ಬೆಂಗಳೂರು, ನ.30- ರಾಜ್ಯವನ್ನು ಬೆಚ್ಚಿ ಬೀಳಿಸಿದ ಹಸುಗೂಸು ಮಾರಾಟ (Child Trafficking ) ಜಾಲದ ಬಂಧಿತ ಆರೋಪಿಗಳು ಇದುವರೆಗೆ 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವ ಅಘಾತಕಾರಿ ಸಂಗತಿಯು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹಸುಗೂಸು ಮಾರಾಟ ಜಾಲದ ಆರೋಪಿಗಳು 50 ರಿಂದ60 ಮಕ್ಕಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಿದರೆ, ಉಳಿದ ಮಕ್ಕಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಈ ಆರೋಪಿಗಳು ವಿಚಾರಣೆಯಲ್ಲಿ ಕಳೆದ 3 ವರ್ಷಗಳಲ್ಲಿ 250 ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿದ ವಿಚಾರವನ್ನು ಬಾಯಿಬಿಡುತ್ತಿದ್ದಂತೆ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಕರ್ನಾಟಕದಲ್ಲಿ ಮಾರಾಟ ಆಗಿರುವ ಮಕ್ಕಳ ಬಗ್ಗೆ ಆರೋಪಿಗಳಿಂದ ಮಾಹಿತಿ ಕಲೆಹಾಕುತ್ತಿದ್ದಾರೆ.
ಸದ್ಯ 10 ಮಕ್ಕಳ ಸುಳಿವು ಸಿಕ್ಕಿದ್ದು, ಉಳಿದ ಮಕ್ಕಳನ್ನು ಎಲ್ಲಿ, ಯಾರಿಗೆ ಮಾರಾಟ ಮಾಡಲಾಗಿದೆ ಎಂದು ವಿಚಾರಣೆ ನಡೆಸುತ್ತಿದ್ದಾರೆ.
ಕೋಟಿಗಟ್ಟಲೆ ಆಸ್ತಿ:
ಜಾಲದ ಕರ್ನಾಟಕದ ಗ್ಯಾಂಗ್ ಲೀಡರ್ ಮಹಾಲಕ್ಷ್ಮೀ ನಾಲ್ಕೈದು ವರ್ಷಗಳ ಹಿಂದೆ ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದರು ಈಗ ಮಕ್ಕಳ ಮಾರಾಟ ಜಾಲದಿಂದ ಕೋಟ್ಯಾಧಿಪತಿಯಾಗಿದ್ದಾಳೆ. 2017 ರಿಂದಲೂ ಈ ದಂಧೆಯನ್ನು ಮಾಡುತ್ತಾ ಇರುವ ಮಹಾಲಕ್ಷ್ಮೀ, ಇಂದು ಸ್ವಂತ ಮನೆ, ಕಾರು ಜೊತೆಗೆ ಮೈತುಂಬಾ ಚಿನ್ನಾಭರಣ ಹೊಂದಿದ್ದಾಳೆ.
2015 ರಿಂದ 2017 ರವರೆಗೂ ಗಾರ್ಮೆಟ್ಸ್ನಲ್ಲಿ ಕೇವಲ 8 ಸಾವಿರ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ವೇಳೆ ಆಕೆಯ ಪರಿಚಯವಾದ ಮಹಿಳೆಯೊಬ್ಬರು ಅಂಡಾಣು ಕೊಟ್ಟರೇ ಹಣ ಕೊಡುವುದಾಗಿ ಕೇಳಿದ್ದಳು.ಆಗ ಅಂಡಾಣು ನೀಡಿದ್ದ ಮಹಾಲಕ್ಷ್ಮೀಗೆ ಸುಮಾರು 20 ಸಾವಿರ ನೀಡಿದ್ದಳು. ನಂತರ ದಿನಗಳಲ್ಲಿ ಅಂಡಾಣು ಕೊಡುವರನ್ನು ಪತ್ತೆ ಮಾಡಿ ಅದರಿಂದ ಕಮೀಷನ್ ಪಡೆಯುವ ಕೆಲಸ ಮಾಡಿಕೊಂಡಿದ್ದಳು ಎಂಬ ವಿಚಾರವೂ ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳು 2021 ರಿಂದಲೂ ಬಾಡಿಗೆ ತಾಯಿಯಾಗಿ ಮಕ್ಕಳನ್ನು ಕೊಡಿಸುವ ಏಜೆಂಟ್ ಗಳಾಗಿ ಕೆಲಸ ಮಾಡುತ್ತಿದ್ದು, 2021 ರ ಬಳಿಕ ಯಾರು ಗರ್ಭಪಾತ ಮಾಡಿಸಲು ಆಸ್ಪತ್ರೆಗೆ ಬರಲಿದ್ದಾರೆ ಎನ್ನುವ ಮಾಹಿತಿಯನ್ನು ತಿಳಿದು ಅವರನ್ನು ಸಂಪರ್ಕಿಸಿ ಅವರಿಗೆ ಗರ್ಭಪಾತ ಮಾಡಿಸಬೇಡಿ, ನಾವು ನೋಡಿಕೊಳ್ಳುವಾಗಿ ಮಗು ಆಗುವವರೆಗೂ ಖರ್ಚು ವೆಚ್ಚ ಎಲ್ಲವೂ ನಮ್ಮದೆ ಹೆರಿಗೆ ಬಳಿಕ ಮಗುವನ್ನು ನಮಗೆ ಕೊಡಿ ಅಂತ ಮನವೊಲಿಕೆ ಮಾಡಿ. ಹೆಣ್ಣು ಮಗುವಿಗೆ 2 ಲಕ್ಷ, ಗಂಡು ಮಗುವಿಗೆ 3 ಲಕ್ಷ ಕೊಡುವ ಒಪ್ಪಂದ ಮಾಡಿ ಆ ಮಕ್ಕಳನ್ನು ಹೊರಗಡೆ 8ರಿಂದ 10 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು.
ಪಗಿರಾಕಿಗಳಿಗೆ ಗಾಳ:
ಬಂಧಿತರು ಮಗು ಹುಟ್ಟಿದ ಬಳಿಕ ತಾಯಿಗೆ ಒಪ್ಪಂದದಂತೆ ಆಕೆಗೆ ಹಣ ಕೊಟ್ಟು, ಆ ಮಕ್ಕಳ ಫೋಟೋಗಳನ್ನು ಅವರದ್ದೇ ಗ್ರೂಪಲ್ಲಿ ಹಾಕಿ ಶೇರ್ ಮಾಡುವಂತೆ ಹೇಳಿ ಕಿರಾಕಿಗಳಿಗೆ ಗಾಳ ಹಾಕುತ್ತಿದ್ದರು, ಮಗುವಿನ ಅಗತ್ಯವಿರುವವರು ಅವರನ್ನು ಸಂಪರ್ಕಿಸಿದರೆ,ಅವರೊಂದಿಗೆ ಇವರು ಮಾತನಾಡಿ ವ್ಯವಹಾರ ಕುದುರಿಸುತ್ತಿದ್ದರು. ಮಗುವಿನ ಲಿಂಗ, ಬಣ್ಣದ ಮೇಲೆ ಬೆಲೆ ನಿಗಧಿ ಮಾಡಲಾಗುತ್ತಿತ್ತು.
ಹೆಣ್ಣು ಮಗು ಆದರೆ 4ರಿಂದ 6 ಲಕ್ಷ, ಗಂಡು ಮಗು ಆದರೆ, 8ರಿಂದ 10 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು. ಇನ್ನು ಆರೋಪಿಗಳಲ್ಲಿ ಮುರುಗೇಶ್ವರಿ ತನ್ನದೇ ಮಗುವನ್ನು ಮಾರಾಟ ಮಾಡಲು ಮುಂದಾಗಿದ್ಳು ಜನನ ಪತ್ರವೂ ಮಾಡಿಕೊಡುವುದು ತನಿಖೆ ವೇಳೆ ಬಯಲಾಗಿದೆ.