ಬೆಂಗಳೂರು,ಫೆ.3-
ಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದು ಕಳೆದ ವಿಧಾನಸಭೆ ಅಧಿವೇಶನ ಬಹಿಷ್ಕರಿಸುವ ಬೆದರಿಕೆ ಹಾಕಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇದೀಗ ವರಸೆ ತೆಗೆದಿದ್ದಾರೆ. ‘ನನಗೆ ಮಂತ್ರಿ ಸ್ಥಾನ ಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿದ್ದೇನೆ, ಆದರೂ ಇಲ್ಲಿಯವರೆಗೆ ಸಂಪುಟ ವಿಸ್ತರಣೆ ಮಾಡಿಲ್ಲ. ಇದಕ್ಕೆ ಏನು ಸಮಸ್ಯೆ ಇದೆ ಎಂದು ಗೊತ್ತಿಲ್ಲ’ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾರ್ಯಕರ್ತರ ಅಪೇಕ್ಷೆಯ ಮೇರೆಗೆ ಸಂಪುಟ ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದೆ. ಅವರು ಕೂಡ ಭರವಸೆ ನೀಡಿದ್ದರು. ಆದರೆ ಈಗ ಅವರಿಗೆ ಏನೇನು ಸಮಸ್ಯೆ ಇದೆಯೋ ಗೊತ್ತಿಲ್ಲ . ನನಗೆ ಮಾತ್ರ ಸಚಿವ ಸ್ಥಾನ ಬೇಡ ಎಂದು ಹೇಳಿ ಬಂದಿದ್ದೇನೆ’ ಎಂದು ತಿಳಿಸಿದರು.
‘ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಯಾರಿಗೂ ಕನಸು ಬಿದ್ದಿರಲಿಲ್ಲ. ಅವರು ಮಲಗಿದ್ದು ಒಂದು ಕಡೆ, ಪತ್ರ ಸಿಕ್ಕಿದ್ದು ಮತ್ತೊಂದು ಕಡೆ. ಆದರೂ ನಾನು ರಾಜೀನಾಮೆ ನೀಡಿದೆ. ತನಿಖೆ ಪೂರ್ಣಗೊಂಡಿದ್ದು ನನಗೆ ಕ್ಲೀನ್‍ಚಿಟ್ ಸಿಕ್ಕಿದೆ. ಹೀಗಾಗಿ ಮಂತ್ರಿ ಸ್ಥಾನ ಕೊಡಿ ಎಂದು ಕೇಳಿದ್ದೆ. ಇದರಲ್ಲಿ ಯಾವ ಮುಚ್ಚುಮರೆಯೂ ಇಲ್ಲ’ ಎಂದು ತಮ್ಮ ನಿಲುವನ್ನು ಸಮರ್ಥಿಸಿದರು.
Congress ನಾಯಕರು ಬಸ್ ಯಾತ್ರೆ ವೇಳೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ, ಆ ಪಕ್ಷದ ಅಧ್ಯಕ್ಷರು ತಿಹಾರ್ ಜೈಲಿಗೆ ಹೋಗಿದ್ದು ಯಾಕೆ? ED, IT, CBI ಏಕೆ ತನಿಖೆ ಮಾಡುತ್ತಿವೆ? ಭ್ರಷ್ಟಾಚಾರ, ಅಕ್ರಮ ಹಣ ವಿಚಾರವಾಗಿ ಅಲ್ಲವೇ? ಕಂತೆ ಕಂತೆ ನೋಟು ಸಿಕ್ಕಿದ್ದು ಸುಳ್ಳಾ?’ ಎಂದು ಪ್ರಶ್ನಿಸಿದರು.