ಬೆಂಗಳೂರು.
ರಾಜ್ಯದಲ್ಲಿ ಶತಾಯ ಗತಾಯ ಅಧಿಕಾರ ಚುಕ್ಕಾಣಿ ಹಿಡಿಯಲೇಬೇಕೆಂದು ಪಣ ತೊಟ್ಟಿರುವ Congress ನಾಯಕರು ಚುನಾವಣಾ ವೇಳಾಪಟ್ಟಿಯ ಪ್ರಕಟಣೆಗೂ ಮುನ್ನವೇ ಅಭ್ಯರ್ಥಿಗಳ ಪಟ್ಟಿಯನ್ನು (candidates list) ಪ್ರಕಟಿಸುವ ಮೂಲಕ ಕೊನೆಯ ಹಂತದ ಭಿನ್ನಮತಕ್ಕೆ ಕಡಿವಾಣ ಹಾಕಲು ತೀರ್ಮಾನಿಸಿದ್ದಾರೆ.
ಈ ನಿಟ್ಟಿನಲ್ಲಿ 28 ಕ್ಷೇತ್ರಗಳಿರುವ ಬೆಂಗಳೂರಿನಲ್ಲಿ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು, ಯಾವುದೇ ಕಾರಣಕ್ಕೂ ಹೊಂದಾಣಿಕೆ ರಾಜಕಾರಣಕ್ಕೆ ಅವಕಾಶ ನೀಡಬಾರದು ಎಂದು ಹೈಕಮಾಂಡ್ ಸೂಚನೆ ನೀಡಿದೆ. ಪ್ರತಿಬಾರಿ ಬೆಂಗಳೂರಿನಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತದೆ ಎಂಬ ವರದಿಗಳಿವೆ, ಹೀಗಾಗಿ ಇದಕ್ಕೆ ಆಸ್ಪದ ನೀಡದಂತೆ ಕೆಲಸ ಮಾಡಬೇಕೆಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೂಚಿಸಿದ್ದಾರೆಂದು ಗೊತ್ತಾಗಿದೆ.
ಈ ಹೊಂದಾಣಿಕೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಈಗಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಘೋಷಣೆ ಮಾಡುವ ಮೂಲಕ ಸಮರ್ಥವಾಗಿ ಎದಿರೇಟು ನೀಡಲು ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಭಾಗದ ಉಸ್ತುವಾರಿ ಹೊಂದಿರುವ AICC ಕಾರ್ಯದರ್ಶಿ ಅಭಿಷೇಕ್ ದತ್ತ (Abhishek Dutt), ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala) ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ (Mahalakshmi Layout), ಯಶವಂತಪುರ (Yesvantpur) ಮತ್ತು ಯಲಹಂಕ (Yelahanka) ಕ್ಷೇತ್ರದ ಆಯ್ಕೆ ಮಾತ್ರ ಬಾಕಿಯಿದ್ದು ಅದನ್ನೂ ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಲಿದ್ದಾರೆಂದು ಗೊತ್ತಾಗಿದೆ.
ಗಾಂಧಿನಗರ – ದಿನೇಶ್ ಗುಂಡೂರಾವ್, ಹೆಬ್ಬಾಳ – ಬೈರತಿ ಸುರೇಶ್, ಬಿಟಿಎಂ ಲೇಔಟ್ – ರಾಮಲಿಂಗಾರೆಡ್ಡಿ, ಜಯ ನಗರ – ಸೌಮ್ಯಾರೆಡ್ಡಿ, ಶಿವಾಜಿ ನಗರ – ರಿಜ್ವಾನ್ ಅರ್ಷದ್, ಪುಲಕೇಶಿನಗರ – ಅಖಂಡ ಶ್ರೀನಿವಾಸಮೂರ್ತಿ, ಸರ್ವಜ್ಞನಗರ – ಕೆ.ಜೆ. ಜಾರ್ಜ್, ಶಾಂತಿನಗರ – ಎನ್.ಎ. ಹ್ಯಾರೀಸ್, ಚಾಮರಾಜ ಪೇಟೆ -ಜಮೀರ್ ಅಹ್ಮದ್, ಬ್ಯಾಟರಾಯನಪುರ -ಕೃಷ್ಣ ಬೈರೇಗೌಡ, ವಿಜಯ ನಗರ -ಎಂ. ಕೃಷ್ಣಪ್ಪ, ಆನೇಕಲ್ -ಬಿ. ಶಿವಣ್ಣ, ವಿಜಯನಗರ – ಎಂ.ಕೃಷ್ಣಪ್ಪ, ಹಾಲಿ ಶಾಸಕರಾಗಿದ್ದು ಅವರಿಗೇ ಟಿಕೆಟ್ ಖಚಿತ ವಾಗಿದೆ.
ಇನ್ನು ಕಳೆದ Electionಯಲ್ಲಿ ಕಡಿಮೆ ಅಂತರದಿಂದ ಸೋತಿದ್ದವರಿಗೂ ಟಿಕೆಟ್ ಖಾಯಂ ಆಗಿದ್ದು ಗೋವಿಂದರಾಜ ನಗರ – ಪ್ರಿಯಾಕೃಷ್ಣ, ಆರ್.ಆರ್. ನಗರ – ಕುಸುಮಾ ಎಚ್, ಮಹಾದೇವಪುರ – ಎಚ್.ನಾಗೇಶ್, ಚಿಕ್ಕಪೇಟೆ – ಆರ್.ವಿ.ದೇವರಾಜ್, ಗಂಗಾಂಬಿಕೆ ಮಲ್ಲಿಕಾರ್ಜುನ, ಮಲ್ಲೇಶ್ವರಂ – ಅನೂಪ್ ಅಯ್ಯಂಗಾರ್, ರಶ್ಮಿ ರವಿಕಿರಣ್, ರಾಜಾಜಿನಗರ – ರಘುವೀರ್ ಎಸ್. ಗೌಡ, ಜಿ. ಪದ್ಮಾವತಿ, ಕೆ.ಆರ್.ಪುರ – ಎಂ.ನಾರಾಯಣಸ್ವಾಮಿ, ಡಿ.ಕೆ. ಮೋಹನ್, ಸಿ.ವಿ. ರಾಮನ್ ನಗರ – ಆನಂದ್‌ಕುಮಾರ್, ಸಂಪತ್‌ರಾಜ್, ದಾಸರಹಳ್ಳಿ- ಧನಂಜಯ, ಎಚ್.ಎಂ. ರೇವಣ್ಣ, ನಾಗಲಕ್ಷ್ಮಿ ಚೌಧರಿ, ಪದ್ಮನಾಭನಗರ – ರಘುನಾಥ ನಾಯ್ಡು, ಗುರುವಪ್ಪ ನಾಯ್ಡು, ಬೊಮ್ಮನಹಳ್ಳಿ – ಉಮಾಪತಿ ಶ್ರೀನಿವಾಸಗೌಡ ಮತ್ತು ಕವಿತಾ ರೆಡ್ಡಿ ಅವರುಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕೆಲವು ಕ್ಷೇತ್ರಗಳಿಗೆ ಇಬ್ಬರ ಹೆಸರು ಗಳನ್ನು ಅಂತಿಮಗೊಳಿಸಿದ್ದು, ಈ ಬಗ್ಗೆ ಖರ್ಗೆ ಅವರೊಂದಿಗೆ KPCC ಅಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕರು ಸಭೆ ನಡೆಸಿ ಒಂದು ಹೆಸರು ಅಂತಿಮಗೊಳಿಸಲಿದ್ದಾರೆಂದು ಗೊತ್ತಾಗಿದೆ.