ರಷ್ಯಾ ದೇಶ ಯುಕ್ರೇನ್ ದೇಶದ ಮೇಲೆ ದಾಳಿ ಮಾಡಿ ಸುಲಭವಾಗಿ ಜಯ ಪಡೆಯಬಹುದು ಎನ್ನುವ ಲೆಕ್ಕಾಚಾರದಲ್ಲಿತ್ತು. ಆದರೆ ರಷ್ಯಾದ ಅಧ್ಯಕ್ಷ ವ್ಲ್ಯಾಡಿಮೀರ್ ಪುಟಿನ್ ಗೆ ಯುಕ್ರೇನ್ ದೇಶದ ಸೈನಿಕರ ಮತ್ತು ನಾಗರಿಕರ ಬದ್ಧತೆ ಮತ್ತು ಹೋರಾಟದ ಛಲದ ಅರಿವಿರಲಿಲ್ಲಎಂಬುದು ಈಗ ಸ್ಪಷ್ಟವಾಗುತ್ತಿದೆ. ತನ್ನ ಸೇನಾ ಶಕ್ತಿ ಮತ್ತು ಧಮ್ಕಿಗಳಿಂದ ಯುಕ್ರೇನ್ ದೇಶವನ್ನು ಮಣಿಸಿಬಿಡಬಹುದು ಮತ್ತು ಆನಂತರ ಆ ದೇಶವನ್ನು ತನ್ನ ವಸಾಹತನ್ನಾಗಿ ಮಾಡಿಕೊಂಡು ಉಳಿದ ದೇಶಗಳ್ಯಾವುವೂ ತನ್ನ ದೇಶದ ತಂಟೆಗೆ ಬರದಂತೆ ಬೆದರಿಸಿ ಇಡಬಹುದೆಂದು ಪುಟಿನ್ ಲೆಕ್ಕಾಚಾರ ಮಾಡಿದ್ದರು. ಈ ದಾಳಿ ಅಥವ ಆಕ್ರಮಣ ಕೆಲವೇ ದಿವಸಗಳ ಕಾಲ ನಡೆದು ಸಣ್ಣ ದೇಶ ಯುಕ್ರೇನ್ ಬಹಳ ಬೇಗ ಸದೆಬಡಿಯಲ್ಪಡುತ್ತದೆ ಎಂದು ರಷ್ಯಾದ ಆರ್ಮಿ ಬೀಗುತ್ತಿತ್ತು. ಆದರೆ ಈಗ ಪುಟಿನ್ ಮತ್ತು ರಷ್ಯಾದ ಸೇನಾ ಪಡೆಗಳ ಊಹೆಗಳೆಲ್ಲ ತಲೆಕೆಳಗಾಗಿವೆ.
ಯುದ್ಧ ಆರಂಭವಾಗಿ ಎರಡೂವರೆ ತಿಂಗಳಾಗುತ್ತಾ ಬಂದಿದ್ದರೂ ಇನ್ನೂ ಯುಕ್ರೇನ್ ಮಣಿಯುವುದಿರಲಿ ಅದಕ್ಕೆ ಬದಲಾಗಿ ಆ ದೇಶ ಮತ್ತಷ್ಟು ಬಲಿಷ್ಠವಾಗುತ್ತಿರುವಂತೆ ಕಂಡುಬರುತ್ತಿದೆ. ಹಾಗೇ ಪಾಶ್ಚಾತ್ಯ ದೇಶಗಳ ಶಸ್ತ್ರಾಸ್ತ್ರಗಳ ಸಹಾಯದಿಂದ ಮತ್ತು ಹಣದ ಬೆಂಬಲದಿಂದ ಯುಕ್ರೇನ್ ವೀರಾವೇಶದಿಂದ ರಷ್ಯಾದ ವಿರುದ್ಧ ಕಾದಾಡುತ್ತಿದೆ. ಒಂದು ಅಂದಾಜಿನ ಪ್ರಕಾರ ರಷ್ಯಾದ ಸುಮಾರು 5000 ಸೈನಿಕರು ಯುಕ್ರೇನ್ ನಲ್ಲಿ ಕೊಲ್ಲಲ್ ಪಟ್ಟಿದ್ದಾರೆ. ಹಾಗೇ ರಷ್ಯಾದ 500 ಕ್ಕೂ ಹೆಚ್ಚು ಯುದ್ಧ ಟ್ಯಾಂಕ್ ಗಳು ಹತ್ತಾರು ಹೆಲಿಕಾಪ್ಟರ್ ಗಳು ಮತ್ತು ಅನೇಕ ಹಡಗುಗಳು ಧ್ವಂಸ ಗೊಂಡಿವೆ. ರಷ್ಯಾ ಅನುಭವಿಸುತ್ತಿರುವ ನಷ್ಟದ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿವೆ. ಯುಕ್ರೇನ್ ಮೇಲೆ ದಾಳಿ ನಡೆಯುತ್ತಿದ್ದರೂ ಆ ದೇಶದ ಸೇನೆ ಇನ್ನೂ ಸಮರ್ಥವಾಗಿರುವಂತೆಯೇ ಕಂಡುಬರುತ್ತಿದೆ.
ಯುಕ್ರೇನ್ ದೇಶದ ಸುಮಾರು 3000 ಯೋಧರು ಮತ್ತು ನೂರಾರು ನಾಗರಿಕರು ಇಷ್ಟರವರೆಗೆ ಸಾವನ್ನಪ್ಪಿರುವುದಾಗಿ ಸುದ್ದಿ ಬಂದಿದೆ. ಆದರೆ ಈ ಯುದ್ಧ ಹೀಗೇ ಮುಂದುವರೆದರೆ ರಷ್ಯಾಕ್ಕೆ ಈ ಯುದ್ಧದ ನಷ್ಟವನ್ನು ಭರಿಸಿಕೊಳ್ಳಲು ಸಾಧ್ಯವಾಗುತ್ತದಾ ಎಂಬ ಪ್ರಶ್ನೆ ಈಗ ಅಂತಾರಾಷ್ಟ್ರೀಯ ವಿಶ್ಲೇಕರಕರನ್ನು ಕಾಡುತ್ತಿದೆ. ರಷ್ಯಾಕ್ಕೆ ಯುಕ್ರೇನ್ ನಲ್ಲಿ ಸೋಲಾಗುವುದು ಗ್ಯಾರಂಟಿಯೆಂದು ಬಹುತೇಕ ವಾಗಿ ಕಂಡುಬರುತ್ತಿದೆ. ಈ ಯುದ್ದದಿಂದ ರಷ್ಯಾಕ್ಕೆ ಆರ್ಥಿಕ ನಷ್ಟ ಎಂದೂ ಕಂಡರಿಯದಷ್ಟು ಆಗುತ್ತಿದ್ದು. ಆ ನಷ್ಟದಿಂದ ಹೊರಬರಲು ರಷ್ಯಾಕ್ಕೆ ಸುಮಾರು ಒಂದು ದಶಕವೇ ಬೇಕಾಗಬಹುದು ಎಂದೂ ಹೇಳಲಾಗುತ್ತಿದೆ. ಸದರಿ ಅಂಕಿ ಅಂಶಗಳ ಪ್ರಕಾರ ಯುಕ್ರೇನ್ ನಲ್ಲಿ ಯುದ್ಧ ಮುಂದುವರೆಸಲು ರಷ್ಯಾ ಒಂದು ದಿನಕ್ಕೆ ಸುಮಾರು 7000 ಕೋಟಿ ರೂಪಾಯಿಯಷ್ಟು ಹಣ ಖರ್ಚು ಮಾಡುತ್ತಿದೆ ಎಂದು ಅಂದಾಜಿಸಲಾಗಿದೆ. ಅಷ್ಟು ಮಾಡಿಯೂ ಕೊನೆಗೆ ಸೋಲೇ ಕಟ್ಟಿಟ್ಟ ಬುತ್ತಿಯಾದರೆ ರಷ್ಯಾ ಯಾವ ಹತಾಶ ಸ್ಥಿತಿಯನ್ನು ತಲುಪಬಹುದು ಎಂದು ಅಂತಾರಾಷ್ಟ್ರೀಯ ರಾಜಕಾರಣದ ವಿಶ್ಲೇಷಕರು ತಲೆಕೆಡಿಸಿಕೊಂಡಿದ್ದಾರೆ.
—