ಶಿವಮೊಗ್ಗ,ಜ.26-
‘ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಅಕ್ರಮ ನೇಮಕ ಪ್ರಕರಣದ ಪ್ರಮುಖ ಆರೋಪಿ R.D.Patil ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದ ಎನ್ನುವುದಕ್ಕೆ ನಮ್ಮಲ್ಲಿ ದಾಖಲೆಯಿದೆ’ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆತ ಓರ್ವ ಬುದ್ಧಿವಂತ ಕ್ರಿಮಿನಲ್. ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇರುವಂತಹ ವ್ಯಕ್ತಿ. R.D.Patil ನಮ್ಮ ಪಕ್ಷದವನಲ್ಲ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ಆದರೆ, ಆತ ಜಿಲ್ಲಾ ಪಂಚಾಯಿತಿ Electionಗೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ದಾಖಲೆ ದೊರಕಿದೆ’ ಎಂದರು.
‘ಆರೋಪಿಯನ್ನು ಹಿಡಿಯಲು ನಮ್ಮ ಪೊಲೀಸರು ಕಷ್ಟಪಟ್ಟಿದ್ದಾರೆ. ಮತ್ತೆ ಆತ ತಪ್ಪಿಸಿಕೊಂಡು ಓಡಿ ಹೋಗಿದ್ದ. ಇದು ಏಕೆ ಎನ್ನುವುದು ಗೊತ್ತಾಗಬೇಕಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವನಿಗೆ ಜಾಮೀನು ಸಿಕ್ಕಿತ್ತು, ಈಗ ರದ್ದಾಗಿದೆ. ಈಗ ಮತ್ತೆ ಆತ ಜೈಲಿಗೆ ಹೋಗಿದ್ದಾನೆ. ಆತ ಎಷ್ಟೇ ಬುದ್ಧಿವಂತನಾಗಿದ್ದರೂ ಇಲಾಖೆ ಆತನನ್ನು ಬಿಡುವುದಿಲ್ಲ. ತಪ್ಪಿಸಿಕೊಂಡರೂ ಆತನನ್ನು ಬಂಧಿಸುವ ಕೆಲಸ ನಡೆದಿದೆ’ ಎಂದು ಹೇಳಿದರು.
ಶಿವಮೊಗ್ಗ ಪಾಲಿಕೆಯಲ್ಲಿ ಟಿಪ್ಪು ಭಾವಚಿತ್ರ ಹಾಕಿದ್ದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ‘ಈ ಕುರಿತು ಸಮರ್ಪಕ ಮಾಹಿತಿ ತಮ್ಮ ಬಳಿ ಲಭ್ಯವಿಲ್ಲ. ಪೊಲೀಸರ ಬಳಿ ತಿಳಿದುಕೊಂಡು ಮಾಹಿತಿ ನೀಡುತ್ತೇನೆ’ ಎಂದು ಹೇಳಿದರು.