ಬೆಂಗಳೂರು,ಜ.18: ಮುಂಬರುವ ಲೋಕಸಭಾ Electionಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ದೃಷ್ಟಿಯಿಂದ ಹೈಕಮಾಂಡ್ ಸೂಚಿಸಿದರೆ ಸಚಿವರುಗಳು ಸ್ಪರ್ಧೆ ಮಾಡಲೇಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸೇರಿದಂತೆ ಯಾವುದೇ ಸಚಿವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎಂದು ಹೈಕಮಾಂಡ್ ಸೂಚಿಸಿದರೆ ಅದನ್ನೆಲ್ಲಾ ನಾವು ಪಾಲಿಸಲೇಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕೆಲ ಸಚಿವರು ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅನಿವಾರ್ಯತೆ ಬಂದರೆ ಸಚಿವರುಗಳು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಾಗುತ್ತದೆ. ಹೈಕಮಾಂಡ್ ಸೂಚನೆಯನ್ನು ಎಲ್ಲರೂ ಪಾಲಿಸಬೇಕು ಎಂದರು.
ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣೆ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ನಾಳೆ ರಾಜ್ಯದ ಚುನಾವಣಾ ಸಮಿತಿ ಸಭೆ ನಡೆಯಲಿದೆ ಎಂದು ಅವರು ಹೇಳಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪಕ್ಷದ ದೆಹಲಿ ವೀಕ್ಷಕರು ಪಾಲ್ಗೊಳ್ಳುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಯಾವ ಕ್ಷೇತ್ರಗಳಿಗೆ ಯಾರನ್ನು ಅಭ್ಯರ್ಥಿಯನ್ನಾಗಿಸಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುವುದು. ಈಗಾಗಲೇ ಕ್ಷೇತ್ರಗಳಿಗೆ ಸಚಿವರುಗಳು, ವೀಕ್ಷಕರುಗಳು ಭೇಟಿ ನೀಡಿ ಅಭ್ಯರ್ಥಿ ಆಯ್ಕೆ ಬಗ್ಗೆ ನೀಡಿರುವ ವರದಿಯ ಬಗ್ಗೆಯೂ ಚರ್ಚೆ ಮಾಡುತ್ತೇವೆ. ಸಂಭವನೀಯ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಚರ್ಚೆ ನಡೆಸಿ ಅಂತಿಮವಾಗಿ ಕೇಂದ್ರ ಚುನಾವಣಾ ಸಮಿತಿಗೆ ಅಭ್ಯರ್ಥಿಗಳ ಪಟ್ಟಿ ಕಳುಹಿಸಲಾಗುವುದು. ಹೈಕಮಾಂಡ್ ಅಭ್ಯರ್ಥಿ ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.
ಧರ್ಮದ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಾವ್ಯಾರೂ ರಾಮನ ವಿರೋಧಿಗಳಲ್ಲ. ನಾವೆಲ್ಲರೂ ಹಿಂದೂಗಳೇ. ಸಿದ್ಧರಾಮಯ್ಯನವರ ಹೆಸರಿನಲ್ಲಿ ರಾಮನಿದ್ದಾನೆ. ಹಾಗೆಯೇ ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ನಾವೆಲ್ಲಾ ನಮ್ಮ ನಮ್ಮ ಧರ್ಮಗಳನ್ನೇ ಆಚರಿಸುತ್ತೇವೆ ಎಂದು ಅವರು ಹೇಳಿದರು.
ಧರ್ಮದಲ್ಲಿ ರಾಜಕೀಯ ಬೆರೆಸುವುದಕಷ್ಟೇ ನಮ್ಮ ವಿರೋಧ. ಹೀಗಾಗಿಯೇ ರಾಮ ಮಂದಿರ ಉದ್ಘಾಟನೆನೆ ರಾಜಕೀಯ ಬೆರೆಸಿರುವುದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೇವೇ ಹೊರೆತು ಬೇರೆನೂ ಇಲ್ಲ ಎಂದು ತಿಳಿಸಿದರು.