ಬೆಂಗಳೂರು,ಮೇ.12- ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಯುವಕ ಒಬ್ಬನ ಅಪಹರಣ ಪ್ರಕರಣವು ಕೊಲೆಯಲ್ಲಿ ಅಂತ್ಯವಾಗಿದೆ. ಅಪಹರಿಸಿದ್ದ ಸುಹಾಸ್ ನನ್ನು ಕೊಲೆ ಮಾಡಿರುವ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ತಿಳಿಸಿದ್ದಾರೆ. ಕಳೆದ ಏ. 9 ರಂದು ಬೊಮ್ಮನಹಳ್ಳಿ ಠಾಣೆಯಲ್ಲಿ ಸುಹಾಸ್ ನನ್ನು ಅಪಹರಣ ಮಾಡಲಾಗಿದೆ ಎಂದು ದೂರು ನೀಡಲಾಗಿತ್ತು. ಯುಗಾದಿ ಹಬ್ಬದ ದಿನ ಆರೋಪಿ ಕಾಂತನ ಆಟೋಗೆ ಸುಹಾಸ್ ಬೈಕ್ ಟಚ್ ಮಾಡಿದ್ದ. ಈ ವಿಚಾರಕ್ಕೆ ಅಂದು ಸುಹಾಸ್ ಮತ್ತು ಕಾಂತ ಕೈ ಕೈ ಮೀಲಾಯಿಸಿಕೊಂಡಿದ್ದರು. ಅಲ್ಲದೆ, ಅಂದೇ ಸುಹಾಸ್ ಮೇಲೆ ತನ್ನ ಗ್ಯಾಂಗ್ನಿಂದ ಕಾಂತ ಹಲ್ಲೆ ನಡೆಸಿದ್ದ.
ಈ ಗಲಾಟೆ ವಿಚಾರ ಠಾಣೆಯವರೆಗೂ ಹೋಗಿ ಇಬ್ಬರಿಗೂ ಪೊಲೀಸರು ಬುದ್ದಿ ಹೇಳಿ ಕಳುಹಿಸಿದ್ದರು. ಆದರೆ ಅಂದು ಸುಮ್ಮನಾಗಿದ್ದ ಕಾಂತ ಏಪ್ರಿಲ್ 9 ರಂದು ಬೇರೆಯವರ ಮೂಲಕ ಸುಹಾಸ್ ಕರೆಸಿಕೊಂಡು ತನ್ನ ಗ್ಯಾಂಗ್ ಜತೆ ಸುಹಾಸ್ನನ್ನು ಅಪಹರಣ ಮಾಡಿದ್ದ. ಬಳಿಕ ಕೊಲೆ ಮಾಡಿ ಎಲೆಕ್ಟ್ರಾನಿಕ್ ಸಿಟಿಯ ನೀಲಗಿರಿ ತೋಪಿನ ಬಳಿ ಶವ ಎಸೆದಿದ್ದರು.
ಕೊಲೆ ಮಾಡಿದ ಬಳಿಕ ತಿರುಪತಿಗೆ ತೆರಳಿ ವೆಂಕಟೇಶ್ವರ ದೇವಸ್ಥಾನದಲ್ಲಿ ಆರೋಪಿಗಳು ಮುಡಿ ಕೊಟ್ಟಿದ್ದರು.
ದೇವಸ್ಥಾನದಿಂದ ಬಂದವರೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದು ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.
Previous Articleನೋಯ್ಡಾದಲ್ಲಿ ಅಪಘಾತ.. ಕರ್ನಾಟಕದ ವ್ಯಕ್ತಿ ದುರ್ಮರಣ
Next Article ಬಾಂಗ್ಲಾ ಕಳ್ಳರು Arrest