ಬೆಂಗಳೂರು, ಮಾ.18- ಲೋಕಸಭೆ Election ಸನ್ನಿಹಿತವಾಗುತ್ತಿರುವಂತೆ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕುತೂಹಲ ಮೂಡಿಸಿವೆ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲ್ಪಟ್ಟಿರುವ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಪಕ್ಷ ತೊರೆಯಲು ಸಜ್ಜಾಗಿದ್ದಾರೆ.
ಮತ್ತೊಂದೆಡೆ ಸಂಧಾನಕ್ಕೆ ಮಣಿಯದ ಹಿರಿಯ ನಾಯಕ ಈಶ್ವರಪ್ಪ ಶಿವಮೊಗ್ಗದಲ್ಲಿ ನಡೆದ ಪ್ರಧಾನಿ ಕಾರ್ಯಕ್ರಮದಿಂದ ದೂರ ಉಳಿದು ಗಮನ ಸೆಳೆದರು.
ಅಭಿಮಾನಿಗಳು ಬೆಂಬಲಿಗರು ಮತ್ತು ಕುಟುಂಬ ಸದಸ್ಯರೊಂದಿಗೆ ಇಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ತಮಗೆ ಟಿಕೆಟ್ ನಿರಾಕರಿಸಿರುವ ಕ್ರಮದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಚುನಾವಣೆ ನಿವೃತ್ತಿ ಘೋಷಿಸಿದ್ದ ತಮ್ಮನ್ನು ಸಂಪರ್ಕಿಸಿದ ಪಕ್ಷದ ಕೆಲವು ನಾಯಕರು ನನ್ನ ಮನೆಗೆ ಬಂದು ಮನವೊಲಿಸಿದ್ದರು ಅದಾದ ನಂತರ ತಾವು ನಿಲುವು ಬದಲಾಯಿಸಿ ಚುನಾವಣೆ ಸ್ಪರ್ಧೆ ಮಾಡುವ ನಿರ್ಧಾರ ಕೈಗೊಂಡಿದ್ದೆ. ಆದರೆ ಈಗ ಏಕಾಏಕಿ ಟಿಕೆಟ್ ನಿರಾಕರಿಸಲಾಗಿದೆ ಈ ಎಲ್ಲ ವಿಚಾರಗಳ ಬಗ್ಗೆ ನಾಳೆ ಸುಧೀರ್ಘವಾಗಿ ಮಾತನಾಡುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರು ನಿನ್ನೆ ತಮ್ಮ ಮನೆಗೆ ಬಂದು ಮಾತುಕತೆ ನಡೆಸಿದ್ದಾರೆ. ಆ ವಿವರಗಳನ್ನು ಹೇಳಲು ಆಗುವುದಿಲ್ಲ. ನಾಳೆ ಎಲ್ಲವನ್ನು ತಿಳಿಸುತ್ತೇನೆ ಸದಾನಂದಗೌಡ ಹೇಳಿದರು.
ಮಾಜಿ ಸಚಿವ ಈಶ್ವರಪ್ಪ ಅವರ ಬಂಡಾಯ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಈಶ್ವರಪ್ಪ ಬಳಿ ಮಾತನಾಡಿದ್ದೇನೆ. ಯಾರಿಗೆಲ್ಲಾ ಅನ್ಯಾಯವಾಗಿದೆಯೋ ಅವರೆಲ್ಲಾ ಹೈಕಮಾಂಡ್ ನಾಯಕರ ಬಳಿ ಹೋಗೋಣ ಎಂದಿದ್ದೆ ಆದರೆ ಈಶ್ವರಪ್ಪ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.ಅವರ ನಿಲುವಿನ ಬಗ್ಗೆ ನಾನೇನು ಹೇಳಲ್ಲ. ನಾಳೆ ನನ್ನ ನಿರ್ಧಾರ ಹೇಳುತ್ತೇನೆ ಎಂದರು.
ರಾಜ್ಯ ರಾಜಕೀಯದಲ್ಲಿ ನನಗೆ ಆಗಿರುವ ಕೆಲವು ಅನ್ಯಾಯಗಳ ಬಗ್ಗೆ ಮನದಾಳದ ವಿಚಾರಗಳನ್ನು ಹಂಚಿಕೊಳ್ಳಲು ನಾಳೆ ಸುದ್ದಿಗೋಷ್ಠಿ ಕರೆದಿದ್ದೇನೆ. ಈಗಲೇ ನಿರ್ಣಯ ಹೇಳಿಬಿಟ್ಟರೆ ನಾಳೆಗೆ ಏನೂ ಉಳಿಯಲ್ಲ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ ಎಂದು ಮಾರ್ಮಿಕವಾಗಿ ಹೇಳಿದರು.