ಬೆಂಗಳೂರು,ಜ.1- ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮಾಚರಣೆಯ ವೇಳೆ ಸಂಭ್ರಮಾಚರಣೆಗಳು ಉಕ್ಕಿ ಹರಿದಂತೆ ಮದ್ಯದ ಹೊಳೆಯೂ ಹರಿದಿದೆ.
ನಿನ್ನೆ ಒಂದೇ ದಿನ ದಾಖಲೆಯ ಮಟ್ಟದಲ್ಲಿ ಮದ್ಯ ಮಾರಾಟ ನಡೆದಿದೆ. ಅಬಕಾರಿ ಇಲಾಖೆಯ ಮಾಹಿತಿಗಳ ಪ್ರಕಾರ ಡಿಸೆಂಬರ್ 31ರಂದು ಬರೋಬ್ಬರಿ, 193 ಕೋಟಿ ಮೌಲ್ಯದ ಮದ್ಯ (Alcohol) ಮಾರಾಟವಾಗಿದೆ.
ಈ ಮೂಲಕ ಒಂದೇ ದಿನ ಭರ್ಜರಿ ಮದ್ಯ ಮಾರಾಟ ದಾಖಲೆ ಮಾಡಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಭಾರತೀಯ ಮದ್ಯ 3,07,953 ಬಾಕ್ಸ್, ಬಿಯರ್ 1,95,005 ಬಾಕ್ಸ್ ಮಾರಾಟವಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 2,611 ಕೋಟಿ ಆದಾಯ ಬಂದಿತ್ತು. ಈ ವರ್ಷ ಡಿಸೆಂಬರ್ ತಿಂಗಳಲ್ಲಿ 3 ಸಾವಿರ ಕೋಟಿ ಆದಾಯ ಸಂಗ್ರಹವಾಗಿದೆ.
ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ಹರಿದುಬಂದಿದೆ. ನಗರ ಹಾಗೂ ಗ್ರಾಮೀಣ ಭಾಗದ ಮೂಲೆ ಮೂಲೆಯಲ್ಲಿಯೂ ಜನರು ಮದ್ಯದ ನಶೆಯ ಮೂಲಕ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು 717 ಪಾನ ಮತ್ತ ಚಾಲನೆ ಪ್ರಕರಣಗಳನ್ನು ದಾಖಲಿಸಿ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಇದೆಲ್ಲಾ ಒಂದು ಕಡೆಯಾದರೆ,ಮತ್ತೊಂದೆಡೆ ಹೊಸ ವರ್ಷಾಚರಣೆ ವೇಳೆ ಪಾರ್ಟಿ ಮಾಡಿ ಪಾನಮತ್ತ ಸ್ನೇಹಿತರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ಹನುಮಂತನಗರದ ಶ್ರೀನಿವಾಸನಗರ ಬಸ್ ನಿಲ್ದಾಣದ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಬನಶಂಕರಿಯ ವಿಜಯ(21)ಕೊಲೆಯಾದವರು, ವಿಜಯ್ ಹಾಗೂ ಆತನ ಗೆಳೆಯರು ಹೊಸ ವರ್ಷಾಚರಣೆ ಮಾಡಿ ಮದ್ಯಪಾನ ಮಾಡಿದ್ದಾರೆ ಕಂಠಮಟ್ಟ ಕುಡಿದು. ಮನೆಗೆ ತೆರಳುವಾಗ ವಿಜಯ್ ಹಾಗೂ ಆತನ ಗೆಳೆಯರ ನಡುವೆ ಗಲಾಟೆ ಆರಂಭವಾಗಿದೆ. ಆಟೋದಲ್ಲಿ ತೆರಳುತ್ತಿದ್ದಾಗ ಈ ಗಲಾಟೆ ಅತಿರೇಕಕ್ಕೆ ಹೋಗಿದ್ದು, ವಿಜಯ್ನ ಎದೆಗೆ ಚಾಕುವಿನಿಂದ ಇರಿದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.
ಬಳಿಕ ಶ್ರೀನಿವಾಸನಗರ ಬಸ್ ನಿಲ್ದಾಣದ ಬಳಿ ಆತನನ್ನು ಆಟೋದಿಂದ ಹೊರತಳ್ಳಿ ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ವಿಜಯ್ ಸಾವನ್ನಪ್ಪಿದ್ದಾರೆ.