ಬೆಂಗಳೂರು – ಮುಂಬರುವ ಲೋಕಸಭಾ Electionಗೆ ರಾಜಕೀಯ ಪಕ್ಷಗಳಲ್ಲಿ ಭಾರತ ತಯಾರಿ ಆರಂಭವಾಗಿದೆ ಆಡಳಿತ ರೂಢ ಕಾಂಗ್ರೆಸ್ ಈ ಬಾರಿ ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ತಯಾರಿ ನಡೆಸಿದರೆ ಜನತಾದಳದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಕಾರ್ಯತಂತ್ರ ರೂಪಿಸುತ್ತಿದೆ.
ಇದಕ್ಕಾಗಿ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ಕಾಂಗ್ರೆಸ್ ಪಕ್ಷ ದೇವತವಾಗಿದೆ ಬಿಜೆಪಿಯಿಂದ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಕಳೆದ ಬಾರಿ ಆಯ್ಕೆಯಾದವರಿಗೆ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ನೀಡುವ ಸಾಧ್ಯತೆ ಇದೆ.
ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಇದ್ದು ಈ ಬಾರಿ ಕಾಂಗ್ರೆಸ್ ಇಲ್ಲಿ ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯೊಂದಿಗೆ ರಣತಂತ್ರ ರೂಪಿಸತೊಡಗಿದೆ. ಇದರಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಗ್ಗೆ ಕಾಂಗ್ರೆಸ್ ನಾಯಕರು ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದು ಈ ಬಾರಿ ಕೈ ವಶ ಮಾಡಿಕೊಳ್ಳಲು ಸೂಕ್ತ ಅಭ್ಯರ್ಥಿ ಮತ್ತು ರಣತಂತ್ರದ ಸಿದ್ಧತೆಯಲ್ಲಿ ತೊಡಗಿದ್ದಾರೆ 2008ರಲ್ಲಿ ಪುನರ್ ವಿಂಗಡಣೆಯಾದ ನಂತರ ಜನ್ಮ ತಳೆದ ಕ್ಷೇತ್ರ ಇದು. ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕೆಲವು ಕ್ಷೇತ್ರಗಳನ್ನು ವಿಭಜಿಸಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಸೃಷ್ಟಿ ಆಯಿತು.
ಈ ಕ್ಷೇತ್ರ ಬೆಂಗಳೂರಿನ ಹೆಸರಿಗೆ ತಕ್ಕ ಹಾಗೆ ಕಾಸ್ಮೋ ಪಾಲಿಟಿನ್ ಸಂಸ್ಕೃತಿಯನ್ನು ಹೊಂದಿರುವ ಕ್ಷೇತ್ರವಾಗಿದೆ. ಇಲ್ಲಿ ಎಲ್ಲಾ ವರ್ಗದ ಜನರು ನೆಲೆಸಿದ್ದಾರೆ ಅದರಲ್ಲೂ ಪ್ರಮುಖವಾಗಿ ಭಾಷಾ ಅಲ್ಪಸಂಖ್ಯಾತರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ನಂತರದ ಸ್ಥಾನ ಮತಿಯ ಅಲ್ಪಸಂಖ್ಯಾತರದ್ದಾಗಿದೆ. ಕ್ಷೇತ್ರದ ಒಟ್ಟು ಜನಸಂಖ್ಯೆ 23,92,833. ಆ ಪೈಕಿ ಗ್ರಾಮೀಣ ಭಾಗದ ವಾಪ್ತಿಗೆ ಬರುವವರು ಶೇಕಡಾ 3.95 ರಷ್ಟಿದ್ದಾರೆ.
ಇನ್ನು ನಗರ ಭಾಗದ ವ್ಯಾಪ್ತಿಯಲ್ಲಿ ಶೇಕಡಾ 96.05 ರಷ್ಟು ಜನಸಂಖ್ಯೆ ಇದೆ. ಇದರಲ್ಲಿ ಪರಿಶಿಷ್ಟ ಜಾತಿಯವರ ಜನಸಂಖ್ಯೆ ಶೇಕಡಾ 16.06 ರಷ್ಟಿದ್ದರೆ, ಪರಿಶಿಷ್ಟ ಪಂಗಡದವರ ಜನಸಂಖ್ಯೆ ಶೇಕಡಾ1.61 ರಷ್ಟಿದೆ.
ಇದರಲ್ಲಿ ಒಟ್ಟು ಮತದಾರರ ಸಂಖ್ಯೆ ಸುಮಾರು 19,31,663. ಅದರಲ್ಲಿ ಪುರುಷ ಮತದಾರರ ಸಂಖ್ಯೆ 10,10,586 ಹಾಗೂ 9,21,077ಮಹಿಳಾ ಮತದಾರರಿದ್ದಾರೆ. ಕೇಂದ್ರ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಶಿವಾಜಿನಗರ, ಶಾಂತಿನಗರ, ಸರ್ವಜ್ಞ ನಗರ, ಚಾಮರಾಜಪೇಟೆ, ಮಹದೇವಪುರ, ಗಾಂಧಿನಗರ, ರಾಜಾಜಿನಗರ ಮತ್ತು ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರಗಳಿವೆ.
ಮೇಲ್ನೋಟಕ್ಕೆ ಈ ಕ್ಷೇತ್ರ ಕಾಂಗ್ರೆಸ್ ನ ಸಾಂಪ್ರದಾಯಿಕ ಮತ ಬ್ಯಾಂಕ್ ದೊಡ್ಡ ಪ್ರಮಾಣದಲ್ಲಿ ಇರುವ ಕ್ಷೇತ್ರ ಎಂದು ಯಾರು ಬೇಕಾದರೂ ಸುಲಭವಾಗಿ ಹೇಳಬಹುದು.
ಈ ಕ್ಷೇತ್ರದಲ್ಲಿ ಕನ್ನಡ ಭಾಷಿಗರ ಜೊತೆಯಲ್ಲಿ ತೆಲುಗು ತಮಿಳು ಹಿಂದಿ ಮತ್ತು ಮರಾಠಿ ಭಾಷೆಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಈ ಭಾಷಾ ಅಲ್ಪಸಂಖ್ಯಾತರು ಮತ್ತು ಮತೀಯ ಅಲ್ಪಸಂಖ್ಯಾತರಾದ ಬಹುತೇಕ ಮತದಾರರು ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ.
ಅದರಲ್ಲೂ ಶಿವಾಜಿನಗರ, ಶಾಂತಿನಗರ, ಸರ್ವಜ್ಞ ನಗರ, ಚಾಮರಾಜಪೇಟೆ ಮತ್ತು ಗಾಂಧಿನಗರ ವಿಧಾನಸಭೆ ಕ್ಷೇತ್ರಗಳು ಕಾಂಗ್ರೆಸ್ ನ ಭದ್ರಕೋಟೆಯಾಗಿವೆ.ಇಲ್ಲಿ ಬಿಜೆಪಿ ಪ್ರಭಾವ ತೀರಾ ಕಡಿಮೆ.
ಉಳಿದ ಮಹದೇವಪುರ ರಾಜಾಜಿನಗರ ಮತ್ತು ಸಿ.ವಿ.ರಾಮನ್ ನಗರ ಕ್ಷೇತ್ರಗಳ ಪೈಕಿ ಮಹದೇವಪುರ ಮತ್ತು ಸಿ.ವಿ.ರಾಮನ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸತತವಾಗಿ ಆಯ್ಕೆಯಾಗುತ್ತಿದ್ದರೂ,ಕಾಂಗ್ರೆಸ್ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಮತಗಳಿಸುತ್ತಿದೆ.ರಾಜಾಜಿನಗರದಲ್ಲಿ ಕೂಡ ಇದೇ ಪರಿಸ್ಥಿತಿ
ಬೆಂಗಳೂರು ಕ್ಷೇತ್ರದಲ್ಲಿ ಮೊದಲ ಬಾರಿಗೆ ಸಂಸತ್ ಚುನಾವಣೆ ನಡೆದಿದ್ದು 2009ರಲ್ಲಿ. ಆಗ,ಕಾಂಗ್ರೆಸ್ ನಿಂದ ಎಚ್.ಟಿ.ಸಾಂಗ್ಲಿಯಾನ ಮತ್ತು ಜೆಡಿಎಸ್ ನಿಂದ ಜಮೀರ್ ಅಹಮದ್ ಖಾನ್ ಕಣಕ್ಕಿಳಿದಿದ್ದರು. ಆಗ,ಮತೀಯ ಅಲ್ಪಸಂಖ್ಯಾತರ ಮತ ವಿಭಜನೆಯಾಗಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಪಿ.ಸಿ.ಮೋಹನ್ ಆಯ್ಕೆಯಾಗಿದ್ದರು.
ಮೂವತ್ತೈದು ಸಾವಿರ ಮತಗಳ ಅಂತರದಿಂದ ಬಿಜೆಪಿಯ ಪಿ.ಸಿ.ಮೋಹನ್ ಅವರು ಕಾಂಗ್ರೆಸ್ ನ ವಿರುದ್ಧ ಗೆದ್ದಿದ್ದರು.ಮೊದಲ ಅವಧಿಯಲ್ಲಿ ಪಿ.ಸಿ.ಮೋಹನ್ ಅವರ ಗೆಲುವಿನ ಅಂತರ ಮೂವತ್ತೈದು ಸಾವಿರ ಮತಗಳು.
ಎರಡನೇ ಬಾರಿ ಚುನಾವಣೆ ನಡೆದಾಗಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿ ಮತ ವಿಭಜನೆಯಾದವು. ಪರಿಣಾಮ ಮತ್ತೊಂದು ಅವಧಿಗೆ ಸಂಸದರಾಗುವ ಮೂಲಕ ಬಿಜೆಪಿಯ ಪಿ.ಸಿ.ಮೋಹನ್ ದಾಖಲೆ ಬರೆದರು. ಎರಡನೇ ಬಾರಿಗೆ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ರ ವಿರುದ್ಧ ಒಂದು ಲಕ್ಷದ ಮೂವತ್ತೈದು ಸಾವಿರಕ್ಕೂ ಹೆಚ್ಚು ಮತದ ಗೆಲುವು ದೊರೆತಿದೆ.
ಮೂರನೆ ಬಾರಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಪರವಾದ ಅಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊಚ್ವಿ ಹೋದರು ಪಿ.ಸಿ.ಮೋಹನ್ ದಾಖಲೆಯ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಮೂರನೆ ಬಾರಿಗೆ ಸಂಸತ್ ಪ್ರವೇಶಿಸಿದರು.
ಈ ಬಾರಿ ಪರಿಸ್ಥಿತಿ ಕೊಂಚ ಬದಲಾವಣೆಯಾಗಿದೆ. ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿಗಳ ಫಲಾನುಭವಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ರಾಜ್ಯದ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಕೈಯಲ್ಲಿದೆ ಈ ಅನುಕೂಲ ಅಂಶ ಬಳಸಿಕೊಂಡು ಈ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ತಂತ್ರ ರೂಪಿಸಲಾಗುತ್ತಿದೆ. ಬಿಜೆಪಿಗೆ ಸೆಡ್ಡು ಹೊಡೆಯುವ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ.
ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಐದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸುಲಭವಾಗಬಹುದು ಎಂಬ ಲೆಕ್ಕಾಚಾರದೊಂದಿಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಶಾಸಕ ಹ್ಯಾರಿಸ್ ಅವರ ಪುತ್ರ ಮೊಹಮದ್ ನಲಪಾಡ್ ಚುನಾವಣೆಗೆ ಸ್ಪರ್ಧಿಸಲು ರೆಡಿಯಾಗಿದ್ದಾರೆ.
ಪಕ್ಷದ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಪರಿಣಾಮ ತಮಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.ಇಂತಹುದೇ ವಿಶ್ವಾಸ ಹಿರಿಯ ನಾಯಕ ಕೆ.ರಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಖಾನ್ ಅವರದ್ದು. ಇವರ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ವಲಯದ ಸೈಯದ್ ನಾಸೀರ್ ಹುಸೇನ್, ಎಸ್.ಎ ಹುಸೇನ್ ಆಕಾಂಕ್ಷಿಗಳಾಗಿದ್ದಾರೆ.
ಇದರ ನಡುವೆ ಮತೀಯ ಅಲ್ಪಸಂಖ್ಯಾತರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಪರಿಣಾಮ ಮತ ವಿಭಜನೆಯಾಗಿ ಬಿಜೆಪಿ ಅಭ್ಯರ್ಥಿ ಸುಲಭವಾಗಿ ಆಯ್ಕೆಯಾಗುತ್ತಿದ್ದಾರೆ.ಇದನ್ನು ತಪ್ಪಿಸಲು ಈ ಬಾರಿ ಬಹುಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಕಳೆದ ಲೋಕಸಭಾ ಚುನಾವಣೆ ಸಮಯದಲ್ಲೂ ಕೂಡ ಇಂತಹುದೇ ವಾದ ಕೇಳಿಬಂದಿತ್ತು.ಆಗ ಇಂತಹ ವಾದದ ಮುಂಚೂಣಿಯಲ್ಲಿದ್ದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಕಣಕ್ಕಿಳಿಯಲು ಪ್ರಬಲ ಲಾಬಿ ನಡೆಸಿದ್ದರು. ಇದೀಗ ಈ ಬಾರಿ ಮತ್ತೊಮ್ಮೆ ಇದೇ ವಾದದೊಂದಿಗೆ ಕಣಕ್ಕಿಳಿಯಲು ಹರಿಪ್ರಸಾದ್ ಪ್ರಯತ್ನ ನಡೆಸಿದ್ದಾರೆ.
ಇವರೊಂದಿಗೆ ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರೂ ಕೂಡ ತಾನು ಭಾಷಾ ಅಲ್ಪಸಂಖ್ಯಾತ ಎಂಬ ವಾದ ಮಂಡಿಸಿ ಉಮೇದುವಾರಿಕೆ ಮಂಡಿಸಿದರೆ,ಕ್ಷೇತ್ರದಲ್ಲಿ ಈ ಬಾರಿ ರೆಡ್ಡಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬ ವಾದ ಕೇಳಿಬರುತ್ತಿದೆ.
ಇಂತಹ ಚರ್ಚೆಗಳ ನಡುವೆಯೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ಕ್ಷೇತ್ರದಿಂದ ತಮ್ಮ ಪತ್ನಿ ಶ್ರೀಮತಿ ಟಬೂ ದಿನೇಶ್ ಗುಂಡೂರಾವ್ ಅವರನ್ನು ಕಣಕ್ಕಿಳಿಸಲು ಪ್ರಯತ್ನ ಆರಂಭಿಸಿದ್ದಾರೆ.
ಪ್ರದೇಶ ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ವಿಭಾಗದಲ್ಲಿ ಸಕ್ರಿಯವಾಗಿರುವ ಶ್ರೀಮತಿ ಟಬು ಅವರು ಕ್ಷೇತ್ರದ ಹಲವೆಡೆ ಪ್ರಭಾವ ಹೊಂದಿದ್ದಾರೆ. ತಮ್ಮ ಪತಿ ಸ್ಪರ್ಧಿಸುವ ಗಾಂಧಿನಗರ ಕ್ಷೇತ್ರದಲ್ಲಿ ಹೆಚ್ಚಿನ ಹಿಡಿತ ಹೊಂದಿದೆ ಅವರು ನೆರೆಯ ಶಿವಾಜಿನಗರ,ಚಾಮರಾಜ ಪೇಟೆ ಮತ್ತು ರಾಜಾಜಿನಗರದಲ್ಲೂ ಪ್ರಭಾವ ಹೊಂದಿದ್ದಾರೆ ಎಂಬ ವಾದ ಮಂಡಿಸುತ್ತಾರೆ.
ಇದರ ಜೊತೆಯಲ್ಲಿ ಅವರು ಅಲ್ಪಸಂಖ್ಯಾತರಾಗಿದ್ದು ದಿನೇಶ್ ಗುಂಡೂರಾವ್ ಅವರ ಪತ್ನಿಯಾಗಿರುವ ಕಾರಣ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ಮತ ಸೆಳೆಯಬಹುದು ಎಂಬ ವಾದ ಮಂಡಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರ ಜೊತೆ ಈ ಕುರಿತಂತೆ ಒಂದೆರಡು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರಿಗೆ ಡಿ.ಕೆ.ಶಿವಕುಮಾರ್ ಅವರ ಆಪ್ತ ಮೊಹಮ್ಮದ್ ನಳಪಾಡ್ ಬಗ್ಗೆ ಅಂತಹ ಒಳ್ಳೆಯ ಅಭಿಪ್ರಾಯ ಇಲ್ಲ.ಹಾಗೇಯೇ ಹರಿಪ್ರಸಾದ್ ಅವರ ಬಗ್ಗೆಯೂ ಅಷ್ಟಕಷ್ಟೇ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ ಹೀಗಾಗಿ ದಿನೇಶ್ ಗುಂಡೂರಾವ್ ಅವರ ಪತ್ನಿಯನ್ನು ಹಲವಾರು ಲೆಕ್ಕಾಚಾರದೊಂದಿಗೆ ಕಣಕ್ಕಿಳಿಸಲು ಒಲವು ಹೊಂದಿದ್ದಾರೆ ಎಂಬ ಮಾಹಿತಿ ಇದೆ.ಇದರ ಆಧಾರದಲ್ಲಿ ಶ್ರೀಮತಿ ಟಬೂ ಗುಂಡೂರಾವ್ ಈಗಾಗಲೇ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದಾರೆ ಎನ್ನಲಾಗಿದ್ದು ವಿದ್ಯಮಾನಗಳು ಕುತೂಹಲ ಮೂಡಿಸಿವೆ.