ಬೆಂಗಳೂರು, ಅ.9 – ನೇಪಾಳದಿಂದ ವಿಮಾನದಲ್ಲಿ ಬಂದು ನಗರದ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿ 10.3 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆವಲಹಳ್ಳಿಯ ಕಿತ್ತಗಾನಹಳ್ಳಿ ಬಳಿ ಶೆಡ್ ಬಾಡಿಗೆಗೆ ಪಡೆದು ಉಳಿದುಕೊಳ್ಳುತ್ತಿದ್ದ ನೇಪಾಳ ಮೂಲದ ಮನೋಜ್ ವಿಶ್ವಕರ್ಮ (34) ಹಾಗೂ ರೋರ್ಕಾ ವಿಶ್ವಕರ್ಮ(33) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಉತ್ತರ ವಿಭಾಗದ ಡಿಜಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಬಂಧಿತರಿಂದ 10.3 ಲಕ್ಷ ಮೌಲ್ಯದ 124.5 ಗ್ರಾಂ ಚಿನ್ನಾಭರಣ, 3.192 ಕೆ.ಜಿ. ಬೆಳ್ಳಿ ವಸ್ತುಗಳು, ನಗದು ಹಣ 2,020 ಹಾಗೂ ಕೃತ್ಯಕ್ಕೆ ಬಳಸಿದ್ದ ಆಕ್ಟಿವಾ ಸ್ಕೂಟರ್, ಕಬ್ಬಿಣದ ರಾಡ್, ಸ್ಕ್ರೂ ಡ್ರೈವರ್ ಜಪ್ತಿ ಮಾಡಲಾಗಿದೆ.
ಸೋಲದೇವನಹಳ್ಳಿಯ ಹೆಸರಘಟ್ಟ, ದಾಸೇನಹಳ್ಳಿ ಕ್ರಾಸ್ ಬಳಿ ಮನೆಗೆ ಬೀಗ ಹಾಕಿಕೊಂಡು ಕಳೆದ ಆ. 16 ರಂದು ಹೋಗಿ ಸ್ವಂತ ಊರಿಗೆ ಹೋಗಿ, ವಾಪಸ್ಸು ಬಂದು ನೋಡಲಾಗಿ, ತಮ್ಮ ಮನೆಯ ಡೋರ್‍ಲಾಕ್ ಬೀಗ ಮುರಿದು ಯಾರೋ ಕಳ್ಳರು ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸೋಲದೇವನಹಳ್ಳಿ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಸೋಲದೇವನಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಹರಿಯಪ್ಪ.ಹೆಚ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಖಚಿತವಾದ ಮಾಹಿತಿಯನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಮನೋಜ್ ವಿಶ್ವಕರ್ಮ ಕೆಲವು ವರ್ಷಗಳ ಹಿಂದೆ ಮುಂಬೈಗೆ ಬಂದು ಹೋಟೆಲ್ ಕೆಲಸ ಮಾಡಿ ಕೊಂಡಿದ್ದು, ಮುಂಬೈನಲ್ಲಿ 5 ಕನ್ನಾ ಕಳವು ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುತ್ತಾನೆ.
ಆತ ಎರಡನೇ ಆರೋಪಿ ರೋರ್ಕಾ ನನ್ನು ಸಂಪರ್ಕಿಸಿ, ಆತನ ಸಹಾಯದಿಂದ ಬೆಂಗಳೂರಿಗೆ ಬಂದು ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದು, 2023 ನೇ ಸಾಲಿನಲ್ಲಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕನ್ನಾ ಕಳವು ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುತ್ತಾನೆ.
ಆರೋಪಿ ರೊರ್ಕಾ 4-5 ವರ್ಷಗಳ ಹಿಂದೆ ನಗರಕ್ಕೆ ಬಂದು ಸೆಕ್ಯೂರಿಟಿ ಕೆಲಸ ಮಾಡಿಕೊಂಡಿರುತ್ತಾನೆ. ಇಬ್ಬರು ಆರೋಪಿಗಳು ಸುಲಭವಾಗಿ ಹಣ ಸಂಪಾದನೆ ಮಾಡಿ, ದುಶ್ಚಟಗಳಿಗೆ ಹಣ ಹೊಂದಿಸಲು ಕನ್ನಗಳವು ಕೃತ್ಯವೆಸಗಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.
ಆರೋಪಿಗಳ ಬಂಧನದಿಂದ ಪೀಣ್ಯ-1 ಪ್ರಕರಣ, ಸೋಲದೇವನಹಳ್ಳಿಯ 5 ಹಗಲು ಮತ್ತು ರಾತ್ರಿ ಕನ್ನಾ ಕಳವು ಸೇರಿ 6 ಪ್ರಕರಣಗಳು ಪತ್ತೆಯಾಗಿವೆ ಎಂದು ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.