ಬೆಂಗಳೂರು – ಕನ್ನಡ , ತಮಿಳು, ತೆಲುಗು ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯವಾಗಿರುವ ನಟಿ ಪ್ರಿಯಾಮಣಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸಿನಿಮಾ ರಂಗದಲ್ಲೂ ಮುಂದುವರೆದಿದ್ದಾರೆ ಇದರ ಜೊತೆಗೆ ಪ್ರಾಣಿ ಪ್ರಿಯೆಯಾಗಿಯೂ ಪ್ರಿಯಾಮಣಿ ಎಲ್ಲರ ಗಮನ ಸೆಳೆದಿದ್ದಾರೆ.
ಕಟ್ಟುನಿಟ್ಟಿನ ಸಸ್ಯಾಹಾರ ಉತ್ತೇಜಿಸುತ್ತಿರುವ ಪ್ರಿಯಾಮಣಿ ಪ್ರಾಣಿಜನ್ಯ ಉತ್ಪನ್ನಗಳ ಕಡು ವಿರೋಧಿ. ಪ್ರಾಣಿ ಪ್ರಿಯ ಸಂಘಟನೆ ಪೇಟಾ ಜೊತೆ ಸೇರಿ ಹಲವಾರು ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿರುವ ಪ್ರಿಯಾಮಣಿ ಇದೀಗ ದೈವಿಕ ಕೈಂಕರ್ಯಗಳಿಗೆ ಆನೆಗಳನ್ನು ಬಳಸುವುದರ ವಿರುದ್ಧ ಧ್ವನಿ ಎತ್ತಿದ್ದಾರೆ.
ಅಷ್ಟೇ ಅಲ್ಲ ಜೀವಂತ ಆನೆಗಳ ಬದಲಿಗೆ ಮೆಕ್ಯಾನಿಕ್ ಆನೆಗಳನ್ನು ಬಳಸಿ ದೈವಿಕ ಕಾರ್ಯಗಳನ್ನು ಪೂರ್ಣಗೊಳಿಸಬಹುದು ಎಂದು ಹೇಳಿರುವ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇರಳದ ಎರ್ನಾಕುಲಂ ಸಮೀಪದಲ್ಲಿರುವಕಾಲಡಿ ತ್ರಿಕ್ಕದಲ್ಲಿರುವ ಮಹಾದೇವ ದೇವಸ್ಥಾನಕ್ಕೆ ರೋಬೋ ಎಲಿಫೆಂಟ್ ಅನ್ನು ಕೊಡುಗೆಯಾಗಿನೀಡಿದ್ದಾರೆ.
ಗಾತ್ರ ಹಾಗೂ ಎತ್ತರದಲ್ಲಿ ಮೆಕ್ಯಾನಿಕಲ್ ಎಲಿಫೆಂಟ್, ನಿಜವಾದ ಆನೆಯನ್ನ ಮೀರಿಸುವಂತಿದ್ದು, ಈ ಆನೆ ಕಂಡು ಗ್ರಾಮಸ್ಥರು ಬೆರಗಾಗಿದ್ದಾರೆ.
ಪ್ರಿಯಾಮಣಿ ಕೆಲಸವನ್ನು ಅನೇಕರು ಕೊಂಡಾಡಿದ್ದಾರೆ. ಮಹದೇವನ್ ಎಂಬ ಹೆಸರಿನ ಆನೆಯನ್ನು ದೇವಾಲಯದ ಸಮಾರಂಭಗಳನ್ನು ಕ್ರೌರ್ಯ ಮುಕ್ತವಾಗಿ, ಸುರಕ್ಷಿತ ರೀತಿಯಲ್ಲಿ ಬಳಸಲಾಗುವುದು ಎಂದು ಪೇಟಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.