ಬೆಂಗಳೂರು, ಡಿ.10- ಬುಡಬುಡಿಕೆ (Budbudike) ವೇಷಧಾರಿಯಾಗಿ ಬಂದ ಖತರ್ನಾಕ್ ಖದೀಮನೋರ್ವ ಮಹಿಳೆಯೊಬ್ಬರ ಪ್ರಜ್ಞೆ ತಪ್ಪಿಸಿ ಅವರ ಬಳಿಯಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿರುವ ದುರ್ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾಲಕ್ಕಿ ನುಡಿತೈತೆ ಎಂದು ಬುಡುಬುಡಿಕೆ ಆಡಿಸುತ್ತಾ ಭವಿಷ್ಯ ಹೇಳುವ ನೆಪದಲ್ಲಿ ಪರಪ್ಪನ ಅಗ್ರಹಾರದ ಮನೆಯೊಂದರ ಬಳಿ ಬಂದ ಖದೀಮ ಆ ಮನೆಯೊಡತಿ ಕಾಂತಾ ಅವರಿಗೆ ಅಮಾವಾಸ್ಯೆ ಬಳಿಕ ನಿನ್ನ ಪತಿ ಹಾಗೂ ಮಗನಿಗೆ ಗಂಡಾಂತರ ಇದೆ. ಮನೆಯಲ್ಲಿ ಸಾವಾಗಲಿದೆ ಎಂದು ಹೆದರಿಸಿದ್ದಾನೆ.
ಇದರಿಂದ ಹೆದರಿದ ಮಹಿಳೆ ಅದಕ್ಕೆ ಪರಿಹಾರ ಏನೆಂದು ಕೇಳಿದ್ದಾರೆ.ಅದಕ್ಕೆ ಗಂಡಾಂತರ ಪರಿಹಾರಕ್ಕೆ 1,500 ಹಣವನ್ನು ಕೇಳಿದ ಖದೀಮ ನಿಂಬೆ ಹಣ್ಣು ತರಲು ಹೇಳಿ ಮಂತ್ರಿಸಿ ಕಾಂತಾಗೆ ನೀಡಿದ್ದಾನೆ.
ನಿಂಬೆ ಹಣ್ಣು ಹಿಡಿದುಕೊಂಡು ಮೂರು ಸುತ್ತುವಂತೆ ಹೇಳಿದ್ದು ಸುತ್ತು ಹಾಕುತ್ತಿದ್ದ ಕಾಂತ ಅವರು ಮೂರ್ಛೆ ತಪ್ಪಿ ಕೆಳಗೆ ಬಿದ್ದಿದ್ದಾರೆ.ಕೂಡಲೇ ಮನೆಯೊಳಗೆ ಹೋದ ಆತ ಅಲ್ಲಿನ ಒಡವೆ ಹಾಗೂ ಕಾಂತಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಒಡವೆ ದೋಚಿ ಪರಾರಿಯಾಗಿದ್ದಾನೆ.
ಈ ಸಂಬಂಧ ಕಾಂತಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿವಿಧ ಪೊಲೀಸ್ ಠಾಣೆಯಲ್ಲಿ ಇದೇ ರೀತಿಯಾಗಿ ಸುಮಾರು ಎಂಟು ಪ್ರಕರಣಗಳು ದಾಖಲಾಗಿದೆ. ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ.
Previous Articleಮಕ್ಕಳ ವಿಜ್ಞಾನ ಕಲಿಕೆಗೆ ರಾಮಲಿಂಗಾರೆಡ್ಡಿ ಪ್ರತಿಪಾದನೆ
Next Article ಆಸಿಡ್ ದಾಳಿಯಲ್ಲಿ ಬೆಂಗಳೂರು ನಂಬರ್ ಒನ್ | Acid Attacks