ಕನ್ನಡ ಚಲನಚಿತ್ರ ನಟ ಕಿಚ್ಚ ಸುದೀಪ (Kiccha Sudeep) ಬಿಜೆಪಿ (BJP) ಸೇರುತ್ತಿದ್ದಾರೆ ಎನ್ನುವ ಸುದ್ದಿ ಹೊರಬಿದ್ದ ಬೆನ್ನಲ್ಲೇ ಅದರ ಬಗ್ಗೆ ಪ್ರತಿಕ್ರಿಯೆಯ ಸುರಿಮಳೆಯೇ ಆರಂಭವಾಗಿಬಿಟ್ಟಿದೆ. ಟ್ವಿಟರ್ ನಲ್ಲಿ, ಫೇಸ್ ಬುಕ್ ನಲ್ಲಿ ತಮ್ಮ ಪ್ರತಿಕ್ರೆಯೆಯನ್ನು ಬರೆದಿರುವ ಜನರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತ ಪಡಿಸಿದಂತಿದೆ.
ಕೆಲವರು ಕಿಚ್ಚ ಅವರನ್ನು ಅಭಿನಂದಿಸಿ, ಅಭಿವೃದ್ಧಿ ಮಾಡುತ್ತಿರುವ ಮೋದಿಯವರ ಪಕ್ಷ ಸೇರುತ್ತಿರುವುದು ಒಳ್ಳೆಯ ನಿರ್ಧಾರವೆಂದರೆ ಇನ್ನು ಕೆಲವರು ಬಿಜೆಪಿಗೆ ಸೇರಲಿಕ್ಕೆ ಏನು ಕಾರಣವಿದೆ? ಅಷ್ಟೊಂದು ಆರೋಪಗಳನ್ನು ಹೊತ್ತಿರುವ ಪಕ್ಷಕ್ಕೆ ನೀವು ಏಕೆ ಆಕರ್ಷಿತರಾದಿರಿ? ಎಂದು ಕೇಳಿದ್ದಾರೆ.
ಆದರೆ ಬಹುತೇಕ ಮಂದಿ ನೀವು ಚಲನಚಿತ್ರ ನಟರಾಗಿ ಪಕ್ಷಾತೀತವಾಗಿ ಅಭಿಮಾನಿಗಳನ್ನು ಹೊಂದಿದ್ದೀರಿ ನೀವು ಒಂದು ಪಕ್ಷದೊಂದಿಗೆ ಗುರುತಿಸಿಕೊಳ್ಳುವುದು ಸೂಕ್ತವಲ್ಲ ಎಂದು ಕಿವಿಮಾತು ಹೇಳಿದ್ದಾರೆ. ಕೆಲವರಂತು ಬಿಜೆಪಿ ಅಥವ ಯಾವುದೇ ರಾಜಕೀಯ ಪಕ್ಷ ಸೇರಿದರೂ ನಿಮ್ಮ ಸಿನೆಮಾ ಭವಿಷ್ಯ ಮುಗಿಯಿತು ಎಂದೂ ಬರೆದುಕೊಂಡಿದ್ದಾರೆ.
ಇದೆಲ್ಲದರ ಮಧ್ಯೆ ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿರುವ ಕಿಚ್ಚ ಸುದೀಪ ಒಂದು ರಾಜಕೀಯ ಪಕ್ಷ ಸೇರಿ ಸಾಧಿಸುವುದು ಏನಿದೆ? ಎನ್ನುವ ಪ್ರಶ್ನೆ ಬಹಳ ಜನರನ್ನು ಕಾಡಲಾರಂಭಿಸಿದೆ. ಈಗಾಗಲೇ ರಾಜಕಾರಣ ಮಾಡಲು ಹೋಗಿ ವರ್ಚಸ್ಸು ಕಳೆದುಕೊಂಡಿರುವ ನಟರ ಸಾಲು ಉದ್ದವಿರುವಾಗ ಸುದೀಪ ಅವರು ಆ ಸಾಲಿಗೆ ಸೇರಿಬಿಡುತ್ತಾರೆಯೇ ಎಂಬ ಆತಂಕವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ.
ಈ ಸುದ್ದಿ ಸುಳ್ಳು ಸುದ್ದಿ ಎಂದು ಸಾಬೀತಾಗಲಿ ಎಂದು ಬಹಳ ಮಂದಿ ಕಿಚ್ಚನ ಅಭಿಮಾನಿಗಳು ಹಾರೈಸಿದ್ದಾರೆ. ಆದರೆ ಈ ಸುದ್ದಿ ನಿಜವಾಗಿದ್ದರೆ ಏಪ್ರಿಲ್ ೮ ರಂದು ರಾಜ್ಯಕ್ಕೆ ಬರಲಿರುವ ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ ಅವರಿಂದಲೇ ಬಿಜೆಪಿ ಧ್ವಜ ಪಡೆದು ಕಿಚ್ಚ ಸುದೀಪ ಬಿಜೆಪಿ ನಾಯಕರಾಗುವ ಸಾಧ್ಯತೆ ಸ್ಪಷ್ಟವಾಗುತ್ತಿದೆ ಎಂದು ಬಿಜೆಪಿ ಬೆಂಬಲಿಗರು ಹೇಳುತ್ತಿದ್ದಾರೆ.
ಏನೇ ಆದರೂ ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ದೂರ ಉಳಿದಿರುವ ಈ ನಟ ಕೇಸರಿ ಶಾಲು ಹೊದ್ದುಕೊಂಡು ಕಮಲ ಮುಡಿದುಕೊಳ್ಳುವ ಸಮಯ ಸನ್ನಿಹಿತವಾಗಿಬಿಟ್ಟಿದೆಯೇ ಎಂದು ನೋಡಲು ಒಂದು ಚೂರು ಕಾಯಬೇಕಿದೆ.