Bengaluru
ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಾಣುತ್ತಿರುವ ಪ್ರಕರಣಗಳಲ್ಲಿ ದ್ವಿಚಕ್ರ ವಾಹನ ಸವಾರರ ಸಂಖ್ಯೆ ಅತ್ಯಧಿಕವಾಗಿದೆ ಎಂದು ಅಂಕಿ ಅಂಶಗಳು ತಿಳಿಸುತ್ತಿವೆ. ಅದರಲ್ಲೂ ಕಿವಿ ಮುಚ್ಚದ ಕಳಪೆ ಹಾಫ್ ಹೆಲ್ಮೆಟ್ ಧರಿಸಿದವರು ಅಪಘಾತದಲ್ಲಿ ಬಲಿಯಾಗುತ್ತಿರುವ ಪ್ರಮಾಣ ಹೆಚ್ಚಾಗಿದೆ.
ನಗರದಲ್ಲಿ ಹೆಲ್ಮೆಟ್ ಇಲ್ಲದೆ ಅಥವಾ ಅಸುರಕ್ಷಿತ ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿದೆ. ಅಸುರಕ್ಷಿತ ಹಾಫ್ ಹೆಲ್ಮೆಟ್ ಗಳ ಬಗ್ಗೆ ಅರಿವು ಮೂಡಿಸಲು ನಡೆಸಿದ ಸಂಚಾರಿ ಪೊಲೀಸರ ಪ್ರಯತ್ನಗಳು ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಹೆಲ್ಮೆಟ್ ರಹಿತವಾಗಿ ದ್ವಿಚಕ್ರ ವಾಹನ ಚಲಾಯಿಸಿದರೆ ಬೀಳುವ ದಂಡವನ್ನು ತಪ್ಪಿಸಲು ಅಗ್ಗದ ಬೆಲೆಯ ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಸಂಚಾರಿ ಪೊಲೀಸರ ಬಳಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಲ್ಲಿ 13 ಲಕ್ಷ ಪ್ರಕರಣಗಳು ದಾಖಲಾಗಿವೆ. ಕಳೆದ ನವೆಂಬರ್‌ನಲ್ಲಿ ನಲ್ಲಿ 8 ಲಕ್ಷ ಪ್ರಕರಣಗಳು ದಾಖಲಾಗಿದ್ದರೆ, ಡಿಸೆಂಬರ್ ನಲ್ಲಿ 5 ಲಕ್ಷ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹೀಗೆ ಹೆಲ್ಮೆಟ್ ಇಲ್ಲದೇ ಅಥವಾ ಹಾಫ್ ಹೆಲ್ಮೆಟ್ ಧರಿಸಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚೇ ಇದೆ.
ಇದೀಗ ಇದಕ್ಕೆ ಕಡಿವಾಣ ಹಾಕಲಿರುವ ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿದರೆ ಅದನ್ನು ಹೆಲ್ಮೆಟ್ ರಹಿತ ಚಲಾವಣೆ ಎಂದು ಪರಿಗಣಿಸಿ ದಂಡ ವಿಧಿಸಲಿದ್ದಾರೆ. ‘ದ್ವಿಚಕ್ರ ವಾಹನ ಚಲಾಯಿಸುವ ವೇಳೆ ಸವಾರರು ಕಡ್ಡಾಯವಾಗಿ ಐಎಸ್‌ಐ ಮಾರ್ಕ್ (ISI Mark) ಇರುವ ಅಥವಾ ಕಿವಿಯನ್ನು ಸಂಪೂರ್ಣವಾಗಿ ಮುಚ್ಚುವ ಹೆಲ್ಮೆಟ್ ಅನ್ನು ಧರಿಸಬೇಕು. ಇಲ್ಲವಾದಲ್ಲಿ ಇದು ಟ್ರಾಫಿಕ್ ನಿಯಮಗಳ ಉಲ್ಲಂಘನೆ ಮಾಡಿದಂತೆ ಆಗುತ್ತದೆ’ ಎಂದು ಆದೇಶ ಜಾರಿಗೊಳಿಸಿದೆ.
ಈಗ ಪೊಲೀಸರು ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಿದ್ದಾರೆ. ಹಾಫ್ ಹೆಲ್ಮೆಟ್ ಧರಿಸಿ ಪ್ರಯಾಣಿಸಿದ್ದನ್ನು ಪೊಲೀಸರು ನೋಡಿಲ್ಲ ಅಂತ ಅಂದುಕೊಂಡರೂ ಫೈನ್ ಬೀಳೋದು ಮಾತ್ರ ಗ್ಯಾರೆಂಟಿ. ಸಿಗ್ನಲ್ಗಳಲ್ಲಿ ಇರುವ ಅತ್ಯಾಧುನಿಕ ಕ್ಯಾಮರಾ ಇದೆಲ್ಲವನ್ನು ಸೆರೆ ಹಿಡಿದು ಸಂಚಾರಿ ನಿರ್ವಹಣಾ ಕೇಂದ್ರಕ್ಕೆ ಕಳಿಸುತ್ತದೆ, ಅದನ್ನು ಆಧರಿಸಿ ದಂಡ ವಿಧಿಸಲಾಗುತ್ತದೆ.