ಬೆಂಗಳೂರು, ನ.22 – ಜಾತಿ ಜನಗಣತಿ ವರದಿ (Caste Census Karnataka) ಸ್ವೀಕಾರ ವಿಚಾರ ರಾಜ್ಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಸ್ವೀಕರಿಸುವುದಾಗಿ ಹೇಳಿದರೆ, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಮಂತ್ರಿ, ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಕೂಡಾ ವರದಿ ಸ್ವೀಕರಿಸದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯವರದಿ ಕೊಡುವ ಮುನ್ನವೇ ಏಕೆ ವಿರೋಧಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಜಾತಿ ಜನಗಣತಿ ವರದಿ ಇನ್ನೂ ನಮ್ಮ ಕೈ ಸೇರಿಲ್ಲ. ಡಿಸೆಂಬರ್ ನಲ್ಲಿ ವರದಿ ಸಲ್ಲಿಸುವ ಸಾಧ್ಯತೆ ಇದೆ.
ವರದಿ ಬಂದ ನಂತರ ಅವರ ಸಂಶಯಗಳ ನಿವಾರಣೆಯಾಗಲಿದೆಯೋ ಇಲ್ಲವೋ ನೋಡೋಣ ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲ ಎಂದು ಹೇಳಿದರು.
ಮೂಲಪ್ರತಿ ಕಾಣೆಯಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಬಗ್ಗೆ ನನಗೆ ತಿಳಿದಿಲ್ಲ ಎಂದರು. ನನ್ನನ್ನು ಭೇಟಿಯಾಗಿ ವರದಿ ಸಲ್ಲಿಸುತ್ತಾರೆ ಎಂದು ತಿಳಿಸಿದರು. ಅಲ್ಲಿಯವರೆಗೆ ಅವಧಿ ವಿಸ್ತರಣೆ ಮಾಡಿ ಎಂದು ಮನವಿ ಮಾಡಿದ್ದರು ಅದರಂತೆ ಅವಧಿ ವಿಸ್ತರಣೆಯಾಗಿದೆ ಎಂದರು.
ಶಿವಕುಮಾರ್ ನಿಲುವು:
ಜಾತಿ ಗಣತಿಯ ಕಾಂತರಾಜು ವರದಿಗೆ ಒಕ್ಕಲಿಗ ಮಂತ್ರಿ ಹಾಗೂ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಜಾತಿಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು. ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಆದರೆ ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸಿಗಬೇಕು, ಎಂದು ಅನೇಕ ಸಮುದಾಯಗಳು ಆಗ್ರಹ ಮಾಡಿವೆ. ಪರಿಶಿಷ್ಟರು, ಪಂಚಮಸಾಲಿ, ವೀರಶೈವರು, ಒಕ್ಕಲಿಗರು ಸೇರಿದಂತೆ ಹಲವರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ಪಕ್ಷಬೇಧ ಮರೆತು ಹೋರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೆಲ ಸಮುದಾಯ ಹಾಗೂ ಅದರ ನಾಯಕರು ಜಾತಿ ಗಣತಿ ಸಮೀಕ್ಷೆ ವೇಳೆ ನಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಕೇಳುತ್ತಿವೆ ಎಂದರು
ನೀವು ಕೂಡ ಪತ್ರಕ್ಕೆ ಸಹಿ ಹಾಕಿ ಮುಖ್ಯಮಂತ್ರಿಗಳಿಗೆ ರವಾನಿಸಿದ್ದೀರಾ ಎಂದು ಕೇಳಿದ ಪ್ರಶ್ನೆಗೆ, “ನಾನು ಸಹಿ ಮಾಡಬಾರದೇ? ಎಷ್ಟು ಜನ ಮಂತ್ರಿಗಳು ಈ ವಿಚಾರವಾಗಿ ಸಭೆ ಮಾಡಿಲ್ಲ? ಅದೇ ರೀತಿ ನಾನು ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಸಮಾಜ, ಅದರ ಗೌರವ, ಅಭಿಮಾನ ಉಳಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದೇನೆ. ಇದು ಎಲ್ಲಾ ನಾಯಕರಲ್ಲೂ ಇರುತ್ತದೆ” ಎಂದು ತಿಳಿಸಿದರು.
ಸರ್ಕಾರದ ಮೋಸ:
ಈ ನಡುವೆ ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಮಂತ್ರಿ ಹಾಗೂ ಬಿಜೆಪಿ ಮುಖಂಡ ಸುನೀಲ್‍ಕುಮಾರ್ ಆರ್ಥಿಕ ಸಮೀಕ್ಷೆ, ಜಾತಿ ಗಣತಿ ನೆಪದಲ್ಲಿ ಹಿಂದುಳಿದ ವರ್ಗಗಳಿಗೆ ಮೋಸ ಮಾಡುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ವರದಿ 10 ವರ್ಷಗಳ ಹಿಂದೆ ಸಿದ್ದಗೊಂಡಿದೆ. ಇದಕ್ಕೆ ಕಾಂಗ್ರೆಸ್ ನಾಯಕರು ರಾಜ್ಯ ಸರಕಾರದ ಸಚಿವರೇ ವಿರೋಧ ಸೂಚಿಸುತ್ತಿರುವುದು, ಸಾರ್ವಜನಿಕವಾಗಿ ಅನುಮಾನಗಳಿಗೆ ಕಾರಣವಾಗಿದೆ ಈ ಮೂಲಕ ಹಿಂದುಳಿದ ವರ್ಗಗಳನ್ನು ಕತ್ತಲಲ್ಲಿ ಇಡುವ ಪ್ರಯತ್ನವನ್ನೂ ಸರಕಾರ ಮಾಡುತ್ತಿದೆ ಎಂದು ಟೀಕಿಸಿದರು.
ಒಂದೆಡೆ ವರದಿ ಸರಿಯಿಲ್ಲ ಎಂದು ಡಿಸಿಎಂ ಹೇಳುತ್ತಾರೆ. ವರದಿ ಸ್ವೀಕಾರಕ್ಕೆ ಸಿದ್ಧ ಎಂದು ಸಿಎಂ ಹೇಳುತ್ತಾರೆ. ವರದಿ ಕಳೆದುಹೋಗಿದೆ ಎಂದು ಆಯೋಗದ ಅಧ್ಯಕ್ಷರು ಹೇಳುವುದಾದರೆ ಯಾವುದನ್ನು ನಂಬಬೇಕು ಎಂದು ಕೇಳಿದರು. ರದ ನಿಲುವು ಸ್ಪಷ್ಟವಾಗಲಿ. ಈ ಸರಕಾರದಲ್ಲಿ ಮುಖ್ಯಮಂತ್ರಿಗಳು ಒಂದು ನಿಲುವು ತಳೆದರೆ, ಉಪ ಮುಖ್ಯಮಂತ್ರಿಗಳು ಇನ್ನೊಂದು ನಿಲುವು ತಿಳಿಸುತ್ತಾರೆ. ಕರ್ನಾಟಕದ ಜನತೆ ಏನೆಂದು ಯೋಚಿಸಬೇಕು? ಸರಕಾರವು ಸ್ಪಷ್ಟ ನಿಲುವನ್ನು ತಿಳಿಸಬೇಕಿದೆ ಎಂದು ಅವರು ಆಗ್ರಹಿಸಿದರು.
ಬೆಳಗಾವಿ ಅಧಿವೇಶನಕ್ಕೆ ಮೊದಲು ಸರಕಾರ ಸ್ಪಷ್ಟ ನಿಲುವನ್ನು ತಿಳಿಸಲಿ. ಸಾರ್ವಜನಿಕ ಚರ್ಚೆಗೆ ಸರಕಾರವೇ ಒಂದು ವೇದಿಕೆಯಲ್ಲಿ ನಿರ್ಮಿಸಲಿ ಎಂದೂ ಅವರು ಒತ್ತಾಯ ಮಾಡಿದರು