ಬೆಂಗಳೂರು, ಸೆ.2 – ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸರ್ಕಾರದ ವಿವಿಧ ಕಾಮಗಾರಿಗಳ ಟೆಂಡರ್ (Tender) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಬೆನ್ನಲ್ಲೇ ಮಾಜಿ ಮಂತ್ರಿಯೊಬ್ಬರ ಗನ್ ಮ್ಯಾನ್ ವಿರುದ್ಧ ಟೆಂಡರ್ ಅಕ್ರಮ ಆರೋಪದ ಪ್ರಕರಣ ದಾಖಲಾಗಿದೆ.
ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಗನ್ಮ್ಯಾನ್ ರಾಘವೇಂದ್ರ ಮಾಯಕೊಂಡ ಸರ್ಕಾರಿ ಕಾಮಗಾರಿಯ 30 ಕೋಟಿ ವೆಚ್ಚದ ಟೆಂಡರ್ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚನೆ ನಡೆಸಿರುವ ಆರೋಪ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಯಕೊಂಡ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಾಮಗಾರಿಗಳ ಟೆಂಡರ್ ಕೊಡಿಸುತ್ತೇನೆ ಎಂದು ನಂಬಿಸಿ 30 ಕೋಟಿ ವೆಚ್ಚದ ಟೆಂಡರ್ಗೆ ಶೇ 12ರಷ್ಟು ಕಮಿಷನ್ ಕೇಳಿದ್ದ ಗನ್ ಮ್ಯಾನ್ ಮುಂಗಡವಾಗಿ 10 ಲಕ್ಷ ರೂ. ಪಡೆದುಕೊಂಡು ವಂಚಿಸಿದ್ದಾನೆ ಎಂದು ದೂರು ದಾಖಲಿಸಲಾಗಿದೆ.
ಹಾಲಪ್ಪ ಆಚಾರ್ ಗನ್ಮ್ಯಾನ್ ರಾಘವೇಂದ್ರ, ಮಾಯಕೊಂಡ ಗ್ರಾಮ ಪಂಚಾಯತ್ ಟೆಂಡರ್ ಕೊಡಿಸುತ್ತೇನೆ ಎಂದು ಹೇಳಿ ಗುತ್ತಿಗೆದಾರ ಹೆಚ್.ರಾಜು ನಾಯ್ಕ್ ಅವರಿಗೆ ನಂಬಿಸಿದ್ದಾರೆ.
ಅಲ್ಲದೆ, 30 ಕೋಟಿ ವೆಚ್ಚದ ಟೆಂಡರ್ಗೆ ಶೇ12 ರಷ್ಟು ಪರ್ಸೆಂಟ್ ಕಮಿಷನ್ ಕೇಳಿದ್ದ ರಾಘವೇಂದ್ರ,ಈ ಸಂಬಂಧ ರಾಜು ನಾಯ್ಕ್ ಅವರಿಂದ ಮುಂಗಡವಾಗಿ 10 ಲಕ್ಷ ರೂ ಪಡೆದುಕೊಂಡಿದ್ದರು.
ಬಳಿಕ ಟೆಂಡರ್ ಕೊಡಿಸದೆ ಸತಾಯಿಸುತ್ತಿದ್ದ ಗನ್ಮ್ಯಾನ್ ರಾಘವೇಂದ್ರ, ಹಣ ವಾಪಸ್ ಕೇಳಿದ್ದಕ್ಕೆ ಕೇವಲ 4 ಲಕ್ಷ ನೀಡಿ ಇನ್ನುಳಿದ 6 ಲಕ್ಷ ಹಣ ನೀಡದೇ ವಂಚಿಸಿದ್ದಾರೆ ಎಂದು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.