ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮದಲ್ಲಿ ಪ್ರಭಾವಿ ಸಚಿವರೊಬ್ಬರ ಹೆಸರು ಕೇಳಿ ಬರುತ್ತಿದ್ದು, ಅವರು ಸಿಎಂ ರೇಸ್‌ನಲ್ಲಿದ್ದಾರೆ. ಅವರ ರಕ್ಷಣೆ ಮಾಡಿ, ಅವರಿಗೆ ತೊಂದರೆ ಕೊಡಬೇಡಿ ಎಂದು ತಮಗೆ ದೂರವಾಣಿ ಕರೆಗಳು ಬರುತ್ತಿವೆ ಎಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಆ ಮಂತ್ರಿ ನಾವು ಗಂಡಸರೇ ಎಂದು ಈ ಹಿಂದೆ ಮುಖ್ಯಮಂತ್ರಿಗಳ ಎದುರೆ ಮಾತನಾಡಿದ್ದರು. ಹಾಗಾಗಿ ಆ ಪ್ರಭಾವಿ ಮಂತ್ರಿಯ ಹೆಸರೇಳಲು ತಮಗೆ ಭಯ, ಗಡಗಡ ಎಂದು ವ್ಯಂಗ್ಯವಾಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿಯ ಅಕ್ರಮದಲ್ಲಿ ಭಾಗಿಯಾಗಿರುವುದು ಆ ಮಂತ್ರಿಯ ತಮ್ಮ ಎಂದು ನಾನು ಹೇಳಲ್ಲ. ನನಗಿರುವ ಮಾಹಿತಿ ಪ್ರಕಾರ ಮಾಗಡಿಯ ಅಭ್ಯರ್ಥಿಗಳು ಅಕ್ರಮದಲ್ಲಿದ್ದಾರೆ. ಅವರು ಆಸ್ತಿಗಳನ್ನು ಮಾರಿ ಸಮಸ್ಯೆಯಾಗಿದೆ. ಇವರನ್ನು ಪೊಲೀಸರು ವಿಚಾರಣೆಗೆ ಕರೆ ತಂದಾಗ ಮಂತ್ರಿಗಳೆ ಫೋನ್ ಮಾಡಿ ಬಿಡಿಸಿದ್ದಾರೆ ಎಂಬ ಮಾಹಿತಿ ಇದೆ. ಇದೆಲ್ಲಾ ಹೊರ ಬರಬೇಕು ಎಂದರು.
ಮುಖ್ಯಮಂತ್ರಿಗಳಿಗೆ ಬದ್ಧತೆ ಇದ್ದರೆ ಯಾರೇ ಭಾಗಿಯಾಗಿರಲಿ, ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿ. ಯಾರನ್ನೂ ರಕ್ಷಣೆ ಮಾಡುವುದು ಬೇಡ. ಯಾವುದೇ ಪಕ್ಷದವರಾಗಿರಲಿ, ಮುಖ್ಯಮಂತ್ರಿಗಳು ಏನು ಮಾಡುತ್ತಾರೋ ನೋಡೋಣ ಎಂದರು.ಪಿಎಸ್‌ಐ ನೇಮಕಾತಿಯ ಹಗರಣದಲ್ಲಿ ಪ್ರಭಾವಿ ಸಚಿವರು ಭಾಗಿಯಾಗಿ ಕೆಲವರನ್ನು ಪೊಲೀಸರಿಂದ ಬಿಡಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬರುತ್ತಿದೆ ಎಂದು ಹೇಳಿದರು