ಬೆಂಗಳೂರು,ಫೆ.3-
ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ (Sudeep) ಸಕ್ರಿಯ ರಾಜಕೀಯ ಸೇರುತ್ತಾರೆ.ರಾಜಕೀಯ ಕುಟುಂಬ ಹಿನ್ನೆಲೆಯ ಅವರು Congress ಸೇರಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸುದೀಪ್ ಬಳ್ಳಾರಿ ಅಥವಾ ರಾಯಚೂರು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆಂಬ ಸುದ್ದಿಗಳು ಹರಡಿದ್ದವು. ಈ ನಿಟ್ಟಿನಲ್ಲಿ ಸುದೀಪ್ ಅವರನ್ನು ಪಕ್ಷಕ್ಕೆ ಕರೆತರುವ ಎಲ್ಲಾ ಪ್ರಯತ್ನಗಳೂ ನಡೆದಿದ್ದವು. ಕಾಂಗ್ರೆಸ್ ನಾಯಕಿ, ನಟಿ, ಮೋಹಕತಾರೆ ರಮ್ಯಾ ಅವರು ಈ ಸಂಬಂಧ ಸುದೀಪ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಮಾತುಕತೆ ನಡೆಸಿದ್ದರು.
ಇದರ ಬೆನ್ನಲ್ಲೇ ಕಳೆದ ರಾತ್ರಿ ಕಿಚ್ಚ ಸುದೀಪ್ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಕಳೆದ ರಾತ್ರಿ ಸುದೀರ್ಘ ಸಮಯದವರೆಗೆ ಇಬ್ಬರೂ ಮಾತುಕತೆ ನಡೆಸಿ, ಭೋಜನ ಸವಿದಿದ್ದಾರೆ. ಈ ವೇಳೆ ಕಾಂಗ್ರೆಸ್ ಸೇರುವಂತೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ. ಅಲ್ಲದೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಸಲಹೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್ ತಾವು ಸದ್ಯಕ್ಕೆ ಸಕ್ರಿಯ ರಾಜಕಾರಣ ಪ್ರವೇಶಿಸುವುದಿಲ್ಲ. ತಮ್ಮ ಕುಟುಂಬ ರಾಜಕೀಯಕ್ಕೆ ಹೊರತೇನೂ ಅಲ್ಲ. ಆದರೆ ತಾನಿನ್ನೂ ಹೆಚ್ಚಿನ ಸಮಯ ಸಿನಿಮಾ ರಂಗದಲ್ಲಿ ಕಳೆಯಬೇಕೆಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ ಎಂದು ಗೊತ್ತಾಗಿದೆ. ತಮಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಒಲವಿದೆ, ಆದರೆ ಪಕ್ಷ ಸೇರ್ಪಡೆಯಾಗಿ ರಾಜಕಾರಣಿಯಾಗುವ ಮನಸ್ಸಿಲ್ಲ ಎಂದು ಹೇಳಿದ ಅವರು ಮುಂದಿನ ಚುನಾವಣೆಯಲ್ಲಿ ತಮ್ಮ ಕೆಲವು ಸ್ನೇಹಿತರು ಕಣಕ್ಕಿಳಿಯಲಿದ್ದು, ಅವರ ಪರ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರೆಂದು ಉನ್ನತ ಮೂಲಗಳು ತಿಳಿಸಿವೆ.
ಪಕ್ಷಕ್ಕೆ ಸ್ವಾಗತ:
ಈ ನಡುವೆ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ KPCC ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ನಟ ಸುದೀಪ್ ಕಾಂಗ್ರೆಸ್‍ಗೆ ಬಂದರೆ ಸ್ವಾಗತಿಸುವುದಾಗಿ ಹೇಳಿದ್ದಾರೆ.
ಬಹುತೇಕವಾಗಿ ಚಿತ್ರನಟರು ರಾಜಕೀಯ ಸೇರುವಾಗ ಹಿಂದೆ-ಮುಂದೆ ನೋಡುತ್ತಾರೆ. ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಚಿತ್ರನಟರ ರಾಜಕೀಯ ಭವಿಷ್ಯ ಯಶಸ್ವಿಗೊಂಡಿದೆ. ಆದರೆ, ಕರ್ನಾಟಕದಲ್ಲಿ ಅಂತಹ ಬೆಳವಣಿಗೆಗಳಿಲ್ಲ. ಆದಾಗ್ಯೂ ಸುದೀಪ್ ಅವರು ಪಕ್ಷಕ್ಕೆ ಬರುವುದನ್ನು ತಾವು ಸ್ವಾಗತಿಸುವುದಾಗಿ ಹೇಳಿದ್ದಾರೆ.