ಬೆಂಗಳೂರು,ಅ.28- ಕಳ್ಳಕಾಕರು,ಅಪರಾಧ ಕೃತ್ಯಗಳು,ಕಾನೂನು ಬಾಹಿರ ಕೃತ್ಯ ನಡೆಸುವವರಿಗೆ ಸಿಂಹಸ್ವಪ್ನವಾಗಿ ಜನ ಸಾಮಾನ್ಯರ ರಕ್ಷಣೆಗೆ ನಿಲ್ಲಬೇಕಿದ್ದ ಪೊಲೀಸರೇ ರೌಡಿಗಳ ರೀತಿ ಲಾಂಗ್ ಬೀಸಿ ಅಟ್ಟಹಾಸ ಮೆರೆದಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.
ಮಾಗಡಿ ರಸ್ತೆ ಪೊಲೀಸ್ ಠಾಣೆಯ ಎಎಸ್‌ಐ ಶ್ರೀನಿವಾಸ್ ಅವರು ದಯಾನಂದ್, ಶಶಿಧರ್ ಎಂಬ ಯುವಕರ ಮೇಲೆ ರೌಡಿಗಳ ರೀತಿ ಲಾಂಗ್ನಿಂದ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ,ಎಎಸ್ ಐ ಶ್ರೀನಿವಾಸ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ಕೈಯಲ್ಲಿ ಮಚ್ಚು ಮತ್ತೊಂದು ಕೈಯಲ್ಲಿ ಲಾಠಿ ಹಿಡಿದು, ಯಾವ ರೌಡಿಗೂ ಕಮ್ಮಿ ಇಲ್ಲದಂತೆ ಎಎಸ್ ಐ ಶ್ರೀನಿವಾಸ್ ಅವರು ದಯಾನಂದ್, ಶಶಿಧರ್ ಮೇಲೆ ಮಚ್ಚು ಬೀಸಿ ಹಲ್ಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲೂ ದೃಶ್ಯಗಳು ಹರಿದಾಡಿದ್ದು,ಪೊಲೀಸ್ ಅಧಿಕಾರಿ ರೌಡಿಯಂತೆ ವರ್ತಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧಗಳು ವ್ಯಕ್ತವಾಗಿದೆ.
ಎಎಸ್‌ಐ ಶ್ರೀನಿವಾಸ್ ಮಚ್ಚು ಝಳಪಿಸಲು ಕಾರಣವಾಗಿದ್ದು ಅವರ ಅಣ್ಣನ ಮಗ ಆನಂದ್ ಈತ ಅಕ್ಟೋಬರ್ 27ರ ರಾತ್ರಿ ವಿಜಯನಗರದ ತೇಜಸ್ವಿನಿ ಬಾರ್‌ನಲ್ಲಿ ಮದ್ಯ ಸೇವನೆಗೆ ಹೋಗಿದ್ದ. ಅದೇ ಬಾರ್‌ಗೆ ಬಿಯರ್ ಕುಡಿಯಲು ದಯಾನಂದ್ ಮತ್ತು ಶಶಿಧರ್ ಎಂಬುವವರು ಹೋಗಿದ್ದರು.
ಕ್ಷುಲ್ಲಕ ಕಾರಣಕ್ಕೆ ಆನಂದ್ ಮತ್ತು ದಯಾನಂದ್, ಶಶಿಧರ್ ಮೂವರ ನಡುವೆ ಮಾತಿಗೆ ಮಾತು ಬೆಳೆದು ಸಣ್ಣ ಗಲಾಟೆ ಆಗಿದೆ. ಈ ವೇಳೆ ಆನಂದ್ ನಿಮ್ಮಿಬ್ಬರದ್ದು ಯಾವ ಏರಿಯಾ ಎಂದು ಕೇಳಿದ್ದಾನೆ. ಈ ವೇಳೆ ದಯಾನಂದ್ ನಮ್ಮದು ಇದೇ ಏರಿಯಾ, ನಿಂದು ಯಾವ ಏರಿಯಾ ಎಂದು ಕೇಳಿದ್ದಾನೆ. ನಂದು ಇದೇ ಏರಿಯಾನೇ ಬೇಕಾದರೆ ಬಾ ಮನೆ ತೋರಿಸುತ್ತೀನಿ ಎಂದು ಆನಂದ್ ಹೇಳಿದ್ದಾನೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಅವರಿಬ್ಬರನ್ನು ಆನಂದ್ ತನ್ನ ಆಟೋದಲ್ಲೇ ಕರೆದುಕೊಂಡು ನೇರವಾಗಿ ಆರ್‌ಪಿಸಿ ಲೇಔಟ್‌ನಲ್ಲಿರುವ ಚಿಕ್ಕಪ್ಪ ಶ್ರೀನಿವಾಸ್ ಮನೆ ಬಳಿ ಕರೆತಂದಿದ್ದಾನೆ.
ಆನಂದ್ ಡ್ರಾಮ ಶುರು:
ಇಲ್ಲಿ ಆನಂದ್‌ನ ಡ್ರಾಮಾ ಶುರುವಾಗಿದೆ. ಆಟೋದಿಂದ ಇಳಿದ ಆನಂದ್ ಜೋರಾಗಿ ಕೂಗಾಡಲು ಶುರು ಮಾಡಿದ್ದಾನೆ. ಇವರಿಬ್ಬರು ಕಳ್ಳರು ಚಿಕ್ಕಪ್ಪ ಬೇಗ ಬನ್ನಿ ಎಂದು ಕೂಗಿಕೊಂಡಿದ್ದಾನೆ. ತಕ್ಷಣ ಎಎಸ್ ಐ ಶ್ರೀನಿವಾಸ್ ಒಂದು ಕೈಯಲ್ಲಿ ಮಚ್ಚು, ಮತ್ತೊಂದು ಕೈಯಲ್ಲಿ ಲಾಠಿ ಹಿಡಿದು ಓಡಿ ಬಂದಿದ್ದಾರೆ.
ಇತ್ತ ಆನಂದ್ ಕೂಗಾಟ ಕಂಡ ಇಬ್ಬರೂ ಸುಮ್ಮನೆ ನಡೆದುಕೊಂಡು ಹೋಗಲಾರಂಭಿಸಿದರು.ಆಗ ಅವರ ಹಿಂದೆ ಓಡಿದ ಚಿಕ್ಕಪ್ಪ ಮತ್ತು ಮಗ ದಯಾನಂದ್, ಶಶಿಧರ್‌ನನ್ನು ಹಿಡಿದುಕೊಂಡಿದ್ದಾರೆ. ಬಳಿಕ ಅವರಿಗೆ ಮಾತನಾಡಲು ಬಿಡದೆ ಏಕಾಏಕಿ ಇಬ್ಬರ ಮೇಲೆ ಮನಬಂದಂತೆ ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದ ದಯಾನಂದ್ ಮತ್ತು ಶಶಿಧರ್ ಕೆಳಗೆ ಬಿದ್ದಿದ್ದಾರೆ. ಬಿದ್ದವರನ್ನು ಲಾಠಿಯಿಂದ ಶ್ರೀನಿವಾಸ್ ಥಳಿಸಿದ್ದಾರೆ.
ಅಪ್ಪ ಲಾಠಿಯಲ್ಲಿ ಹೊಡೆಯುತ್ತಿದ್ದರೆ, ಮಗ ಮಚ್ಚು ಹಿಡಿದುಕೊಂಡಿದ್ದ. ಅಪ್ಪನೊಂದಿಗೆ ಸೇರಿ ಮಗನೂ ಯುವಕರ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಎಲ್ಲ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯುವಕರು ಆಸ್ಪತ್ರೆಗೆ:
ಸ್ಥಳೀಯರ ಮಾಹಿತಿ ಮೇರೆಗೆ ವಿಜಯನಗರ ಹೊಯ್ಸಳ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಇಬ್ಬರು ಯುವಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಶ್ರೀನಿವಾಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಶ್ರೀನಿವಾಸ್ ಪರಾರಿಯಾಗಿದ್ದಾರೆ.