ಬೆಂಗಳೂರು,ಫೆ.20-
ನಗರದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಕಮೀಷನರೇಟ್ ಬಲ ಪಡಿಸುವ ನಿಟ್ಟಿನಲ್ಲಿ 2000 ಪೋಲಿಸ್ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಗರಕ್ಕೆ ನಿಯೋಜಿಸಿ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ನಿರ್ಣಯವನ್ನು ಕೈಗೊಂಡಿದ್ದು, ಸರ್ಕಾರದ ಈ ನಿರ್ಣಯಕ್ಕೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ (Pratap Reddy) ಟ್ವಿಟರ್ ಮೂಲಕ ಧನ್ಯವಾದ ಹೇಳಿದ್ದಾರೆ.
2000 ಪೊಲೀಸರ ನಿಯೋಜನೆಯಿಂದಾಗಿ ಹೆಚ್ಚಿನ ಅನುಕೂಲವಾಗಲಿದ್ದು, ಹೆಚ್ಚಿನ ಕಾರ್ಯಕ್ಷಮತೆಯಿಂದಾಗಿ ನಗರದಲ್ಲಿ ಇಲಾಖೆ ಕಾರ್ಯ ನಿರ್ವಹಿಸುತ್ತದೆ ಎಂದು ಟ್ವಿಟರ್ ಮೂಲಕ ಹೇಳಿದ್ದಾರೆ.
ನಗರಕ್ಕೆ 2000 ಪೊಲೀಸರನ್ನು ನಿಯೋಜನೆ ಮಾಡುವುದರಿಂದ ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಶೇ 11% ಪ್ರತಿಶತದಷ್ಟು ಪೊಲೀಸ್ ಸಿಬ್ಬಂದಿ ಸಂಖ್ಯೆ ಏರಿಕೆಯಾಗುತ್ತದೆ ಎಂದು ಪ್ರತಾಪ್ ರೆಡ್ಡಿ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಇನ್ನು ಬೆಂಗಳೂರು ನಗರದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರದ ಬಜೆಟ್ ನಲ್ಲಿ 20 ಪೊಲೀಸ್ ಠಾಣೆಗಳನ್ನು ತೆರೆಯಲು ಹಣ ಮೀಸಲಿಡಲಾಗಿದೆ.