ಚಾಮರಾಜನಗರ ಲೋಕಸಭಾ ಕ್ಷೇತ್ರ ದಶಕಗಳಿಂದ ಪರಿಶಿಷ್ಟ ಸಮುದಾಯಕ್ಕೆ ಮೀಸಲಾದ ಕ್ಷೇತ್ರ. ಪಕ್ಷ ನಿಷ್ಟೆಗಿಂತಲೂ ವ್ಯಕ್ತಿ ನಿಷ್ಠೆಗೆ ಹೆಸರಾದ ಈ ಕ್ಷೇತ್ರ ಕಾಂಗ್ರೆಸ್ ‘ಭದ್ರಕೋಟೆ’ ಎನ್ನಲಾದರೂ ಹಿರಿಯ ನಾಯಕ ವಿ.ಶ್ರೀನಿವಾಸ ಪ್ರಸಾದ್ ದಾಖಲೆಯ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್, ಜೆಡಿಯು,ಬಿಜೆಪಿ
ಸೇರಿದಂತೆ ಬೇರೆ ಬೇರೆ ಪಕ್ಷಗಳಿಂದ ಗೆದ್ದವರು ದಲಿತ ಸಮುದಾಯದ ದೊಡ್ಡ ನಾಯಕರು. ಕ್ಷೇತ್ರದ ತುಂಬೆಲ್ಲ ಕಾರ್ಯಕರ್ತರು, ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.
1962ರಿಂದ ಮೀಸಲು ಲೋಕಸಭಾ ಕ್ಷೇತ್ರವಾಗಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂದೇ ಗುರುತಿಸಿಕೊಂಡಿದೆ. 1991ರಲ್ಲಿ ಮೊದಲ ಬಾರಿಗೆ ಬಿಜೆಪಿ ಇಲ್ಲಿ ಸ್ಪರ್ಧಿಸಿತ್ತು. ಅಲ್ಲಿಂದ 2019ರವರೆಗೂ ಗೆಲುವು ಅದಕ್ಕೆ ಗಗನ ಕುಸುಮವಾಗಿತ್ತು.
ಆದರೆ ಕಳೆದ ಬಾರಿ ಸಿದ್ದರಾಮಯ್ಯ ಅವರೊಂದಿಗಿನ ಮುನಿಸಿನ ಕಾರಣಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಬಿಜೆಪಿ ಗೆದ್ದು ಖಾತೆ ತೆರೆದಿತ್ತು.
ಚಾಮರಾಜನಗರ ಕ್ಷೇತ್ರದ ವ್ಯಾಪ್ತಿಗೆ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳು ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು, ಟಿ.ನರಸೀಪುರ, ವರುಣಾ, ಹೆಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರಗಳು ಬರಲಿವೆ.
ಚಾಮರಾಜನಗರ ಕ್ಷೇತ್ರದಲ್ಲಿ ಒಟ್ಟು 17,57,61 ಮತದಾರರಿದ್ದಾರೆ.
ಇದರಲ್ಲಿ 8,69,389 ಪುರುಷರಾಗಿದ್ದರೆ, 8,88,133 ಮಹಿಳಾ ಮತದಾರರಿದ್ದಾರೆ. ಜತೆಗೆ 114 ಮತದಾರರು ತೃತೀಯಲಿಂಗಿಗಳಾಗಿದ್ದಾರೆ.ಈ ಮೂಲಕ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ.
ಸದ್ಯದ ಪರಿಸ್ಥಿತಿ ಹಿನ್ನೆಲೆಯಲ್ಲಿ ನೋಡಿದಾಗ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಪ್ರಮಾಣದಲ್ಲಿ ಅನುಕೂಲಕರ ಅಂಶಗಳು ಕಂಡು ಬರುತ್ತವೆ.ಇಲ್ಲಿನ 8 ಕ್ಷೇತ್ರಗಳಲ್ಲಿ 7ರಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಜೊತೆಗೆ ಹಿಂದುಳಿದ ಮತ್ತು ಅಲ್ಪಸಂಖ್ಯಾತ
ಮತಗಳೂ ದೊಡ್ಡ ಪ್ರಮಾಣದಲ್ಲಿವೆ.ಮುಖ್ಯಮಂತ್ರಿ ಸಿದ್ದರಾಮಯ್ಯರ ಅಭಿಮಾನಿ ಬಳಗವೂ ದೊಡ್ಡ ಪ್ರಮಾಣದಲ್ಲಿದೆ.
ಬಿಜೆಪಿಗೂ ಅಂತಹುದೇ ಅನುಕೂಲಕರ ಅಂಶಗಳಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದಲ್ಲಿ ಸಕ್ರಿಯವಾಗಿರುವುದು ದೊಡ್ಡ ಬಲವಾಗಿದೆ.ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಮತಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿದ್ದು ಜೆಡಿಎಸ್ ಜೊತೆಗಿನ ಬಿಜೆಪಿ ಮೈತ್ರಿ ಪರಿಣಾಮ ಬೀರಲಿದೆ.ನರೇಂದ್ರ ಮೋದಿ ಅವರ ನಾಮಬಲ ಪಕ್ಷದ ಅಭ್ಯರ್ಥಿಗೆ ಶ್ರೀರಕ್ಷೆ.
ಇಂತಹ ಲೆಕ್ಕಾಚಾರಗಳೊಂದಿಗೆ ಈ ಬಾರಿ ಕಾಂಗ್ರೆಸ್, ಸಚಿವ ಎಚ್.ಸಿ.ಮಹದೇವಪ್ಪ ಅವರ ಮಗ ಸುನಿಲ್ ಬೋಸ್‌ಗೆ ಟಿಕೆಟ್ ನೀಡಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿಯ ಎಸ್.ಬಾಲರಾಜು ಕಣಕ್ಕಿಳಿದಿದ್ದಾರೆ. ಬಿಎಸ್‌ಪಿಯಿಂದ ಕೃಷ್ಣಮೂರ್ತಿ ಸ್ಪರ್ಧಿಸಿದ್ದಾರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಸುತ್ತು ಹಾಕಿದಾಗ ಕಾಂಗ್ರೆಸ್– ಬಿಜೆಪಿ ನಡುವೆ ಸಮಬಲದ ಹೋರಾಟ ಏರ್ಪಟ್ಟಿದೆ. ಬಾಲರಾಜು ಮಾಜಿ ಶಾಸಕ. ರಾಜಕೀಯ ಅನುಭವಿ.ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ರಾಜಶೇಖರ ಮೂರ್ತಿ ಅವರ ನೆಚ್ಚಿನ ಶಿಷ್ಯ. ಹೀಗಾಗಿ ಕಾಂಗ್ರೆಸ್ ನಲ್ಲೂ ಗುರುತಿಸಲ್ಪಡುವ ಇವರು ದಿವಂಗತ ಧೃವ ನಾರಾಯಣ್ ಅವರೊಂದಿಗೆ ಉತ್ತಮ ಒಡನಾಟ ಇದ್ದುದರಿಂದ, ಕಾಂಗ್ರೆಸ್‌ನಲ್ಲಿ ಅವರಿಗೆ ಉತ್ತಮ ಸ್ನೇಹಿತರಿದ್ದಾರೆ. ಧ್ರುವನಾರಾಯಣ ಅಭಿಮಾನಿಗಳು ಇವರನ್ನು ‘ಬಾಲಣ್ಣ’ ಎಂದೇ ಕರೆಯುತ್ತಾರೆ. ಆ ಸ್ನೇಹ ಮತಗಳಾಗಿ ಪರಿವರ್ತನೆಯಾಗಲಿವೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಮುಖಂಡರಿದ್ದಾರೆ.
ಸುನಿಲ್ ಬೋಸ್ ಚುನಾವಣಾ ರಾಜಕೀಯಕ್ಕೆ ಹೊಸಬರು. ಕ್ಷೇತ್ರದಾದ್ಯಂತ ಈಗಷ್ಟೇ ಪರಿಚಯವಾಗುತ್ತಿದ್ದಾರೆ. ತಂದೆ ಮಹದೇವಪ್ಪ ವರ್ಚಸ್ಸಿನ ನೆರಳಿನಲ್ಲೇ ನಡೆಯಬೇಕು. ಸಿ.ಎಂ ಸಿದ್ದರಾಮಯ್ಯನವರಿಗೂ ಪ್ರತಿಷ್ಠೆಯ ಕಣವಾಗಿದ್ದು, ಗೆಲುವಿಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಸಂಸದ ವಿ.ಶ್ರೀನಿವಾಸ ಪ್ರಸಾದ್ ಬೆಂಬಲಿಗರು ಕಾಂಗ್ರೆಸ್‌ನತ್ತ ಮುಖ ಮಾಡಿರುವುದು ಬಿಜೆಪಿಗೆ ತಲೆನೋವು ತಂದಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಎಡಗೈ ಸಮುದಾಯದ ಎಂ.ಶಿವಣ್ಣ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಮೋದಿ ವರ್ಚಸ್ಸು, ಯಡಿಯೂರಪ್ಪ ಅವರ ಪ್ರಭಾವ, ಜೆಡಿಎಸ್ ಮೈತ್ರಿ ಬಾಲರಾಜು ಶಕ್ತಿಯಾಗಿದ್ದರೆ, ಕ್ಷೇತ್ರದಲ್ಲಿ 7 ಶಾಸಕರು ಇರುವುದು, ಗ್ಯಾರಂಟಿಗಳ ಬಲ, ತಂದೆ ಮಹದೇವಪ್ಪ ಪ್ರಭಾವದ ಬಲ ಬೋಸ್ ಬೆನ್ನಿಗಿದೆ
ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ 2019ರ Electionಯಲ್ಲಿ ಗೆಲ್ಲುವ ಮೂಲಕ, ಮೊದಲ ಬಾರಿ ಖಾತೆ ತೆರೆದಿರುವ ಬಿಜೆಪಿಗೆ ಈ ಬಾರಿ ಕ್ಷೇತ್ರ ಉಳಿಸಿಕೊಳ್ಳುವ ಬಹುದೊಡ್ಡ ಸವಾಲು ಇದೆ.
ಕಾಂಗ್ರೆಸ್‌ನ ಅಭ್ಯರ್ಥಿ ಸುನೀಲ್ ಬೋಸ್ ಅವರು ರಾಜಕಾರಣದಲ್ಲಿ ಹೊಸ ಮುಖ. ವೈಯಕ್ತಿಕ ವರ್ಚಸ್ಸು ಹೆಚ್ಚಿಲ್ಲದಿರುವುದು ತನಗೆ ಅನುಕೂಲವಾಗಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೂ ಕ್ಷೇತ್ರದ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಅಭ್ಯರ್ಥಿಯ ಗೆಲುವಿಗೆ ಸತತ ರಣತಂತ್ರ ರೂಪಿಸುತ್ತಿದ್ದಾರೆ.ಗ್ಯಾರಂಟಿಗಳು ಕೈ ಹಿಡಿಯಲಿವೆ ಎಂಬ ಲೆಕ್ಕಾಚಾರದಲ್ಲಿದ್ದಾರೆ.ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಜನಪ್ರಿಯತೆ ಮತ್ತು ಮೋದಿ ಅಲೆಯ ಹೆಸರಲ್ಲಿ ಚುನಾವಣೆ ನಡೆಯುತ್ತಿದ್ದು ಯಾರು ಗೆಲುವಿನ ದಡ ಸೇರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.