ರಾಜ್ಯ ರಾಜಕಾರಣದಲ್ಲಿ ಕಳೆದೆರಡು ವಾರಗಳಿಂದ ಅತಿ ಹೆಚ್ಚು ಚರ್ಚೆಯಲ್ಲಿರುವ ಪಕ್ಷ ಜಾತ್ಯಾತೀತ ಜನತಾದಳ ಮತ್ತು ಆ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ. ಮುಂಬರುವ ವಿಧಾನಸಭೆ Electionಯಲ್ಲಿ JDS ನೇತೃತ್ವದ ಸರ್ಕಾರ ನಿಶ್ಚಿತ ಹಾಗೂ ತಾವೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಪಂಚರತ್ನ ಯಾತ್ರೆ ನಡೆಸುತ್ತಿರುವ ಕುಮಾರಸ್ವಾಮಿ, ಈಗಾಗಲೇ ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಇದರಲ್ಲಿ ತಮ್ಮ ಭದ್ರಕೋಟೆ ಹಾಸನ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಗೋಜಿಗೆ ಹೋಗಿಲ್ಲ. ಇದಕ್ಕೆ ಅವರು ಕೊಡುವ ಕಾರಣ ‘ಜಿಲ್ಲಾ ಘಟಕದಲ್ಲಿ ಕೆಲವು ಗೊಂದಲಗಳಿವೆ. ಕಳೆದ ಬಾರಿ ಆಯ್ಕೆಯಾಗಿರುವ ಕೆಲವರು ಪಕ್ಷ ಬಿಡುವುದಾಗಿ ಹೇಳುತ್ತಿದ್ದಾರೆ. ಅವರು ಹೋದ ನಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು’ ಎಂದಿದ್ದಾರೆ. ಆದರೆ ವಾಸ್ತವ ಇದಲ್ಲ, ಅದೇನೆಂದರೆ ಭವಾನಿ ರೇವಣ್ಣ.
ಕಳೆದೊಂದು ದಶಕದವರಗೆ ತೆರೆಮರೆಯಲ್ಲಿ ರಾಜಕಾರಣ ಮಾಡುತ್ತಾ ತಮ್ಮ ಪತಿಗೆ ಬೆಂಗಾವಲಾಗಿ ನಿಂತಿದ್ದ ಭವಾನಿ ರೇವಣ್ಣ ರಾಜಕೀಯ ಪಟ್ಟುಗಳನ್ನು ಬಲ್ಲ ಚತುರೆ. ಎಚ್.ಡಿ.ರೇವಣ್ಣ ಅವರ ಯಶಸ್ಸಿನ ಗುಟ್ಟು ಭವಾನಿ ಎನ್ನುವುದು ಹಾಸನ ಜಿಲ್ಲೆ ಹಾಗೂ JDS ನ ಒಳ ರಾಜಕಾರಣ ಬಲ್ಲ ಹಲವರಿಗೆ ಗೊತ್ತಿರುವ ಸಂಗತಿ. ರಾಜಕಾರಣದಲ್ಲಿ ದೃಢ ನಿರ್ಧಾರಗಳ ಮೂಲಕ ಗುರುತಿಸಲ್ಪಡುವ ಭವಾನಿ ಅವರು ಅಭಿವೃದ್ಧಿ ಮತ್ತು ಆಡಳಿತಾತ್ಮಕ ವಿಷಯದಲ್ಲೂ ತಮ್ಮದೇ ದೃಷ್ಟಿಕೋನ ಹೊಂದಿದ್ದಾರೆ. ಇದರ ಪರಿಣಾಮವಾಗಿ ಈ ಹಿಂದೆ ತಮ್ಮ ತವರೂರು ಮೈಸೂರಿನ ಕೆ.ಆರ್.ನಗರದಿಂದ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದರು. ಆದರೆ ಆಗ JDS ನ ಟಿಕೆಟ್ ಆಕಾಂಕ್ಷಿಯಾಗಿದ್ದ ಸಾ.ರಾ.ಮಹೇಶ್ ಅವರಿಗಾಗಿ ತಮ್ಮ ಆಶೆಯನ್ನು ಅದುಮಿಟ್ಟುಕೊಂಡರು.
ನಂತರದಲ್ಲಿ ಹಾಸನದಿಂದಲೇ ಕಣಕ್ಕಿಳಿಯಲು ಪ್ರಯತ್ನ ನಡೆಸಿದರೂ ಹಲವಾರು ಕಾರಣಗಳಿಂದ ಸಾಧ್ಯವಾಗದೆ ಜಿಲ್ಲಾ ಪಂಚಾಯತಿಗೆ ಸ್ಪರ್ಧಿಸಿ ಯಶಸ್ಸು ಕಂಡರು.
JDS ವಿದ್ಯಮಾನಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಅವರು ಕೇವಲ ತಮ್ಮ ಪತಿಗೆ ಮಾತ್ರ ಬೆಂಗಾವಲಾಗಿ ನಿಂತಿಲ್ಲ, ಹಾಸನದ ಪಕ್ಷದ ವಿದ್ಯಮಾನಗಳ ಮೇಲೆ ತಮ್ಮದೇ ಹಿಡಿತ ಹೊಂದಿದ್ದು ಚಾಣಾಕ್ಷ ನಡೆಯ ಮೂಲಕ ಪಕ್ಷದ ಭದ್ರಕೋಟೆ ಅಲುಗಾಡದಂತೆ ನೋಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ರಾಜ್ಯ ಮಟ್ಟದಲ್ಲಿ ಪಕ್ಷದ ತೀರ್ಮಾನಗಳ ಸಮಯದಲ್ಲಿ ತಮ್ಮ ಮಾವ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ಚರ್ಚಿಸಿ, ನೀಡುತ್ತಿದ್ದ ಸಲಹೆಗಳು ವಾಸ್ತವಕ್ಕೆ ಹತ್ತಿರವಷ್ಟೇ ಅಲ್ಲದೆ ಪರಿಣಾಮಕಾರಿಯಾಗಿಯೂ ಇರುತ್ತಿದ್ದವು. ಇದರಿಂದ ಅನೇಕ ಸಂದರ್ಭಗಳಲ್ಲಿ ದೇವೇಗೌಡರು ಇವರ ಸಲಹೆಗಾಗಿ ಕಾಯುತ್ತಿದ್ದರು. ಇದಿಷ್ಟೇ ಅಲ್ಲ, ಕಾರ್ಯಕರ್ತರನ್ನು ಇವರು ವಿಶ್ವಾಸಕ್ಕೆ ತೆಗೆದುಕೊಳ್ಳುವ ರೀತಿ, ಅವರಲ್ಲಿ ಹೋರಾಟ ಮತ್ತು ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಕೈಗೊಳ್ಳುವ ನಿರ್ಧಾರಗಳು ಇವರನ್ನು ಭರವಸೆಯ ನಾಯಕಿ ಎಂದು ಪರಿಗಣಿಸುವಂತೆ ಮಾಡಿವೆ.
ಈ ವೇಳೆ ನಡೆದ ಹಲವಾರು ವಿದ್ಯಮಾನಗಳು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮುಜುಗರಕ್ಕೆ ಸಿಲುಕುವಂತೆ ಮಾಡಿವೆ. ಭವಾನಿ ರೇವಣ್ಣ ಅವರನ್ನು ಇದೇ ರೀತಿಯಲ್ಲಿ ಬಿಟ್ಟರೆ JDS ನಲ್ಲಿ ಮತ್ತೊಂದು ಅಧಿಕಾರ ಕೇಂದ್ರ ಸೃಷ್ಟಿಯಾಗಲಿದೆ ಎಂದು ಭಾವಿಸಿದ ಅವರು ಭವಾನಿ ಅವರ ಓಟಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಇದು ಈಗ ದೊಡ್ಡ ಗೌಡರ ಕುಟುಂಬದಲ್ಲಿ ಬಿರುಗಾಳಿ ಸೃಷ್ಟಿಸಿದೆ. ಇದೀಗ ಟಿಕೆಟ್ ಗಾಗಿ ಕಾದಾಟ ತೀವ್ರಗೊಂಡಿದೆ. ಹಾಸನದಲ್ಲಿ ನಾನು ಸ್ಪರ್ಧಿಸಿಯೇ ಸಿದ್ಧ ಎಂದು ಭವಾನಿ ಅವರು ಹಠಕ್ಕೆ ಬಿದ್ದರೆ, ಅಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಲ್ಲ ಎಂದು ಕುಮಾರಸ್ವಾಮಿ ಜಿದ್ದಿಗೆ ಬಿದ್ದಿದ್ದಾರೆ. ಪರಿಣಾಮ ದಳಪತಿಗಳ ಕೋಟೆಯಲ್ಲಿ ಬಿರುಕು ಮೂಡಲು ಶುರುವಾಗಿದೆ.
ಮತ್ತೊಂದೆಡೆ ಹಾಸನದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೊಡಬೇಕೆಂದು ಕಾರ್ಯಕರ್ತರು ಪಟ್ಟು ಹಿಡಿದು ಪ್ರತಿಭಟನೆ, ಹೋರಾಟಗಳನ್ನು ಮಾಡುತ್ತಿದ್ದಾರೆ. ಭವಾನಿ ಪರ ನಿಂತಿರುವ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಾಗೂ ಬೆಂಬಲಿಗರು ‘ಕರ್ನಾಟಕದ ಅಮ್ಮಾ, ಭವಾನಿ ರೇವಣ್ಣ’ ಎಂದು ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಫೋಟೋ ಜೊತೆ ಭವಾನಿ ಫೋಟೋ ಸೇರಿಸಿ ವೈರಲ್ ಮಾಡುತ್ತಿದ್ದಾರೆ. ಕರ್ನಾಟಕದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಅಮ್ಮಾ ಎಂದು ಪೋಸ್ಟ್ ಮಾಡಿದ್ದಾರೆ. ಹಾಸನದ ಮುಂದಿನ MLA ಭವಾನಿ ರೇವಣ್ಣ. ಇದು ಮಹಿಳೆಯರ ಕೋರಿಕೆ ಎಂದು ಹಕ್ಕೊತ್ತಾಯದ ಪೋಸ್ಟ್ ಗಳು ವೈರಲ್ ಆಗುತ್ತಿವೆ. ದಿನೇ ದಿನೇ ಭವಾನಿ ರೇವಣ್ಣಗೆ ಟಿಕೆಟ್ ಕೊಡಬೇಕೆಂದು ಭವಾನಿ ರೇವಣ್ಣ ಅವರ ಬೆಂಬಲಿಗರ ಒತ್ತಡ ಹೆಚ್ಚಾಗುತ್ತಿದೆ.
ಹೀಗಾಗಿ JDS ನ ಮುಂದಿನ ವಿದ್ಯಮಾನಗಳು ಕುತೂಹಲ ಮೂಡಿಸಿವೆ.