ಗೌತಮ್ ಅದಾನಿ ಮತ್ತು ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯ ನಡುವಿನ ಆರೋಪ-ಪ್ರತ್ಯಾರೋಪಗಳ ತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ಜನವರಿ 24, 2023 ರಂದು New York ನಗರದಲ್ಲಿ ನೆಲೆಗೊಂಡಿರುವ ಹಿಂಡೆನ್‌ಬರ್ಗ್ ಸಂಸ್ಥೆಯು (Hindenburg Research) Adani Group Companies ವಿರುದ್ಧ ವರದಿಯೊಂದನ್ನು ಪ್ರಕಟಿಸಿ, ವಂಚನೆಯ ಆರೋಪವನ್ನು ಹೊರಿಸಿತ್ತು. ತತ್ಕಾಲಕ್ಕೆ “ಈ ವರದಿ ಆಧಾರರಹಿತವಾಗಿದೆ ಮತ್ತು ದುರುದ್ದೇಶಪೂರಿತವಾಗಿದೆ” ಎಂದು ಅದಾನಿ ಸಂಸ್ಥೆ ಪ್ರತಿಕ್ರಿಯಿಸಿತ್ತು. ನಂತರ ಆರೋಪಗಳನ್ನು ಖಂಡಿಸುತ್ತಾ, ಜನವರಿ 29, 2023 ಭಾನುವಾರದ ತಡ ರಾತ್ರಿಯ ವೇಳೆಗೆ 413 ಪುಟಗಳುಳ್ಳ ಸುದೀರ್ಘ ವರದಿಯೊಂದನ್ನು ಅದಾನಿ ಸಂಸ್ಥೆಯು ಪ್ರಕಟಿಸಿದೆ. ಅದರಲ್ಲಿ ಹಿಂಡೆನ್‌ಬರ್ಗ್ ಸಂಸ್ಥೆಯನ್ನು “Madoffs of Manhattan” ಎಂದು ಕರೆಯುವುದರೊಂದಿಗೆ ‘ಸೆಕ್ಯುರಿಟೀಸ್ ಮತ್ತು ವಿದೇಶಿ ವಿನಿಮಯ ಕಾನೂನುಗಳನ್ನು ಶಾರ್ಟ್ ಸೆಲ್ಲರ್ ಉಲ್ಲಂಘಿಸಿದೆ’ ಎಂದು ಆಪಾದಿಸಿದೆ. ಮತ್ತು ‘ಇದು ಭಾರತದ ಮೇಲಿನ ಉದ್ದೇಶಪೂರ್ವಕ ದಾಳಿಯಾಗಿದೆ, ಭಾರತೀಯ ಸಂಸ್ಥೆಗಳ ಸ್ವಾತಂತ್ರ್ಯ, ಸಮಗ್ರತೆ, ಗುಣಮಟ್ಟ ಮತ್ತು ಭಾರತದ ಬೆಳವಣಿಗೆ ಮತ್ತು ಮಹತ್ವಾಕಾಂಕ್ಷೆಯನ್ನು ಉದ್ದೇಶಿಸಿ ಮಾಡಿದ ದಾಳಿಯಾಗಿದೆ ‘ ಎಂದು ಅದಾನಿ ಸಂಸ್ಥೆಯು ಕಟುವಾಗಿ ಟೀಕಿಸಿದೆ.
ಇದನ್ನು ನಿರಾಕರಿಸಿದ ಹಿಂಡೆನ್‌ಬರ್ಗ್ ಸಂಸ್ಥೆಯು, “ಇದು ಉದ್ದೇಶಪೂರ್ವಕ ದಾಳಿಯಲ್ಲ. ಸ್ಪಷ್ಟವಾಗಿ ಹೇಳುವುದಾದರೆ, ಭಾರತವು ಅದ್ಭುತವಾದ ಪ್ರಜಾಪ್ರಭುತ್ವವನ್ನು ಹೊಂದಿದೆ. ಪ್ರಜ್ವಲವಾದ ಭವಿಷ್ಯವನ್ನು ಹೊಂದಿರುವ ಭಾರತ ಒಂದು ಉದಯೋನ್ಮುಖ ಸೂಪರ್ ಪವರ್ ರಾಷ್ಟ್ರ ಎಂದು ನಾವು ನಂಬುತ್ತೇವೆ. ಅದಾನಿ ಸಂಸ್ಥೆಯು ತನ್ನ ಏಳಿಗೆಯನ್ನು ರಾಷ್ಟ್ರದ ಏಳಿಗೆಯೊಂದಿಗೆ ಸಂಯೋಜಿಸಲು ಪ್ರಯತ್ನಿಸುತ್ತಿದೆ. ರಾಷ್ಟ್ರೀಯತೆಯ ಸೋಗಿನಲ್ಲಿ ತನ್ನ ವಂಚನೆಯನ್ನು ಮರೆಮಾಚಲು ಪ್ರಯತ್ನಿಸುತ್ತಿದೆ. ಆದರೆ, ಭಾರತದ ಧ್ವಜದಲ್ಲಿ ತನ್ನನ್ನು ತಾನು ಆವರಿಸಿಕೊಂಡ ಅದಾನಿ ಸಂಸ್ಥೆಯು ಭಾರತದ ಭವಿಷ್ಯವನ್ನು ವ್ಯವಸ್ಥಿತವಾಗಿ ಲೂಟಿ ಮಾಡುತ್ತಿದೆ. ವಂಚನೆ ಮಾಡಿದ್ದು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದರೂ, ವಂಚನೆಯು ವಂಚನೆಯೇ ಆಗಿರುತ್ತದೆ.
ವರದಿಯಲ್ಲಿ 413 ಪುಟಗಳಿವೆ. ಆದರೆ ಆರೋಪಗಳಿಗೆ ಸಂಬಂಧಿಸಿದ ವಿಷಯಗಳಿರುವುದು ಕೇವಲ 30 ಪುಟಗಳಲ್ಲಿ ಮಾತ್ರ. ಉಳಿದಂತೆ, 330 ಪುಟಗಳು ನ್ಯಾಯಾಲಯದ ದಾಖಲೆಗಳು, ಮತ್ತುಳಿದ 53 ಪುಟಗಳು ಮಹಿಳಾ ಉದ್ಯಮಶೀಲತೆ ಮತ್ತು ಸುರಕ್ಷಿತ ತರಕಾರಿಗಳ ಉತ್ಪಾದನೆಗಳಂತಹ ಇತರ ಉಪಕ್ರಮಗಳ ವಿವರಗಳು, ಉನ್ನತ ಮಟ್ಟದ ಹಣಕಾಸಿನ ವಿವರಗಳು ಮತ್ತು ಸಾಮಾನ್ಯ ಮಾಹಿತಿಗಳ ಕುರಿತಾಗಿವೆ. ನಮ್ಮ ಆರೋಪಗಳಿಗೆ ಮತ್ತು ಪ್ರಶ್ನೆಗಳಿಗೆ ಯಾವುದೇ ರೀತಿಯ ಸ್ಪಷ್ಟವಾದ ಮತ್ತು ನಿಖರವಾದ ಉತ್ತರ ವರದಿಯಲ್ಲಿಲ್ಲ” ಎಂದು ಉತ್ತರಿಸಿದೆ.
ಗೌತಮ್ ಅದಾನಿಯವರ ಸಹೋದರ ವಿನೋದ್ ಅದಾನಿಯವರಿಗೆ ಸಂಬಂಧಿಸಿದ ಕಡಲಾಚೆಯ ಶೆಲ್ ಘಟಕಗಳಿಂದ, ಅದಾನಿ ಗ್ರೂಪ್ ಮೂಲಕ ಹರಿದು ಬಂದ ಶತಕೋಟಿ ಡಾಲರ್‌ಗಳ ಮೂಲದ ಬಗ್ಗೆ ಹಿಂಡೆನ್‌ಬರ್ಗ್ ಪ್ರಶ್ನಿಸಿತ್ತು. ಅದಕ್ಕುತ್ತರವಾಗಿ ಅದಾನಿ ಸಂಸ್ಥೆಯು, “ನಮಗೆ ಅವರ ನಿಧಿಯ ಮೂಲದ ಬಗ್ಗೆ ತಿಳಿದಿರುವುದಿಲ್ಲ ಅಥವಾ ತಿಳಿದಿರುವ ಅಗತ್ಯವಿಲ್ಲ” ಎಂಬ ಹಾರಿಕೆಯ ಹೇಳಿಕೆಯನ್ನು ನೀಡಿದೆ.
ಅಕ್ರಮಗಳೆಂದು ಹಿಂಡೆನ್‌ಬರ್ಗ್ ಆರೋಪಿಸಿದ ಪ್ರಮುಖ ವಿಷಯಗಳಲ್ಲಿ ಕೆಲವೆಂದರೆ –
* ಶಂಕಿತ ಕಡಲಾಚೆಯ ಸ್ಟಾಕ್ ಪಾರ್ಕಿಂಗ್ ಘಟಕಗಳು (stock parking entities ) ಮತ್ತು ಅದಾನಿ ಪ್ರವರ್ತಕರ ನಡುವಿನ ಹಲವಾರು ಅಕ್ರಮಗಳು ಮತ್ತು ಶಂಕಾಸ್ಪದವಾದ ಸಂಪರ್ಕಗಳು
* ವಿನೋದ್ ಅದಾನಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಮಾರಿಷಸ್ ಘಟಕದಿಂದ 253 ಮಿಲಿಯನ್ ಡಾಲರ್ ಗಳ ಸಾಲ
* ಅದಾನಿ ಗ್ರೂಪ್‌ನ ಖಾಸಗಿ ಕುಟುಂಬ ಹೂಡಿಕೆ ಕಚೇರಿಯ ಮುಖ್ಯಸ್ಥರಿಂದ ನಿಯಂತ್ರಿಸಲ್ಪಡುವ ಮಾರಿಷಸ್ ಘಟಕದಿಂದ 692.5 ಮಿಲಿಯನ್ ಡಾಲರ್ ಗಳ ಹೂಡಿಕೆ
* ಇತಿಹಾಸದಲ್ಲಿ ಅತ್ಯಂತ ಕುಖ್ಯಾತ ಅಂತಾರಾಷ್ಟ್ರೀಯ ವಂಚನೆ ಮತ್ತು ಮನಿ ಲಾಂಡರಿಂಗ್ ಹಗರಣಗಳಲ್ಲಿ (Money laundering scandals) ಒಂದಾದ 1MDB ಹಗರಣದಲ್ಲಿ ಭಾಗಿಯಾಗಿದ್ದ Amicorp ನ ಸಹಾಯದಿಂದ ಹಲವಾರು ಶಂಕಿತ ಸ್ಟಾಕ್ ಪಾರ್ಕಿಂಗ್ ಘಟಕಗಳ ರಚನೆ, ಇತ್ಯಾದಿ.
ಚೀನಾ ದೇಶದ ಚಾಂಗ್ ಚುಂಗ್-ಲಿಂಗ್ (Chang Chung-Ling) ಎನ್ನುವವರೊಂದಿಗೆ ಅದಾನಿ ಸಂಸ್ಥೆಯು ಸಂಬಂಧ ಹೊಂದಿದೆ. ಭಾರತದ ಅತಿ ದೊಡ್ಡ ಲಂಚದ ಹಗರಣಗಳಲ್ಲಿ ಒಂದಾದ ಅಗುಸ್ಟಾವೆಸ್ಟ್‌ಲ್ಯಾಂಡ್ ಹಗರಣದಲ್ಲಿ (AgustaWestland scandal) ಇದೇ ಚಾಂಗ್ ಚುಂಗ್-ಲಿಂಗ್ ಭಾರೀ ಭ್ರಷ್ಟಾಚಾರದ ಯೋಜನೆಯ ಭಾಗವಾಗಿದ್ದರು ಎಂದು ಹೇಳಲಾಗಿದೆ. ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರಬಲ್ಲ ಇಂಥ ಸಂಬಂಧದ ಬಗ್ಗೆಯೂ ಹಿಂಡೆನ್‌ಬರ್ಗ್ ಪ್ರಶ್ನಿಸಿತ್ತು.
‘ಪ್ರಸ್ತಾಪಿಸಿದ 88 ವಿಷಯಗಳಲ್ಲಿ, ಸುಮಾರು 62 ಪ್ರಶ್ನೆಗಳಿಗೆ ಅದಾನಿ ಸಂಸ್ಥೆಯು ಸ್ಪಷ್ಟವಾದ ಮತ್ತು ಸಮರ್ಪಕವಾದ ಉತ್ತರಗಳನ್ನು ನೀಡಲಿಲ್ಲ. ಉತ್ತರಿಸಿದ 26 ಪ್ರಶ್ನೆಗಳಲ್ಲಿ, ಉತ್ತರಗಳಿಗಿಂತ ಹೆಚ್ಚಾಗಿ ಆರೋಪಗಳಿಗೆ ವಾದಗಳನ್ನೇ ಮಂಡಿಸಿದೆ’ ಎಂದು ಹಿಂಡೆನ್‌ಬರ್ಗ್ ಪ್ರತ್ಯಾರೋಪವನ್ನು ಮಾಡಿದೆ.
ಹೀಗೆ ಉದಾಹರಣೆ ಸಮೇತ, ಹಲವು ಸಂಶಯಾಸ್ಪದ ವಿಷಯಗಳ ಕುರಿತು ಹಿಂಡೆನ್‌ಬರ್ಗ್ ಪ್ರಶ್ನೆಗಳನ್ನು ಕೇಳಿತ್ತು. ಆದರೆ ಬಹುತೇಕ ಯಾವ ಆರೋಪಗಳನ್ನೂ ಸಮರ್ಥವಾಗಿ ಸಮರ್ಥಿಸಿಕೊಳ್ಳದೆ, ಪರೋಕ್ಷವಾಗಿ ಹಿಂಡೆನ್‌ಬರ್ಗ್ ಸಂಸ್ಥೆಯ ಆಪಾದನೆಗಳನ್ನು ಒಪ್ಪಿಕೊಂಡ ಆರೋಪವನ್ನು ಅದಾನಿ ಸಂಸ್ಥೆಯು ಎದುರಿಸುತ್ತಿದೆ.