ಬೆಂಗಳೂರು, ಮಾ. 31- ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ತಮ್ಮ ವಿಧಾನಸಭಾ ಸದಸ್ಯ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.ಈ ಇಬ್ಬರೂ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ ಗೋಪಾಲಕೃಷ್ಣ ಅವರು ಶಿರಸಿಯಲ್ಲಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನದ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ

ವಿಧಾನಸೌಧದಲ್ಲಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.ರಾಜೀನಾಮೆ ಪತ್ರ ಸಲ್ಲಿಸಿದ ನಂತರ ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ತೆರಳಿದರು.
ಗೋಪಾಲಕೃಷ್ಣ ಅವರು ಬಿಜೆಪಿ ತೊರೆಯಲಿದ್ದು, ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಆದರೆ, ರಾಮಸ್ವಾಮಿ ಇನ್ನೂ ಮುಂದಿನ ರಾಜಕೀಯದ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಎ.ಟಿ.ರಾಮಸ್ವಾಮಿ, ಜೆಡಿಎಸ್ ಬಿಟ್ಟಿರುವುದಾಗಿ ಎಲ್ಲೂ ಹೇಳಿಲ್ಲ. ಆದರೆ, ಜೆಡಿಎಸ್‍ನವರೇ ನನ್ನನ್ನು ಪಕ್ಷದಿಂದ ಹೊರ ಹಾಕಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇ ನನಗೆ ಮುಳುವಾಯಿತು ಎಂದು ಹೇಳಿದರು.
ವೈಯಕ್ತಿಕ ಹಿತಾಸಕ್ತಿಯಿಂದ ರಾಜಕೀಯ ಮಾಡಿಲ್ಲ. ಶಾಸಕನಾಗಿದ್ದಾಗ ಜನಪರ ಕೆಲಸ ಮಾಡಿದ್ದೇನೆ. ಸರಿ ಇದ್ದರೆ ಸರಿ. ತಪ್ಪಾಗಿದ್ದರೆ ತಪ್ಪು ಎಂದು ಹೇಳಿದ್ದೇನೆ. ಜನರ ಹಿತವನ್ನು ಬಯಸಿ ಕೆಲಸ ಮಾಡಿದ್ದೇನೆ ಸಂತೋಷದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಶಾಸಕನಾಗಲು ಅವಕಾಶ ಮಾಡಿಕೊಟ್ಟ ಜೆಡಿಎಸ್ ನಾಯಕರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

