ಬೆಂಗಳೂರು,ಜ.28-
ಪಕ್ಷದ ಹಲವು ಜಿಲ್ಲೆಗಳಲ್ಲಿ ಬಣ ರಾಜಕಾರಣ ಹೆಚ್ಚಾಗಿದ್ದರೆ, ಮತ್ತೆ ಕೆಲವು ಕಡೆ ಒಳ ಒಪ್ಪಂದದ ರಾಜಕಾರಣ ನಡೆಯುತ್ತಿದೆ. ತಕ್ಷಣವೇ ಕಡಿವಾಣ ಹಾಕಿ ಪಕ್ಷದ ಗೆಲುವಿಗೆ ಪಣ ತೊಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಾಕೀತು ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಪ್ರವಾಸದಲ್ಲಿರುವ ಅವರು ಕಳೆದ ರಾತ್ರಿ ಸಂಘ ಪರಿವಾರ ಮುಖಂಡರೊಂದಿಗೆ ಸಭೆ ನಡೆಸಿ, ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಪಕ್ಷದ ಸ್ಥಿತಿಗತಿ ಕುರಿತಂತೆ ಅಭಿಪ್ರಾಯ ಪಡೆದರು. ಈ ವೇಳೆ ಮೊದಲು ಬಣ ಬಡಿದಾಟಕ್ಕೆ ಕಡಿವಾಣ ಹಾಕಲು ಸೂಚನೆ ನೀಡಿದರು.
ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ, ಬಾಲಚಂದ್ರ ಜಾರಕಿಹೊಳಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಳಗಾವಿಯ ಒಟ್ಟು 18 ಕ್ಷೇತ್ರಗಳ ಪೈಕಿ ಕನಿಷ್ಟ 15 ಕ್ಷೇತ್ರಗಳನ್ನಾದರೂ BJP ಗೆಲ್ಲಲೇಬೇಕೆಂದು ತಾಕೀತು ಮಾಡಿದರು. ಆ ಬಣ, ಈ ಬಣ ಎನ್ನದೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಟಿಕೆಟ್ ಹಂಚಿಕೆಯನ್ನು ಕೇಂದ್ರ ಸಮಿತಿ ಮಾಡುತ್ತದೆ. ಯಾರಿಗೆ ಟಿಕೆಟ್ ಕೊಟ್ಟರೂ ಒಮ್ಮತದಿಂದ ಪಕ್ಷದ ಗೆಲುವಿಗೆ ಶ್ರಮಿಸಲು ಎಲ್ಲರಿಗೂ ಸೂಚಿಸಬೇಕೆಂದು ಮುಖ್ಯಮಂತ್ರಿ ಬೊಮ್ಮಾಯಿಗೆ ಸೂಚನೆ ನೀಡಿದರು. ಬೆಳಗಾವಿ, ಧಾರವಾಡ, ಹಾವೇರಿ, ಗದಗ ಸೇರಿದಂತೆ ಕಿತ್ತೂರು ಕರ್ನಾಟಕದ ಸುಮಾರು 35ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಮುಂಬರುವ ವಿಧಾನಸಭೆ Electionಯಲ್ಲಿ ಗರಿಷ್ಠ ಸ್ಥಾನ ಗೆಲ್ಲಲು ರಣತಂತ್ರ ರೂಪಿಸಿದರು.