ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಕೇಂದ್ರ ಕೃಷಿ ಮಂತ್ರಿ ಶೋಭಾ ಕರಂದ್ಲಾಜೆ ಅವರ ರಾಜಕೀಯ ಭವಿಷ್ಯದ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಉಡುಪಿ– ಚಿಕ್ಕಮಗಳೂರು ಕ್ಷೇತ್ರದಿಂದ ಮರು ಆಯ್ಕೆ ಬಯಸಿದ ಇವರಿಗೆ ಕಾರ್ಯಕರ್ತರು ಮತ್ತು ಸ್ಥಳೀಯ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಚುನಾವಣೆಗೂ ಮೊದಲೇ ಶೋಭಾ ವಿರುದ್ಧ ಗೋ ಬ್ಯಾಕ್ ಶೋಭಾ ಎಂಬ ಚಳವಳಿ ಆರಂಭಗೊಂಡಿತ್ತು. ಹೀಗಾಗಿ ಒತ್ತಡಕ್ಕೆ ಸಿಲುಕಿದ ಕರಂದ್ಲಾಜೆ ಅವರು ತುಮಕೂರು ಇಲ್ಲವೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು ಆದರೆ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಕೆಂಗಣ್ಣಿಗೆ ಗುರಿಯಾಗಿರುವ ಶೋಭಾ ಅವರಿಗೆ ಈ ಬಾರಿ ಟಿಕೆಟ್ ಸಿಗುವುದೇ ಅನುಮಾನ ಎಂಬ ಸುದ್ದಿಗಳು ಹರಡಿದ್ದವು.
ಆದರೆ ಎಂದಿನಂತೆ ಶೋಭಾ ಕರಂದ್ಲಾಜೆ ಅವರ ಕೈ ಹಿಡಿದಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಯಡಿಯೂರಪ್ಪ ಅವರು ತಮ್ಮೆಲ್ಲ ಪ್ರಭಾವ ಬಳಸಿ ತಮ್ಮ ಆಪ್ತರಾದ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬದಲಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದಕ್ಕೆ ಮತ್ತೂ ಒಂದು ಕಾರಣ ಎಂದರೆ ಈ ಹಿಂದೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅತ್ಯಂತ ದೊಡ್ಡ ವಿಧಾನಸಭಾ ಕ್ಷೇತ್ರ ಎಂದೇ ಹೇಳಲಾಗುತ್ತಿರುವ ಯಶವಂತಪುರ ವಿಧಾನಸಭೆ ಕ್ಷೇತ್ರ ದಿಂದ ಶೋಭಾ ಕರಂದ್ಲಾಜೆ ಶಾಸಕರಾಗಿ ಆಯ್ಕೆಯಾಗಿದ್ದರು.
ಇದೇ ಆಧಾರದಲ್ಲಿ ಇದೀಗ ಬೆಂಗಳೂರು ಉತ್ತರ (Bengaluru North) ಲೋಕಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ ಇವರಿಗೆ ಎದುರಾಳಿಯಾಗಿ ಕಾಂಗ್ರೆಸ್ಸಿನಿಂದ ರಾಜ್ಯಸಭೆಯ ಮಾಜಿ ಸದಸ್ಯ ಪ್ರೊ.ರಾಜೀವ್ ಗೌಡ ಸ್ಪರ್ಧಿಸಿದ್ದಾರೆ. ಇಬ್ಬರೂ, ಒಕ್ಕಲಿಗ ಸಮುದಾಯದವರು ಎನ್ನುವುದು ಗಮನಾರ್ಹ. ಜೆಡಿಎಸ್ ಸಾಕಷ್ಟು ಪ್ರಭಾವ ಬಂದಿರುವ ಈ ಕ್ಷೇತ್ರದಲ್ಲಿ ಒಕ್ಕಲಿಗ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿಹೆಚ್ಚು ಮತದಾರರನ್ನು ಹೊಂದಿರುವುದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ.
ಚುನಾವಣಾ ಆಯೋಗ ಪ್ರಕಟಿಸಿರುವ ಮತದಾರರ ಪಟ್ಟಿಯ ಪ್ರಕಾರ ಇಲ್ಲಿ ಪುರುಷರು 16,29,089, ಮಹಿಳೆಯರು 15,44,415, ಇತರರು 594 ಸೇರಿದಂತೆ ಒಟ್ಟು 31,74,098 ಮತದಾರರಿದ್ದಾರೆ.
ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಕೆ.ಆರ್.ಪುರಂ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮೀ ಲೇಔಟ್, ಮತ್ತು ಮಲ್ಲೇಶ್ವರ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರು ಇದ್ದಾರೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಪ್ರತಿನಿಧಿಸುವ ಬ್ಯಾಟರಾಯನಪುರ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಪ್ರತಿನಿಧಿಸುವ ಹೆಬ್ಬಾಳ ಮತ್ತು ಪುಲಿಕೇಶಿನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನ ಈ ಕ್ಷೇತ್ರ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದು ಪಂಚಾಯಿತಿ ಪರಿಣಿತ ಸಿ ನಾರಾಯಣಸ್ವಾಮಿ ಒಮ್ಮೆ ಇಲ್ಲಿಂದ ಜನತಾ ದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಖಂಡಿತ ಬಿಟ್ಟರೆ ಉಳಿದೆಲ್ಲ ಅವಧಿಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು.
ಕ್ಷೇತ್ರ ಪುನರ್ ವಿಂಗಡಣೆಯ ನಂತರ ಇಡೀ ಕ್ಷೇತ್ರದ ಚಿತ್ರಣ ಬದಲಾಗಿ ಇದೀಗ ಅದು ಬಿಜೆಪಿಯ ಭದ್ರ ಕೋಟೆಯಾಗಿ ಪರಿಣಮಿಸಿದೆ ಮತ್ತು ಒಂದು ವಿಶೇಷವೆಂದರೆ ಹೊರಗಿನವರಿಗೇ ಇಲ್ಲಿನ ಮತದಾರ ಮಣೆಹಾಕಿದ್ದಾನೆ. ನಂತರ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಆಯ್ಕೆಯಾಗಿದ್ದರು ಆನಂತರ ಚಿಕ್ಕಮಗಳೂರಿನ ಡಿಬಿ ಚಂದ್ರೇಗೌಡ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಇದಾದ ಬಳಿಕ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದು ಇವರೆಲ್ಲರೂ ಹೊರಗಿನವರು ಎಂಬುದು ವಿಶೇಷ.
ಈಗಲೂ ಕೂಡ ಹೊರಗಿನವರೇ ಈ ಕ್ಷೇತ್ರದಿಂದ ಆಯ್ಕೆ ಬಯಸಿದ್ದಾರೆ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಅವರು ಕರಾವಳಿ ಜಿಲ್ಲೆಯವರಾದರೆ ಕಾಂಗ್ರೆಸ್ಸಿನ ರಾಜೀವ್ ಗೌಡ ಅವರು ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದವರು.
ಹಳೆಯ ಬೆಂಗಳೂರು ಗ್ರಾಮೀಣ ಬೆಂಗಳೂರು ಮತ್ತು ವಲಸಿಗರನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಚರ್ಚಿಸಲು ಹಲವಾರು ವಿಷಯಗಳಿವೆ. ಸರ್ಕಾರಿ ಭೂಮಿ ಒತ್ತುವರಿ, ಅನಧಿಕೃತ ಬಡಾವಣೆಗಳು, ಬಿಡಿಎ ನಿರ್ಮಾಣ ಮಾಡಿರುವ ಬಡಾವಣೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾದ ಹಳ್ಳಿಗಳಲ್ಲಿ ಕುಡಿಯುವ ನೀರು ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಈ ಎಲ್ಲವೂ ಚುನಾವಣೆ ಸಮಯದಲ್ಲಿ ಚರ್ಚೆಗೆ ಬರುತ್ತಿದೆಯಾದರೂ ಅವುಗಳೆ ಚುನಾವಣೆಯ ವಿಷಯಗಳಾಗುವುದು ಅನುಮಾನ.
ಉತ್ತರ ಭಾರತದ ಹಲವು ರಾಜ್ಯಗಳಿಂದ ಬಂದು ನೆಲೆಸಿರುವ ವಲಸಿಗರು ಹೆಚ್ಚಾಗಿರುವ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾಂಗ್ರೆಸ್ ರಾಹುಲ್ ಗಾಂಧಿ ಗ್ಯಾರಂಟಿಗಳು ಮತ್ತು ಇಂಡಿಯಾ ಮೈತ್ರಿಕೂಟದ ಬಗ್ಗೆ ಪುಂಖಾನುಪುಂಖವಾಗಿ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಇವುಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ.
ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಾಗಿರುವ ಪುಲಿಕೇಶಿ ನಗರದಲ್ಲಿ ಕಾಂಗ್ರೆಸ್ ಹೆಚ್ಚಿನ ಪ್ರಾಬಲ್ಯ ಹೊಂದಿದ್ದರೆ ಮಲ್ಲೇಶ್ವರಂ ಮತ್ತು ಮಹಾಲಕ್ಷ್ಮಿ ಲೇಔಟ್ ನಲ್ಲಿ ಬಿಜೆಪಿ ಹೆಚ್ಚಿನ ಪ್ರಾಬಲ್ಯ ಹೊಂದಿರುವುದು ಕಂಡುಬರುತ್ತದೆ. ಕೃಷ್ಣರಾಜಪುರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಇದ್ದರೆ ಹೆಬ್ಬಾಳದಲ್ಲಿ ಕೊಂಚ ಪ್ರಮಾಣಕ್ಕೆ ಕಾಂಗ್ರೆಸ್ ಮುನ್ನಡೆ ಇದೆ. ಬ್ಯಾಟರಾಯನಪುರದಲ್ಲಿ ಬಿಜೆಪಿ ಪರ ಒಲವು ಕಂಡು ಬರುತ್ತಿದೆಯಾದರೂ ಅತಿ ಹೆಚ್ಚಿನ ಮತದಾರರಿರುವ ಯಶವಂತಪುರ ವಿಧಾನಸಭಾ ಕ್ಷೇತ್ರ ನಿರ್ಣಾಯಕವಾಗಲಿದೆ.
ಇಲ್ಲಿ ಬಿಜೆಪಿಯಿಂದ ಶಾಸಕರಾಗಿರುವ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಬೆಂಬಲವನ್ನು ಬಿಜೆಪಿ ನಿರೀಕ್ಷಿಸುವಂತಿಲ್ಲ. ಆದರೆ ಶೋಭಾ ಕರಂದ್ಲಾಜೆ ಒಮ್ಮೆ ಇಲ್ಲಿಂದ ವಿಧಾನಸಭೆಗೆ ಆಯ್ಕೆಯಾಗಿದ್ದನ್ನು ಕೂಡ ಮರೆಯುವಂತಿಲ್ಲ.
ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರೆಂಟಿ ಯೋಜನೆಗಳ ಅತಿಹೆಚ್ಚಿನ ಫಲಾನುಭವಿಗಳು ಇರುವ ಈ ಕ್ಷೇತ್ರದಲ್ಲಿ ಮತದಾರ ಇಲ್ಲಿಯವರೆಗೆ ತನ್ನ ಗುಟ್ಟು ಬಿಟ್ಟು ಕೊಟ್ಟಿಲ್ಲ ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವ ವಿಶ್ವಾಸ ಹೊಂದಿದ್ದರೆ ಮೊದಲ ಬಾರಿಗೆ ಕಾಂಗ್ರೆಸ್ ಈ ಭದ್ರಕೋಟೆಯನ್ನು ಭೇದಿಸುವ ಉತ್ಸಾಹದಲ್ಲಿದೆ.