ಬೆಂಗಳೂರು, ಮಾ.21 – ಲೋಕಸಭೆ Electionಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಿರುವುದರಿಂದ ಆಕ್ರೋಶಗೊಂಡಿರುವ ಸಂಸದ ಡಿ.ವಿ.ಸದಾನಂದಗೌಡ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಕುಟುಂಬ ರಾಜಕಾರಣಕ್ಕೆ ಒತ್ತಾಸೆಯಾಗಿ ನನಗೆ ಟಿಕೆಟ್ ನಿರಾಕರಿಸಲಾಗಿದೆ.ಇದು ನನಗೆ ಬೇಸರ ತಂದಿದ್ದು ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್‌ಗೆ ಸೇರುವುದಿಲ್ಲ. ಆದರೆ,ಕರ್ನಾಟಕ ಬಿಜೆಪಿ ಒಂದು ಕುಟುಂಬದ ಮುಷ್ಠಿಯಲ್ಲಿರಲು ಬಿಡುವುದಿಲ್ಲ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನನಗೆ ಕಾಂಗ್ರೆಸ್ ಸೇರುವಂತೆ ಆ ಪಕ್ಷದ ಪ್ರಮುಖರು ಆಹ್ವಾನ ನೀಡಿದ್ದು ನಿಜ. ಆದರೆ ನಾನು ಬಿಜೆಪಿ ಬಿಟ್ಟು ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಶುದ್ಧೀಕರಣ ಮಾಡುವುದೇ ನನ್ನ ಮುಂದಿನ ಉದ್ದೇಶ, ನನಗೆ ಟಿಕೆಟ್ ಸಿಗದೇ ಇರುವುದಕ್ಕೆ ನೋವಾಗಿದೆ. ಟಿಕೆಟ್ ಕೈ ತಪ್ಪಿಸಿದವರು ಯಾರು ಎಂಬುದು ನನಗೂ ಗೊತ್ತು. ನಿಮಗೂ ಗೊತ್ತು
ನನಗೆ ಅನ್ಯಾಯ ಮಾಡಿದವರು ಮತ್ತು ನೋವುಂಟು ಮಾಡಿದವರು ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡಲಿದ್ದಾರೆ ಎಂದರು.
ನನಗೆ ಈ ಬಾರಿ ಟಿಕೆಟ್ ಕೈ ತಪ್ಪಿರುವುದಕ್ಕೆ ನಿಜವಾಗಿಯೂ ಬೇಸರವಾಗಿದೆ. ನಾನು ಚುನಾವಣಾ ಕಣದಿಂದ ದೂರ ಸರಿಯುವ ಉದ್ದೇಶ ಹೊಂದಿದ್ದೆ. ಆದರೆ ಒಬ್ಬರು ಮಾಜಿ ಮುಖ್ಯಮಂತ್ರಿ, ಇಬ್ಬರು ಮಾಜಿ ಡಿಸಿಎಂಗಳು ಮತ್ತು ಕೆಲವು ಮಾಜಿ ಮಂತ್ರಿಗಳು ಬಂದು ಚುನಾವಣೆಯಲ್ಲಿ ನಿಲ್ಲಲೇ ಬೇಕು ಎಂದು ಹೇಳಿದರು. ಆ ಬಳಿಕ ಟಿಕೆಟ್ ಬೇರೆಯವರಿಗೆ ಘೋಷಿಸಲಾಯಿತು ಎಂದರು.
ಮೋದಿಯವರು ದೇಶವೇ ನನ್ನ ಪರಿವಾರ ಎಂದಿದ್ದಾರೆ. ಆದರೆ ಇಲ್ಲಿ ಒಂದು ಕುಟುಂಬದ ಹಿಡಿತಕ್ಕೆ ಪಕ್ಷ ಸಿಲುಕಿದೆ. ಒಂದು ಕುಟುಂಬ, ಒಂದು ಜಾತಿಯ ಪಕ್ಷ ಆಗಬಾರದು. ಇದು ಪಕ್ಷದ ಸಿದ್ಧಾಂತ ಮತ್ತು ಮೋದಿಯವರ ನಿಲುವಿಗೆ ವಿರುದ್ಧವಾದುದು ಎಂದು ಹೇಳಿದರು.
ಕಾಂಗ್ರೆಸ್‌ನಿಂದ ಆಹ್ವಾನ ಬಂದಿದ್ದು ನಿಜ. ಕಾಂಗ್ರೆಸ್ ನವರು ನನಗೆ ಯಾವ ಕ್ಷೇತ್ರ ಬೇಕಾದರೂ ಟಿಕೆಟ್ ಕೊಡುತ್ತೇನೆ ಅಂದರು. ಗೆಲ್ಲಿಸಿಕೊಂಡೇ ಬರುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಬಿಜೆಪಿ ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ, ನಾನು ಪಕ್ಷಕ್ಕೆ ಕೊಡಬೇಕಾದ್ದು ಇದೆ. ಸದಾನಂದಗೌಡ ಕೊಟ್ಟ ಕುದುರೆ ಏರಲಾದವನು ಧೀರನು ಅಲ್ಲ ಶೂರನೂ ಅಲ್ಲ ಅಂತ ವಿಶ್ಲೇಷಣೆ ಆಯಿತು. ನಾನು ನನಗೆ ಕೊಟ್ಟ ಎಲ್ಲಾ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದೀನಿ ಎಂದು ಸಮರ್ಥಿಸಿಕೊಂಡರು.
ದೇಶದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ರಾಜ್ಯದಲ್ಲಿ ಬಿಜೆಪಿ ಜನಪರ ಮತ್ತು ಜನ ಒಪ್ಪಿಕೊಳ್ಳುವ ಪಕ್ಷ ಆಗಬೇಕು. ಶೇ.40 ಕಮಿಷನ್ ಆರೋಪ, ಸ್ವಜನಪಕ್ಷಪಾತ ಆರೋಪ ಬರಬಾರದು. ಮೋದಿಯವರು ಹೇಳಿದಂತೆ ಜಾತಿವಾದ, ಕುಟುಂಬವಾದ ಹಾಗೂ ಭ್ರಷ್ಟಾಚಾರ ಇರಬಾರದು. ಹೀಗಾಗಿ, ಪಾರ್ಟಿಯ ಶುದ್ದಿಕರಣಕ್ಕೆ ವೇಗ ಕೊಡುತ್ತೇನೆ ಎಂದರು.
ನಮ್ಮ ರಾಜ್ಯದಲ್ಲಿ ಬಿಜೆಪಿಯಲ್ಲಿ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ. ಪಕ್ಷದಲ್ಲಿ ತಾನು ತನ್ನ ಮಕ್ಕಳು, ಕುಟುಂಬ, ತನ್ನ ಚೇಳಾಗಳಿಗೆ, ತನ್ನ ಜಾತಿಯವರಿಗೆ ಮಾತ್ರ ಸೀಮಿತ ಎಂಬಂತಾಗಿದೆ. ಮೋದಿಯವರ ಜನಪರ ಪಕ್ಷವಾಗಬೇಕು. ಕುಟುಂಬ ರಾಜಕಾರಣದಿಂದ ಹೊರಬರಬೇಕು ಎಂದು ಹೇಳಿದರು.