ಬೆಂಗಳೂರು,ಫೆ.26- ವಿಧಾನ ಪರಿಷತ್ ಸದಸ್ಯ ಬೋಜೆಗೌಡ ಅವರ ದುಬಾರಿ ಕಾರಿಗೆ ನಂಬರ್ ಪ್ಲೇಟ್ ಅಳವಡಿಸಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಇರಿಸಿದ್ದ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಹೈಗ್ರೌಂಡ್ ಪೊಲೀಸರು ಜೆಡಿಎಸ್ ಮುಖಂಡನೊಬ್ಬನನ್ನು ಬಂಧಿಸಿದ್ದಾರೆ. ವಿಧಾನಸಭಾ ಟಿಕೆಟ್ ಗಾಗಿ ಓಡಾಡುತ್ತಿದ್ದ ಜೆಡಿಎಸ್ ಮುಖಂಡ ಶಬಾಜ್ ಬಂಧಿತ ಆರೋಪಿಗಳಾಗಿದ್ದಾನೆ.
ಭೋಜೆಗೌಡರ ಕಾರಿನ ನಂಬರ್ ಪ್ಲೇಟ್ ನಕಲು ಮಾಡಿ ಅದೇ ನಂಬರ್ ನಲ್ಲಿ ಬೇರೆ ಕಾರನ್ನು ಮಾರಾಟ ಮಾಡಲು ಯತ್ನಿಸಲಾಗಿದೆ. ಈ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ವಿಚಾರಣೆ ವೇಳೆ ಮಂಜು ಕೊಟ್ಟ ಮಾಹಿತಿಯನ್ನು ಆಧರಿಸಿ ಶಬಾಜ್ ನನ್ನು ಬಂಧಿಸಲಾಗಿದೆ.
ಬಂಧಿತ ಶಬಾಜ್, ಹಲವು ಜೆಡಿಎಸ್ ನಾಯಕರೊಂದಿಗೆ ಕಾಣಿಸಿಕೊಂಡಿದ್ದಾನೆ. ನಕಲಿ ದಾಖಲೆ ಸೃಷ್ಟಿಸಿದ್ದ ಕಾರನ್ನು ರಲ್ಲಿ ಶಬಾಜ್, ಮಂಜನಿಗೆ ಕೊಟ್ಟಿದ್ದರು. ಮಂಜ ಸೆಕೆಂಡ್ ಹ್ಯಾಂಡ್ ಕಾರ್ ಶೋ ರೂಮ್ ಮಾಲೀಕ ಇಮ್ರಾನ್ ಗೆ ಕೊಟ್ಟಿದ್ದ.
ಮಂಜ ಹಾಗೂ ಶಬಾಜ್ ನನ್ನ ಹೈಗ್ರೌಂಡ್ ಪೊಲೀಸರು ಬಂಧಿಸಿದ್ದು ಇದೇ ರೀತಿ ಹಲವು ಕಾರ್ ಗಳ ನಂಬರ್ ಪ್ಲೇಟ್ ನಕಲಿ ಮಾಡಿ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದ್ದು ತನಿಖೆಯನ್ನು ಮುಂದುವರೆಸಲಾಗಿದೆ.
ಎಂಎಲ್ ಸಿ ಭೋಜೆಗೌಡರ ಇನೋವಾ ಕ್ರಿಸ್ಟಾ ಕಾರಿದ್ದು, ಆ ಕಾರಿನ ನಂಬರ್ ಕೆಎ18 ಜಡ್ -5977 ಪ್ಲೇಟನ್ನು ಮತ್ತೊಂದು ಇನ್ನೋವಾ ಕ್ರಿಸ್ಟಾ ಕಾರಿಗೆ ಅಳವಡಿಸಿ ಕ್ವೀನ್ ರಸ್ತೆಯ ಸೆಕೆಂಡ್ ಹ್ಯಾಂಡ್ ಶೋರೂಂವೊಂದರಲ್ಲಿ ಮಾರಾಟಕ್ಕೆ ಇಡಲಾಗಿತ್ತು.
ಭೋಜೆಗೌಡರ ಅಪ್ತ ಸಹಾಯಕ ಮಾದೇಶ್ ಕ್ವೀನ್ ರಸ್ತೆಯಲ್ಲಿ ಬರುವಾಗ ಶೋರೂಂ ಬಳಿ ಇನ್ನೋವಾ ಕ್ರಿಸ್ಟಾ ಕಾರನ್ನ ನೋಡಿ ಇದು ಎಂಎಲ್ಸಿ ಭೋಜೆಗೌಡರ ಕಾರು ಅಲ್ವಾ ಅಂತ ಶೋರೂಂ ಸಿಬ್ಬಂದಿಯನ್ನು ವಿಚಾರಿಸಿದ್ದಾರೆ.
ಬಳಿಕ ಭೋಜೆಗೌಡರಿಗೆ ಫೋನ್ ಮಾಡಿ ಕಾರು ಮಾರಾಟ ಮಾಡುತ್ತಿದ್ದೀರಾ ಎಂದು ವಿಚಾರಿಸಿದಾಗ, ಭೋಜೆಗೌಡರು ಇಲ್ಲ ಕಾರು ಮನೆಯ ಬಳಿಯೇ ಇದೆ ಎಂದು ಹೇಳಿದ್ದಾರೆ. ನಂತರ ಭೋಜೆಗೌಡರ ಪಿಎ ಮಾದೇಶ್ ನಕಲಿ ನಂಬರ್ ಪ್ಲೇಟ್ ಬಳಸಿ ಬೇರೆ ಕಾರನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ನಂತರ ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಎಂಎಲ್ ಸಿ ಭೋಜೆಗೌಡ, ಒಂದೊಂದು ನಂಬರ್ ಇಟ್ಟುಕೊಂಡು ಹತ್ತು ಬಸ್ ಓಡಿಸುತ್ತಾರೆ ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಅಂತ ಒತ್ತಾಯಿಸಿದ್ದಾರೆ. ದಂಧೆಕೋರರು ವಿವಿಐಪಿ ಕಾರಿನ ನಂಬರ್ ಬಳಸುತ್ತಾರೆ, ಅವರು ಎಷ್ಟೇ ಪ್ರಭಾವಿ ಆಗಿದ್ದರೂ ಕ್ರಮ ಆಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದರು.