ಅವಳ ಹೆಸರು ದೇವಾಂಶಿ ಸಾಂಘ್ವಿ . ಅವಳ ವಯಸ್ಸು ಕೇವಲ 8 ವರ್ಷಗಳು. ಗುಜರಾತಿನಲ್ಲಿ ವಾಸವಾಗಿರುವ ಶ್ರೀಮಂತ ವಜ್ರದ Businessಿ, ಧನೇಶ್ ಮತ್ತು ಅಮಿ ಸಾಂಘ್ವಿ ದಂಪತಿಯ ಹಿರಿಯ ಪುತ್ರಿ. ತಂದೆಯ ಬಹು ಮಿಲಿಯನ್ ಡಾಲರ್ ವಜ್ರದ ವ್ಯಾಪಾರಕ್ಕೆ ಉತ್ತರಾಧಿಕಾರಿಯಾಗಬೇಕಾಗಿದ್ದವಳು. ಸಿರಿ ಸಂಪತ್ತಿನ ಸುಪ್ಪತ್ತಿಗೆಯಲ್ಲಿ, ಐಷಾರಾಮಿ ಜೀವನವನ್ನು ನಡೆಸುತ್ತ, ಆಡುತ್ತ, ಕುಣಿಯುತ್ತ, ತಂಟೆ ತರಲೆಗಳನ್ನು ಮಾಡುತ್ತಾ, ತಂದೆ ತಾಯಿಯ ಪ್ರೀತಿಯನ್ನುಣ್ಣುತ್ತ ಬೆಳೆಯಬೇಕಾದ ಬಾಲೆ, ಇದೀಗ ತನ್ನ ಬಾಲ್ಯವನ್ನು ತ್ಯಜಿಸಿ, ಬಿಳಿ ಸೀರೆಯನ್ನುಟ್ಟು, ತನ್ನ ಬೋಳು ತಲೆಯ ಮೇಲೆ ಸೆರಗನ್ನು ಹೊದ್ದುಕೊಂಡು, ಬರಿಗಾಲಿನಲ್ಲಿ ನಡೆಯುತ್ತಾ, ಮನೆ ಮನೆಗೆ ಹೋಗಿ ತನ್ನ ಭಿಕ್ಷೆಯನ್ನು ಕೇಳುತ್ತಿದ್ದಾಳೆ. ಕಾರಣ, ಅವಳೀಗ ಭೌತಿಕ ಪ್ರಪಂಚದ ಎಲ್ಲ ಮೋಹವನ್ನೂ ತೊರೆದಿರುವ ಜೈನ್ ಸನ್ಯಾಸಿನಿ!
2,500 ವರ್ಷಗಳ ಹಿಂದೆ ಭಾರತದಲ್ಲಿ ಹುಟ್ಟಿಕೊಂಡ ಜೈನ್ ಧರ್ಮವು ವಿಶ್ವದ ಅತ್ಯಂತ ಹಳೆಯ ಧರ್ಮಗಳಲ್ಲಿ ಒಂದಾಗಿದೆ. ಧಾರ್ಮಿಕ ವಿದ್ವಾಂಸರು ಹೇಳುವಂತೆ, ಜೈನರು ಭೌತಿಕ ಪ್ರಪಂಚದ ಆಸೆಯನ್ನು ತ್ಯಜಿಸಿ ಸನ್ಯಾಸತ್ವದಲ್ಲಿ ಆಸಕ್ತಿ ತೋರಿಸುತ್ತಿರುವ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಏರುತ್ತಿದೆ. ಹಾಗಾಗಿ, ಜೈನರು ಸನ್ಯಾಸತ್ವ ಸ್ವೀಕರಿಸುವುದು ಅಷ್ಟೇನು ಅಚ್ಚರಿಯ ವಿಷಯವಲ್ಲವಾದರೂ, ದೇವಾಂಶಿಯಂತಹ ಎಂಟು ವರ್ಷದ ಚಿಕ್ಕ ಹುಡುಗಿ ಪ್ರಪಂಚದ ಸೆಳೆತವನ್ನು ತೊರೆದು ಸನ್ಯಾಸತ್ವ ಸ್ವೀಕರಿಸಿದ್ದು ಅಚ್ಚರಿಯೇ ಸರಿ.
ಜೈನರಲ್ಲಿರುವ ನಾಲ್ಕು ಪಂಥಗಳಲ್ಲಿ, ಸಾಂಘ್ವಿ ಕುಟುಂಬವು ಬಾಲ ಸನ್ಯಾಸಿಗಳನ್ನು ಸ್ವೀಕರಿಸುವ ಏಕೈಕ ಜೈನ ಪಂಥಕ್ಕೆ ಸೇರಿದೆ. ಉಳಿದ ಮೂರು ಪಂಥಗಳು ವಯಸ್ಕರನ್ನು ಮಾತ್ರ ಒಪ್ಪಿಕೊಳ್ಳುತ್ತವೆ. ಗುಜರಾತಿನ ಸೂರತ್ ನಗರದ ವೆಸು ಎಂಬ ಪ್ರದೇಶದಲ್ಲಿ, “ದೀಕ್ಷೆ”ಯ ಕಾರ್ಯಕ್ರಮವು ಏರ್ಪಾಡಾಗಿತ್ತು. ವಜ್ರದ ಆಭರಣಗಳಿಂದ ಅಲಂಕರಿಸಿಕೊಂಡು, ವಜ್ರದ ಕಿರೀಟವನ್ನು ತೊಟ್ಟು, ರೇಶಿಮೆಯ ವಸ್ತ್ರದಲ್ಲಿ ಯುವರಾಣಿಯಂತೆ ಕಂಗೊಳಿಸುತ್ತ ಹೆತ್ತವರೊಡನೆ ಸ್ಥಳಕ್ಕೆ ಆಗಮಿಸಿದಳು ದೇವಾಂಶಿ. 8 ವರ್ಷದ ಬಾಲೆಯ ಸನ್ಯಾಸತ್ವದ ದೀಕ್ಷೆಯ ಸ್ವೀಕೃತಿಯನ್ನು ನೋಡಲು ಸಹಸ್ರಾರು ಜನರು ನೆರೆದಿದ್ದರು. ಹಿರಿಯ ಜೈನ ಸನ್ಯಾಸಿಗಳ ಸಮ್ಮುಖದಲ್ಲಿ ದೀಕ್ಷೆ ಪಡೆದ ದೇವಾಂಶಿ, ಸಂಪ್ರದಾಯದಂತೆ ಬಿಳಿ ಸೀರೆಯನ್ನುಟ್ಟು, ತನ್ನ ಬರಿದಲೆಯ ಮೇಲೆ ಸೆರಗನ್ನು ಹೊದ್ದು, ಬರಿಗಾಲಿನಲ್ಲಿ ಇತರ ಸನ್ಯಾಸಿಗಳೊಂದಿಗೆ ಸೇರಿಕೊಂಡಳು. ಅಂದಿನಿಂದ ಅವಳು ಜೈನ್ ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ವಾಸಿಸುವ ಮಠ, ಉಪಾಶ್ರಯದಲ್ಲಿ ವಾಸಿಸುತ್ತಿದ್ದಾಳೆ.
ಅವಳಿಗಿನ್ನು ಆ ಉಪಾಶ್ರಯವೇ ಮನೆ. ಅವಳಿನ್ನು ಹೆತ್ತವರನ್ನು “ಅಪ್ಪ, ಅಮ್ಮ” ಎನ್ನುವಂತಿಲ್ಲ. ತನ್ನ ಮನೆಯಲ್ಲಿ ವಾಸಿಸುವಂತಿಲ್ಲ. ಯಾಕೆಂದರೆ ಅವಳೀಗ ಎಲ್ಲವನ್ನೂ ಪರಿತ್ಯಾಗ ಮಾಡಿರುವ ಸನ್ಯಾಸಿನಿ. ಒಬ್ಬ ಜೈನ್ ಸನ್ಯಾಸಿಯ ಜೀವನ ಅಷ್ಟು ಸುಲಭವಲ್ಲ. ತುಂಬಾ ಕಟ್ಟುನಿಟ್ಟಿನ ಜೀವನವದು. ಎಲ್ಲೇ ಹೋಗುವುದಿದ್ದರೂ ಯಾವ ವಾಹನದ ಸಹಾಯವನ್ನೂ ಪಡೆದುಕೊಳ್ಳದೆ, ನಡೆದುಕೊಂಡೇ ಹೋಗಬೇಕು. ಹವಾಮಾನ ಹೇಗೆಯೇ ಇದ್ದರೂ ನೆಲದ ಮೇಲಿನ ಚಾಪೆಯ ಹಾಸಿನ ಮೇಲೆಯೇ ಮಲಗಬೇಕು. ಸೂರ್ಯ ಮುಳುಗಿದ ನಂತರ ಏನ್ನನ್ನೂ ತಿನ್ನುವ ಹಾಗಿಲ್ಲ. ಅಹಿಂಸೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಜೈನ್ ಧರ್ಮದಲ್ಲಿ ಸನ್ಯಾಸಿಯ ಜೀವನ ತುಂಬಾ ಕಷ್ಟಕರವಾದದ್ದು. ಇಷ್ಟು ಸಣ್ಣ ವಯಸ್ಸಿನಲ್ಲಿ ಇಷ್ಟು ಕಠಿಣ ಜೀವನವನ್ನು ಆರಿಸಿಕೊಂಡಿದ್ದು ಜಗತ್ತನ್ನೇ ಬೆರಗುಗೊಳಿಸಿದೆ.
ದೇವಾಂಶಿಯ ಕುಟುಂಬ ಅತ್ಯಂತ ಧಾರ್ಮಿಕ ಕುಟುಂಬ. ದೇವಾಂಶಿ ತುಂಬಾ ಎಳೆಯ ವಯಸ್ಸಿನಿಂದಲೇ ಆಧ್ಯಾತ್ಮಿಕ ಜೀವನದ ಕಡೆಗೆ ಹೆಚ್ಚಿನ ಒಲವನ್ನು ತೋರಿಸುತ್ತಿದ್ದಳಂತೆ. ಅವಳ ವಯಸ್ಸಿನ ಮಕ್ಕಳು ಮೊಬೈಲ್, ಟಿವಿ, ಕಾರ್ಟೂನ್, ಮಾಲ್, ಪಿಜ್ಜಾ, ಬರ್ಗರ್ ಎಂದು ಮೋಜಿನ ಜೀವನ ನಡೆಸುತ್ತಿದ್ದರೆ, ದೇವಾಂಶಿ ಇಲ್ಲಿಯವರೆಗೂ ಟಿವಿಯನ್ನು ವೀಕ್ಷಿಸಿದವಳೇ ಅಲ್ಲ. ಮಾಲ್, ಥಿಯೇಟರ್, ಹೋಟೆಲ್ ಯಾವುವೂ ಇವಳನ್ನು ಸೆಳೆಯಲೇ ಇಲ್ಲ. ದೇವಾಂಶಿ ದಿನಕ್ಕೆ 3 ಬಾರಿ ಪ್ರಾರ್ಥನೆಯನ್ನು ಮಾಡುತ್ತಿದ್ದಳು. ಅಷ್ಟೇ ಅಲ್ಲ, ಎರಡು ವರ್ಷದ ಎಳೆಯ ವಯಸ್ಸಿನಿಂದಲೇ ಅವಳು ಉಪವಾಸಗಳನ್ನು ಮಾಡುತ್ತಾ, ನೇಮ ನಿಷ್ಠೆಗಳನ್ನು ಪಾಲಿಸುತ್ತಿದ್ದಳು. ಅತ್ಯಂತ ಧಾರ್ಮಿಕ ಹಿನ್ನೆಲೆ ಇರುವ ಕುಟುಂಬದ ವಾತಾವರಣವೂ ದೇವಾಂಶಿಯನ್ನು ಆಧ್ಯಾತ್ಮಿಕ ಜೀವನದ ಕಡೆಗೆ ಸೆಳೆದಿರಬಹುದು.
ಜೈನ್ ಧರ್ಮ ಸನ್ಯಾಸತ್ವದ ಸ್ವೀಕೃತಿಯನ್ನು ಒಪ್ಪುತ್ತದೆ ಆದ್ದರಿಂದ, ಜೈನರಿಗೆ ಇದು ಒಂದು ಬಗೆಯ ಪ್ರತಿಷ್ಠೆಯ ವಿಷಯವಾಗಿರಬಹುದು ಅಥವಾ ಅವರು ಇದನ್ನು ಸಹಜವಾಗಿ ಒಪ್ಪಬಹುದು. ಆದರೆ, ಇಷ್ಟು ಸಣ್ಣ ವಯಸ್ಸಿನಲ್ಲಿ, ಅಂತಹ ಕಠಿಣ ಬದುಕನ್ನು ಆರಿಸಿಕೊಳ್ಳುವುದು ಅಥವಾ ಆರಿಸಿಕೊಳ್ಳಲು ಬಿಡುವುದು ಎಷ್ಟು ಸರಿ ಎಂಬುದರ ಬಗ್ಗೆ ಈಗ ಹಲವರು ಚರ್ಚಿಸುತ್ತಿದ್ದಾರೆ. ಈ ವಿಷಯ ಬಹಿರಂಗಗೊಳ್ಳುತ್ತಿದ್ದ ಹಾಗೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಜನರು ಇದನ್ನು ವಿರೋಧಿಸಿ, ಟೀಕಿಸುತ್ತಿದ್ದಾರೆ.
‘ಮಕ್ಕಳ ರಕ್ಷಣಾ ಸಲಹೆಗಾರ’ರಾದ ಪ್ರೊಫೆಸರ್ ನಿಲಿಮಾ ಮೆಹ್ತಾರವರು ಹೇಳುವಂತೆ, ಕಾನೂನುಬದ್ಧವಾಗಿ, 18 ವರ್ಷಗಳ ವರೆಗೆ ಮಕ್ಕಳ ಭವಿಷ್ಯದ ಬಗ್ಗೆ ಮಗುವಿನ ಪೋಷಕರು ಅಥವಾ ಹಿರಿಯರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಮಾತ್ರ ಮಾನ್ಯತೆ ಇರುತ್ತದೆ. ಒಂದು ವೇಳೆ, ಅಂತಹ ನಿರ್ಧಾರಗಳು ಮಗುವಿನ ಶಿಕ್ಷಣ ಮತ್ತು ಮನೋರಂಜನೆಯನ್ನು ಕಡೆಗಣಿಸುತ್ತಿದ್ದರೆ, ಅದು ಮಗುವಿನ ಹಕ್ಕುಗಳ ಉಲ್ಲಂಘನೆ ಮಾಡಿದ ಹಾಗಾಗುತ್ತದೆ.
ಇದಕ್ಕೆ ಮುಂಬೈ ಯೂನಿವರ್ಸಿಟಿಯಲ್ಲಿ ಜೈನ್ ತತ್ವಶಾಸ್ತ್ರವನ್ನು ಬೋಧಿಸುವ ಡಾ. ಬಿಪಿನ್ ದೋಷಿಯವರು ಸ್ಪಷ್ಟನೆ ನೀಡಿದ್ದಾರೆ. ಅವರು ಹೇಳುವಂತೆ, “ಕೆಲವು ಆಧ್ಯಾತ್ಮಿಕ ವಿಷಯಗಳಲ್ಲಿ ಕಾನೂನು ತತ್ವಗಳನ್ನು ಅನ್ವಯಿಸಲು ಸಾಧ್ಯವಿಲ್ಲ. ಆಕೆಗೆ ಎಳೆವೆಯಿಂದಲೇ ಆಧ್ಯಾತ್ಮದಲ್ಲಿ ತುಂಬಾ ಒಲವಿತ್ತು. ಆಟಕ್ಕಿಂತ ಹೆಚ್ಚು ದೇವರ ಧ್ಯಾನ ಅವಳಿಗೆ ಇಷ್ಟವಾಗುತ್ತಿತ್ತು. ಮೈದಾನಕ್ಕಿಂತ ಹೆಚ್ಚು ಮಂದಿರಗಳು ಅವಳನ್ನು ಸೆಳೆಯುತ್ತಿದ್ದವು. ಕೆಲವು ಮಕ್ಕಳಲ್ಲಿ, ವಯಸ್ಕರಿಗಿಂತ ಹೆಚ್ಚು ಬೌದ್ಧಿಕ ಸಾಮರ್ಥ್ಯವಿರುತ್ತದೆ. ಕೆಲವರಲ್ಲಿ ಎಳೆವೆಯಿಂದಲೇ ಆಧ್ಯಾತ್ಮಿಕದ ಕಡೆಗೆ ಒಲವಿರುತ್ತದೆ. ಅಂಥವರು ಸಣ್ಣ ವಯಸ್ಸಿನಲ್ಲಿಯೇ ಹೆಚ್ಚಿನ ಸಾಧನೆಯನ್ನು ಮಾಡಬಲ್ಲರು. ಹಾಗಿರುವಾಗ, 8 ವರ್ಷದ ದೇವಾಂಶಿ ಸನ್ಯಾಸಿನಿಯಾಗಲು ಸ್ವ ಇಚ್ಛೆಯಿಂದ ನಿರ್ಧರಿಸಿದರೆ, ಅದರಲ್ಲಿ ತಪ್ಪಿನಿದೆ? ಅಲ್ಲದೆ, ಅವಳಿಗೆ ಅಲ್ಲಿ ಯಾವ ರೀತಿಯಿಂದಲೂ ಕಷ್ಟವಾಗುವುದಿಲ್ಲ. ಅವಳಿಗೆ ಎಲ್ಲರ ಪ್ರೀತಿ ದೊರೆಯುತ್ತದೆ. ಅವಳು ಅಲ್ಲಿ ಪ್ರಾಮಾಣಿಕತೆಯನ್ನು ಕಲಿಯುತ್ತಾಳೆ. ಒಂದು ವೇಳೆ, ಅವಳು ದೊಡ್ಡವಳಾಗುತ್ತಾ, ತನ್ನ ಮನಸ್ಸನ್ನು ಬದಲಾಯಿಸಿದರೆ, ಖಂಡಿತವಾಗಿಯೂ ಅವಳು ಮತ್ತೆ ಪ್ರಪಂಚಕ್ಕೆ ಮರಳಬಹುದು.”
“ಇದು ಜೈನರಲ್ಲಿ ಮಾತ್ರವಲ್ಲ; ಹಿಂದೂ ಹುಡುಗಿಯರು ದೇವತೆಗಳನ್ನು ಮದುವೆಯಾಗುತ್ತಾರೆ ಮತ್ತು ದೇವದಾಸಿಯರಾಗುತ್ತಾರೆ (1947 ರಲ್ಲಿ ಈ ಅಭ್ಯಾಸವನ್ನು ನಿಷೇಧಿಸಲಾಗಿದೆ) ಮತ್ತು ಚಿಕ್ಕ ಹುಡುಗರು ಅಖಾಡಾಗಳಿಗೆ (ಧಾರ್ಮಿಕ ಕೇಂದ್ರಗಳಿಗೆ) ಸೇರುತ್ತಾರೆ, ಬೌದ್ಧ ಧರ್ಮದಲ್ಲಿ ಮಕ್ಕಳನ್ನು ಸನ್ಯಾಸಿಗಳಾಗಿ ಮಠಗಳಲ್ಲಿ ವಾಸಿಸಲು ಕಳುಹಿಸಲಾಗುತ್ತದೆ. ಮಕ್ಕಳು ಎಲ್ಲಾ ಧರ್ಮಗಳ ಅಡಿಯಲ್ಲಿಯೂ ನರಳುತ್ತಿದ್ದಾರೆ, ಆದರೆ ಅದನ್ನು ಪ್ರಶ್ನಿಸುವುದು ಧರ್ಮನಿಂದನೆ ಎಂಬ ನಂಬಿಕೆ ಬೇರೂರಿದೆ. ಮಗುವನ್ನು ನೀವು ಹೆತ್ತ ಮಾತ್ರಕ್ಕೆ ಧರ್ಮದ ಹೆಸರಿನಲ್ಲಿ ಮಗುವಿನ ವೈಯಕ್ತಿಕ ಹಕ್ಕುಗಳನ್ನು ಉಲ್ಲಂಘಿಸಲು ಅಥವಾ ನಿಮ್ಮ ಇಷ್ಟಾನುಸಾರ ಅವರ ಇಷ್ಟಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು “ಮಗುವು ನಿಮ್ಮ ಆಸ್ತಿಯಲ್ಲ” ಎಂಬುದರ ಕುರಿತಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ. ಇಂತಹ ಪದ್ಧತಿಗಳಲ್ಲಿ ಧಾರ್ಮಿಕ ನಂಬಿಕೆಗಳು ಮತ್ತು ಸೂಕ್ಷ್ಮತೆಗಳು ಒಳಗೊಂಡಿರುವುದರಿಂದ, ಸುಧಾರಣೆ ತರುವುದು ಒಂದು ಸವಾಲಿನ ಕೆಲಸವೇ ಸರಿ” ಎಂಬುದು ಪ್ರೊಫೆಸರ್ ನಿಲಿಮಾ ಮೆಹ್ತಾರವರ ಅನಿಸಿಕೆ.
ಪರ ವಿರೋಧ ಚರ್ಚೆಗಳು, ನಂಬಿಕೆಗಳು, ಟೀಕೆಗಳೇನೇ ಇದ್ದರೂ ಎಳೆ ಮಗುವಿನಿಂದ ಹಿಡಿದು ಮುದಿ ವಯಸ್ಸಿನ ವ್ಯಕ್ತಿಯನ್ನೂ ಬಿಡದೇ ಕಾಡುವ ವ್ಯಾಮೋಹವನ್ನು ತ್ಯಜಿಸಿ ಕೇವಲ 8 ವರ್ಷದ ವಯಸ್ಸಿನಲ್ಲಿ ದೇವಾಂಶಿ ಆರಿಸಿಕೊಂಡ ಬದುಕಿನ ದಾರಿ ಜಗತ್ತನ್ನೇ ಬೆರಗುಗೊಳಿಸಿದ್ದಂತೂ ಹೌದು.