ಬೆಂಗಳೂರು, ಸೆ.5: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದು, ಪಕ್ಷದ ಕಾರ್ಯಕರ್ತರಿಗೆ ಒಂದಲ್ಲಾ ಒಂದು ಹುದ್ದೆ ಸಿಗಲಿದೆ ನಿಗಮ ಮಂಡಳಿಗಳಲ್ಲಿ ಶಾಸಕರು, ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಮಾತ್ರ ಮಂತ್ರಿಯಾಗಿ, ಶಾಸಕರುಗಳು ಅಧಿಕಾರ ಸಿಗದಿದ್ದರೆ ತಪ್ಪಲ್ಲವೇ? ಎಲ್ಲರಿಗೂ ಅವಕಾಶ ಸಿಕ್ಕೆ ಸಿಗುತ್ತದೆ. ನಿಗಮ ಮಂಡಳಿಗಳಲ್ಲಿ ಶಾಸಕರು ಹಾಗೂ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ಹೇಳಿದರು ನಿಗಮ ಮಂಡಳಿಗೆ ನೇಮಕ ಮಾಡಿ ಎಂದು ಎಲ್ಲಾ ಶಾಸಕರು ಕೇಳುತ್ತಿಲ್ಲ ಕೇವಲ, 20 ರಿಂದ 25 ಜನರು ಕೇಳುತ್ತಿದ್ದಾರೆ. ಅದರಲ್ಲಿ 15 ಜನರಿಗೆ ಅವಕಾಶ ನೀಡುತ್ತೇವೆ, ಮಿಕ್ಕ ಸ್ಥಾನಗಳನ್ನು ಕಾರ್ಯಕರ್ತರಿಗೆ ನೀಡಲಾಗುವುದು. ಎಲ್ಲರಿಗೂ ತಲಾ ಎರಡುವರೆ ವರ್ಷ ಅವಕಾಶ ನೀಡುತ್ತೇವೆ ಎಂದರು.
ಸೆಪ್ಟೆಂಬರ್ 7 ಕ್ಕೆ ಭಾರತ್ ಜೋಡೊ ಯಾತ್ರೆಗೆ 1 ವರ್ಷ ತುಂಬುತ್ತದೆ. ಇದೇ ನೆನಪಿಗೆ ಪಾದಯಾತ್ರೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಬೇಕು ಎನ್ನುವ ಯೋಚನೆ ಇತ್ತು.ಆದರೆ, ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕೆ ರಾಮನಗರದಲ್ಲಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಅಂದು ಮುಖ್ಯಮಂತ್ರಿಗಳು ನಮ್ಮ ಜೊತೆ ಹೆಜ್ಜೆ ಹಾಕಲಿದ್ದಾರೆ, ಅದೇ ದಿನ ಸಚಿವ ಸಂಪುಟ ಸಭೆ ಇರುವ ಕಾರಣ ಇತರೇ ಮಂತ್ರಿಗಳಿಗೆ ಸೆಪ್ಟೆಂಬರ್ 8 ರಂದು ಮಾಡಬಹುದು ಎಂದು ಸೂಚನೆ ನೀಡಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದು ಗಂಟೆಗಳ ಕಾಲ ಸಂಜೆ 5 ರಿಂದ 6 ಗಂಟೆಯ ತನಕ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪ್ರತಿ ವರ್ಷ ಅನೇಕ ಕಾರ್ಯಗಳ ಒತ್ತಡದಿಂದ ನಮ್ಮ ಕನಕಪುರ ತಾಲ್ಲೂಕಿನ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಲು ಆಗಿರಲಿಲ್ಲ, ಈ ವರ್ಷ ಅನೇಕ ಕೆಲಸಗಳ ಒತ್ತಡ ಇದ್ದರು ಬಂದಿದ್ದೇನೆ.
ನಮ್ಮ ರಾಜ್ಯದಲ್ಲಿ 40,000 ಶಿಕ್ಷಕರ ಕೊರತೆ ಇದೆ. ನಮ್ಮ ಕಾಂಗ್ರೆಸ್ ಪಕ್ಷದ ಪ್ರಮುಖ ಆದ್ಯತೆ ಶಿಕ್ಷಣ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ವಿವರಿಸಿದರು.
ಗ್ರಾಮೀಣ ಪ್ರದೇಶದ ಶಾಲೆಗಳು ಸೇರಿದಂತೆ ಎಲ್ಲಾ ಭಾಗದ ಮಕ್ಕಳಿಗೂ ಗ್ಲೋಬಲ್ ಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ಸಿಎಸ್ಆರ್ ಹಣದ ಸದುಪಯೋಗಕ್ಕೆ ಯೋಜನೆ ರೂಪಿಸುತ್ತಿದ್ದೇವೆ. ಪ್ರಮುಖ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲೆಗಳನ್ನು ದತ್ತು ತೆಗೆದುಕೊಳ್ಳುವಂತೆ ಪ್ರೇರೆಪಿಸಲಾಗುವುದು ಎಂದು ಹೇಳಿದರು