ಬೆಂಗಳೂರು, ನ.8- ಲೋಕಸಭಾ Election ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಪರೇಷನ್ ಹಸ್ತ ಕಾರ್ಯಾಚರಣೆ ನಡೆಯುತ್ತಿದೆ. ಬಿಜೆಪಿ ಜೊತೆಗಿನ ಮೈತ್ರಿ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಕೆಲವು ಶಾಸಕರು ಪಕ್ಷ ತೊರೆಯಲಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಜೆಡಿಎಸ್ ನ ಎಲ್ಲಾ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡಿದರು.
ಪಕ್ಷದ ಅಧ್ಯಕ್ಷ ಕುಮಾರಸ್ವಾಮಿ (Kumaraswamy) ನೇತೃತ್ವದಲ್ಲಿ ಎಲ್ಲರೂ ಹಾಸನಕ್ಕೆ ತೆರಳಿ,ಹಾಸನಾಂಬೆಯ ದರ್ಶನ ಪಡೆದರು. ಆದರೆ, ಈ ಶಕ್ತಿ ಪ್ರದರ್ಶನದ ವಿದ್ಯಮಾನದಿಂದ ಗುರುಮಿಟ್ಕಲ್ ಕ್ಷೇತ್ರದ ಶಾಸಕ ಶರಣಗೌಡ ಕುಂದಕೂರು ದೂರ ಉಳಿದರು.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ಆಮಿಷಗಳಿಗೆ ಒಳಗಾಗಿ ಜೆಡಿಎಸ್ ಬಿಟ್ಟು ಹೋಗುವ ಶಾಸಕರು ಯಾರೂ ಇಲ್ಲ ನಮ್ಮ ಪಕ್ಷದ ಶಾಸಕರ ಬಗ್ಗೆ ಅನುಮಾನ ಪಡುವ ಪರಿಸ್ಥಿತಿಯಿಲ್ಲ. ಎಲ್ಲರೂ ಒಂದು ಕುಟುಂಬದ ಸದಸ್ಯರಂತೆ ಇದ್ದೇವೆ. ಪಕ್ಷದಲ್ಲಿ ಅಸಮಾಧಾನಗೊಂಡು ಬಿಟ್ಟು ಹೋಗುವವರು ಯಾರೂ ಇಲ್ಲ. ಆದರೂ ಕಾಂಗ್ರೆಸ್‍ನವರು ವಿನಾಕಾರಣ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆಂದು ಆರೋಪಿಸಿದರು.
ಪದೇಪದೇ ಕಾಂಗ್ರೆಸ್‍ನವರು ಇಂತಹ ಗೊಂದಲದ ಸುದ್ದಿಯನ್ನು ಹರಡುತ್ತಿದ್ದಾರೆ ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ . ಎಲ್ಲರೂ ಒಗ್ಗಟ್ಟಾಗಿದ್ದೇವೆ. ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದಲೇ ಸಭೆ ನಡೆಸಿ ಶಾಸಕರ ಅಭಿಪ್ರಾಯಗಳನ್ನು ಪಡೆಯಲಾಗಿದೆ ಎಂದರು.
ರಾಜ್ಯಕ್ಕಾಗಿರುವ ಅನ್ಯಾಯ ಸರಿ ಪಡಿಸಲು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ರಾಜ್ಯದ ಹಿತಕ್ಕಾಗಿ ಹೊಂದಾಣಿಕೆ ಹೊರತು ಬೇರೆನೂ ಇಲ್ಲ. ಈ ಹೊಂದಾಣಿಕೆ ಅಧಿಕಾರ, ಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ ಎಂದು ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಎಷ್ಟು ಸೀಟು ಗಳಿಸಲಿದೆ ಎಂಬುದು ಮುಖ್ಯವಲ್ಲ. ಜೆಡಿಎಸ್, ಬಿಜೆಪಿ ಸೇರಿ ರಾಜ್ಯದ 28 ಲೋಕಸಭಾ ಕ್ಷೇತ್ರವನ್ನು ಗೆಲ್ಲುವುದೇ ನಮ್ಮ ಮೊದಲ ಗುರಿಯಾಗಿದೆ.ಮುಖ್ಯಮಂತ್ರಿ ನಿವಾಸದಲ್ಲಿ ಉಪಹಾರ ಸಭೆ ನಡೆಸಿ ಕೆಲವು ಮಂತ್ರಿಗಳಿಗೆ ಪಕ್ಷಕ್ಕೆ ಬರುವವರನ್ನು ಕರೆ ಕರಲು ಟಾಸ್ಕ್ ಕೊಟ್ಟಿದ್ದಾರೆ. ಅಲ್ಲದೇ ಉಪಮುಖ್ಯಮಂತ್ರಿಗಳು ಪದೇ ಪದೇ 45 ಮಂದಿ ಬಿಜೆಪಿ, ಜೆಡಿಎಸ್ ಪಕ್ಷದ ಶಾಸಕರು ಕಾಂಗ್ರೆಸ್ ಸೇರುತ್ತಾರೆಂದು ಹೇಳುತ್ತಿದ್ದಾರೆ ಇದನ್ನು ತಡೆಯಲು ಯಾರೂ ಕಸರತ್ತು ಮಾಡುತ್ತಿದ್ದಾರೆಂದು ಪ್ರಶ್ನಿಸಿದರು.
ನಾಡಿನ ಜನ 136 ಶಾಸಕರನ್ನು ಆಯ್ಕೆ ಮಾಡಿ ನಿಮಗೆ ಕೊಟ್ಟಿದ್ದರೂ ಏಕೆ ಆಪರೇಷನ್ ಹಸ್ತ ಮಾಡುತ್ತೀರೆಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನು ಪ್ರಶ್ನಿಸಿದರು. ಈ ಸರ್ಕಾರ 5 ವರ್ಷ ಇದ್ದರೆ 10 ಲಕ್ಷ ಕೋಟಿ ಸಾಲ ಮಾಡುತ್ತೀರಿ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತಾಗಿದೆ ಗ್ಯಾರಂಟಿ ಯೋಜನೆಗಳು.
ಬರವೀಕ್ಷಣೆ ನೆಪದಲ್ಲಿ ಎಲ್ಲೆಲ್ಲಿ ಸಮರ್ಥ ನಾಯಕರು ಇರುತ್ತಾರೋ, ಅವರನ್ನು ಹುಡುಕಿಕೊಂಡು ಕರೆದುಕೊಂಡು ಬನ್ನಿ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿ.ಟಿ. ದೇವೇಗೌಡರು ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಸೇರಿದಂತೆ ಪಕ್ಷದ ಶಾಸಕರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.