದರೆ ಕಾಂಗ್ರೆಸ್. ಇಂತಹವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು. ಬೆಂಗಳೂರಿನಲ್ಲಿ ಕಾಂಗ್ರೆಸ್‍ನ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಲೋಕಾಯುಕ್ತದಂತಹ ಸಂಸ್ಥೆಯನ್ನು ಮುಚ್ಚಿದ ಪುಣ್ಯಾತ್ಮರು ಇಂದು ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿದ್ದ ಸ್ವತಂತ್ರ ಸಂಸ್ಥೆ ಲೋಕಾಯುಕ್ತವನ್ನು ಯಾಕೆ ಮುಚ್ಚಿದ್ದು ಎಂದು ಗೊತ್ತಿದೆ. 69 ಪ್ರಕರಣಗಳು ಅವರ ಮೇಲಿದ್ದವು. ಅದಕ್ಕಾಗಿ ಲೋಕಾಯುಕ್ತವನ್ನು ಮುಚ್ಚಿದರು ಎಂದು ಆರೋಪಿಸಿದರು. ಭ್ರಷ್ಟಾಚಾರ ಎನ್ನುವುದು ಕಾಂಗ್ರೆಸ್ ಸರ್ಕಾರದ ಆಡಳಿತ ಭಾಗವಾಗಿತ್ತು. ಅವರು ಮಾಡಿದ ಕರ್ಮಕಾಂಡ ಮುಚ್ಚಿ ಹಾಕಲು ಲೋಕಾಯುಕ್ತ ಮುಚ್ಚಿದರು. ಜನ ಇದನ್ನು ಒಪ್ಪಲ್ಲ. ಅವರ ಎಲೆಯಲ್ಲಿ ಕತ್ತೆ ಬಿದ್ದಿದೆ,ಅದನ್ನು ಮೊದಲು ನೋಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು. ಯಾರ ಭ್ರಷ್ಟಾಚಾರ ಉಳಿಸಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಶೇ. 60 ಪ್ರೀಮಿಯಂ ಕೊಟ್ಟಿರುವ ಸರ್ಕಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಎಂದು ಆರೋಪಿಸಿದ ಅವರು, ತಾವು ಮಾಡಿರೋದನ್ನು ಮುಚ್ಚಿ ಹಾಕಲು ಕಾಂಗ್ರೆಸ್ ನವರು ಸೋಗಲಾಡಿತನ ತೋರುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ಕೊಡಲಿ.ಲೋಕಾಯುಕ್ತ ಸಂಸ್ಥೆ ತನಿಖೆ ಮಾಡಲಿದೆ ಎಂದು ಸವಾಲು ಹಾಕಿದರು.